Advertisement

ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ವ್ಯವಸ್ಥೆ ಕಲ್ಪಿಸಿದ್ದ ಒಡೆಯರ್‌

02:31 PM Jun 04, 2018 | |

ಮೈಸೂರು: ರಾಜ ಪ್ರಭುತ್ವದಲ್ಲೇ ಪ್ರಜಾಪ್ರಭುತ್ವದ ಕನಸು ಕಂಡು ಜನಸಾಮಾನ್ಯರಿಗೆ ಮತದಾನದ ಹಕ್ಕು ನೀಡಿ ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ ಎಂದು ಲೇಖಕ ಬನ್ನೂರು ಕೆ.ರಾಜು ಹೇಳಿದರು.

Advertisement

ನಗರದ ಅರಮನೆ ದ್ವಾರದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ 134ನೇ ಜಯಂತಿ ಕಾರ್ಯಕ್ರಮದಲ್ಲಿ ನಾಲ್ವಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮೈಸೂರು ಸಂಸ್ಥಾನದ ಮಹಾರಾಜರಲ್ಲಿ ಅಭಿವೃದ್ಧಿಯ ಹರಿಕಾರರು. ನಾಲ್ವಡಿ ಕೃಷ್ಣರಾಜ ಒಡೆಯರ್‌, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಶಿಕ್ಷಣವನ್ನು ನೀಡಿದವರು. ಸಾಮಾಜಿಕ ನ್ಯಾಯಕ್ಕಾಗಿ ಮೀಸಲು ವ್ಯವಸ್ಥೆಯನ್ನು ಅಂದೇ ಕಲ್ಪಿಸಿದ್ದರು ಎಂದು ಸ್ಮರಿಸಿದರು. 

ಕೈಗಾರಿಕೆಗಳ ಸ್ಥಾಪನೆ: ಕನ್ನಂಬಾಡಿ ಕಟ್ಟೆ ನಿರ್ಮಾಣ, ಶಿವನ ಸಮುದ್ರ ಜಲ ವಿದ್ಯುತ್‌ ಯೋಜನೆ, ರೇಷ್ಮೆ ನೇಯ್ಗೆ ಕಾರ್ಖಾನೆ, ಶ್ರೀಗಂಧದ ಎಣ್ಣೆ ಕಾರ್ಖಾನೆ ಸೇರಿದಂತೆ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೊದಲಿಗರು ಎಂದು ಬಣ್ಣಿಸಿದರು. 

ಮಾದರಿ ಆಡಳಿತ: ದಲಿತರು, ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದ ನಾಲ್ವಡಿ ಒಡೆಯರ್‌, ಮೀಸಲಾತಿಯನ್ನು ಜಾರಿಗೆ ತಂದು ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸಿದರು. ವೇಶ್ಯಾವಾಟಿಕೆ, ಬಾಲ್ಯವಿವಾಹದಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಉತ್ತಮ ಆಡಳಿತ ವ್ಯವಸ್ಥೆ ಜಾರಿಗೆ ತಂದರು.

Advertisement

ದೇಶದ ಇತರೆ ಸಂಸ್ಥಾನಗಳ ರಾಜರಿಗೆ ಮಾದರಿಯಾಗಿ ಆಡಳಿತ ವ್ಯವಸ್ಥೆ ರೂಪಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿಯನ್ನು ಸರ್ಕಾರವೇ ಆಚರಿಸುವಂತಾಗಬೇಕು. ಅವರ ಉನ್ನತ ವ್ಯಕ್ತಿತ್ವ, ಆಡಳಿತ ಹಾಗೂ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದರು.

ದೂರದೃಷ್ಟಿ ಫ‌ಲ: ಸಮಾಜ ಸೇವಕ ಡಾ.ರಘುರಾಂ ವಾಜಪೇಯಿ ಮಾತನಾಡಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ದೂರದೃಷ್ಟಿತ್ವ ಚಿಂತನೆ ಇಂದಿನ ಜನರಲ್ಲಿ ಕಂಡು ಬರುವುದಿಲ್ಲ. ನೂರು ವರ್ಷಗಳ ಹಿಂದೆ ಮಾಡಿದ ದೂರದೃಷ್ಟಿ ಫ‌ಲವಾಗಿ ಮೈಸೂರು ಇಂದು ಜಗದ್ವಿಖ್ಯಾತಿ ಗಳಿಸಿದೆ. ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಕೆಲಸ ಆಗಬೇಕಿದೆ ಎಂದರು.

ಕಾರ್ಯಕ್ರಮದ ಬಳಿಕ ಮೈಸೂರು ಅರಮನೆಗೆ ಭೇಟಿ ನೀಡಿದ ಪ್ರವಾಸಿಗರಿಗೆ ಸಿಹಿ ವಿತರಿಸಲಾಯಿತು. ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್‌ ಲೋಕೇಶ್‌ಗೌಡ, ಶಾಂತಮೂರ್ತಿ, ಎಂ.ಎನ್‌.ದೊರೆಸ್ವಾಮಿ, ಆರ್‌.ಪ್ರಜೀಶ್‌, ಮನುನಾಯಕ್‌, ಸುನೀಲ್‌ ಕುಮಾರ್‌, ಹರೀಶ್‌ ಅಂಕಿತ್‌, ಶಾಂತರಾಜೇ ಅರಸ್‌, ಅಕ್ಷಯ್‌, ಜಯೇಂದ್ರ, ರಾಜಶೇಖರ್‌, ಬಸವಣ್ಣ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next