Advertisement

ಅಭಿಮಾನದ ಹಾಡು

06:00 AM Nov 02, 2018 | Team Udayavani |

ಇತ್ತೀಚೆಗೆ ಕೆಲವು ಚಿತ್ರಗಳು ತಮ್ಮ ಕಥಾಹಂದರದ ಮೂಲಕ ಸದ್ದು ಮಾಡಿದರೆ, ಇನ್ನು ಕೆಲವು ಚಿತ್ರಗಳು ತಮ್ಮ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿವೆ. ತೀರಾ ಚಿತ್ರ-ವಿಚಿತ್ರ ಎನಿಸುವ ಶೀರ್ಷಿಕೆಗಳು ಚಿತ್ರಗಳ ಒಮ್ಮೆಲೆ ಪ್ರೇಕ್ಷಕರಿಗೆ ಅರ್ಥವಾಗದ್ದಿರೂ, ಒಂದು ಕ್ಷಣ ನೋಡುಗರ ಮನಸೆಳೆಯುವುದರಲ್ಲಂತೂ ಅನುಮಾನವಿಲ್ಲ. ಇಂತಹ ಶೀರ್ಷಿಕೆಗಳ ಸಾಲಿಗೆ ಇತ್ತೀಚೆಗೆ ಸೇರುವ ಚಿತ್ರ “ಎ2ಎ2ಎ’. ಯಾವುದೇ ಸದ್ದಿಲ್ಲದೆ ತನ್ನ ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ಎ2ಎ2ಎ’ ಚಿತ್ರ ಇದೀಗ ತನ್ನ ಹಾಡುಗಳನ್ನು ಬಿಡುಗಡೆಗೊಳಿಸುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. 

Advertisement

ಇತ್ತೀಚೆಗೆ “ಎ2ಎ2ಎ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಖ್ಯಾತ ಹೃದ್ರೋಗ ತಜ್ಞ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ ಮಂಜುನಾಥ್‌, ಕಿದ್ವಾಯಿ ಆಸ್ಪತ್ರೆಯ ನಿರ್ದೇಶರು ಹಾಗೂ ಹಿರಿಯ ನಿರ್ದೇಶಕ ನಂಜುಡೇ ಗೌಡ ಮೊದಲಾದವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಪೆನ್‌ ಡ್ರೈವ್‌ ಮೂಲಕ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. 

ಇನ್ನೊಂದು ವಿಶೇಷವೆಂದರೆ, ಈ ಚಿತ್ರದ ಮೂಲಕ ನಾಯಕ ಪ್ರತಾಪ್‌, ವಿಷ್ಣುವರ್ಧನ್‌ ಅಂತ ಹೆಸರು ಬದಲಿಸಿ ಕೊಂಡು ಕನ್ನಡ ಚಿತ್ರರಂಗಕ್ಕೆ ಪ್ರವೇಶಪಡೆಯುತ್ತಿದ್ದಾರೆ. ನಿಜ ಜೀವನದಲ್ಲೂ ನಟ ಸಾಹಸಿಂಹ ವಿಷ್ಣುವರ್ಧನ್‌ ಅಭಿಮಾನಿಯಾಗಿರುವ ಪ್ರತಾಪ್‌ ಅಲಿಯಾಸ್‌ ವಿಷ್ಣುವರ್ಧನ್‌, “ಎ2ಎ2ಎ’ ಚಿತ್ರದಲ್ಲೂ ವಿಷ್ಣುವರ್ಧನ್‌ ಅಭಿಮಾನಿಯಾಗಿ ವೈದ್ಯಕೀಯ ವಿದ್ಯಾರ್ಥಿಯ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕನಿಗೆ ಮೂರು ವಿಭಿನ್ನ ಶೇಡ್‌ನ‌ ಪಾತ್ರಗಳಿದ್ದು, ತುಂಬಾ ಸವಾಲಿನ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಚಿತ್ರದಲ್ಲಿ ಅಮೃತಾ ರಾಜ್‌ ವೈದ್ಯಕೀಯ ವಿದ್ಯಾರ್ಥಿನಿ ಪಾತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ .ಈ ಹಿಂದೆ  “ಪೇಪರ್‌ ದೋಣಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಆರ್‌.ಕೆ ನಾಥ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡುವ ನಿರ್ದೇಶಕರು, ಕನ್ನಡದ ಹಿಟ್‌ ಚಿತ್ರಗಳಾದ ಜೋಗಿ, ಉಪೇಂದ್ರ, ಹುಚ್ಚ, ಬಂಧನ, ಕಸ್ತೂರಿ ನಿವಾಸ ಚಿತ್ರಗಳನ್ನು ಮಾದರಿಯನ್ನಾಗಿ ಇಟ್ಟು ಕೊಂಡೆ “ಎ2ಎ2ಎ ‘ಸಿನಿಮಾ ಮಾಡಿರುವುದಾಗಿ ಹೇಳುತ್ತಾರೆ. ಸದ್ಯ ಹಾಡುಗಳ ಮೂಲಕ ಹೊರಬಂದಿರುವ “ಎ2ಎ2ಎ’ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಚಿತ್ರಕ್ಕೆ ಹಿತನ್‌ ಹಾಸನ್‌ ಸಂಗೀತವಿದೆ. ಇದರಲ್ಲಿ ಒಂದು ಹಾಡನ್ನು ಸಾಹಸ ಸಿಂಹ ವಿಷ್ಣುವರ್ಧನ್‌ ಅವರಿಗಾಗಿಯೇ ವಿಶೇಷವಾಗಿ ಸಂಯೋಜಿಸಲಾಗಿದೆ. ಈ ಹಾಡು ವಿಷ್ಣು ಅಭಿಮಾನಿಗಳಿಗೆ ಇಷ್ಟವಾಗುತ್ತೆ ಎನ್ನುವುದು ಚಿತ್ರತಂಡದ ನಂಬಿಕೆ. ಹಿರಿಯ ನಟಿ ರೂಪಾದೇವಿ ಬಹು ದಿನಗಳ ನಂತರ ಈ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. “ಎ2ಎ2ಎ’ ಚಿತ್ರಕ್ಕೆ ಆದಿ ,ಅಂತ್ಯ ,ಆರಂಭ ಎಂಬ ಅಡಿಬರಹವಿದ್ದು, ಡಿ.ಜೆ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರತಂಡದ ಯೋಜನೆಯಂತೆ ಎಲ್ಲ ನಡೆದರೆ ಮುಂಬರುವ ಡಿಸೆಂಬರ್‌ ವೇಳೆಗೆ “ಎ2ಎ2ಎ’ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next