Advertisement

ವಿಂಗ್‌ ಕಮಾಂಡರ್‌ ಅಭಿನಂದನ್‌ ಮೇಲಿನ ಅಭಿಮಾನ ಇಮ್ಮಡಿ

06:46 AM Mar 03, 2019 | |

ಬೆಂಗಳೂರು: ಪಾಕಿಸ್ತಾನದ ಕಪಿಮುಷ್ಠಿಯಿಂದ ಪಾರಾಗಿ ಬಂದಿರುವ ಅಭಿನಂದನ್‌ ವರ್ಧಮಾನ್‌ ಅವರು ಕಲಿತ ಶಾಲೆಯಲ್ಲಿ ಇದೀಗ ಸಡಗರವೋ ಸಡಗರ. ಐಎಎಫ್ನ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಮತ್ತು ಅವರ ಪತ್ನಿ ತಾನ್ವಿ ಉದ್ಯಾನನಗರಿಯಲ್ಲೇ ಇರುವ ಎನ್‌ಎಎಲ್‌ (ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರೀಸ್‌) ಕೇಂದ್ರೀಯ ವಿದ್ಯಾಲಯದಲ್ಲಿ ಎರಡು ವರ್ಷ ಕಲಿತಿದ್ದರು.

Advertisement

ಸದ್ಯ ಈ ಶಾಲೆಯಲ್ಲಿ ಇವರಿಬ್ಬರಿಗೆ ಕಲಿಸಿದ ಗುರುಗಳು ಯಾರೂ ಇಲ್ಲ. ಆದರೆ, ಅವರನ್ನು ತುಂಬಾ ಹತ್ತಿರದಿಂದ ನಾನು ನೋಡಿದ್ದೇನೆ. ಪಾಕಿಸ್ತಾನದಿಂದ ದೇಶಕ್ಕೆ ವಾಪಸ್ಸಾಗಿದ್ದುದನ್ನು ನೋಡಿದಾಗ, “ತಪ್ಪಿಸಿಕೊಂಡು ಹೋದ ಮಗ ಮನೆಗೆ ಹಿಂತಿರುಗಿದಾಗ ಆಗುವಷ್ಟು ಸಂತೋಷ ಆಯಿತು. ಇಡೀ ದೇಶ ಈಗ ಅವರನ್ನು ಹೆಮ್ಮೆಯಿಂದ ನೋಡುತ್ತಿದೆ. ಅವರು ಈ ಶಾಲೆಯ ವಿದ್ಯಾರ್ಥಿ ಎಂದಾಗ ಸಹಜವಾಗಿಯೇ ಅಭಿಮಾನ ಇಮ್ಮಡಿಯಾಗುತ್ತದೆ’ ಎಂದು ಎನ್‌ಎಎಲ್‌ ಕೆವಿಯ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಮುಖ್ಯಸ್ಥ ಆರ್‌.ಜಿ ಭಟ್‌ ಸಂತಸ ಹಂಚಿಕೊಂಡರು. 

ಫೇರ್‌ವೆಲ್‌ ಪಾರ್ಟಿಯ ಮೆಲುಕು: ನನ್ನ ಮಗ ಆನಂದ ಶಂಕರ್‌, ಅಭಿನಂದನ್‌ ವರ್ಧಮಾನ್‌ಗಿಂತ ಒಂದು ವರ್ಷ ದೊಡ್ಡವನು. ಅಭಿನಂದನ್‌ ಪಾಕಿಸ್ತಾನ ವಶದಲ್ಲಿದ್ದಾನೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ನೋಡಿ ಅಮೆರಿಕದಲ್ಲಿದ್ದ ನನ್ನ ಮಗ ಫೋನ್‌ ಮಾಡಿ, “ಅಮ್ಮ ಅಭಿನಂದನ್‌ ಬೇರೆ ಯಾರೂ ಅಲ್ಲ, ನನ್ನ ಜೂನಿಯರ್‌. ಸ್ವಲ್ಪ ಟುಮ್‌ ಟುಮ್‌ ಆಗಿ ಇದ್ದ’ ಎಂದು ಹೇಳಿದ. ನನಗೆ ನೆನಪಿಗೆ ಬರಲಿಲ್ಲ.

ಆಗ ಮತ್ತೆ ಆನಂದ ಶಂಕರ್‌, “12ನೇ ತರಗತಿಯಲ್ಲಿದ್ದಾಗ ನಮಗೆ ನೀಡಿದ ಫೇರ್‌ವೆಲ್‌ ಪಾರ್ಟಿಯ ಫೋಟೋಗಳಲ್ಲಿ ಅಭಿನಂದನ್‌ ಇದ್ದಾನೆ. ಆಲ್ಬಂ ತೆಗೆದುನೋಡು’ ಎಂದು ಹೇಳಿದ. ಆಗ ಗೊತ್ತಾಯಿತು ಎಂದು ಇದೇ ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಶಾಲಾ ಶಿಕ್ಷಕಿಯೂ ಆಗಿರುವ ದುರ್ಗಾ ಶಿವಶಂಕರ್‌ ಮೆಲುಕುಹಾಕಿದರು. ಅಭಿನಂದನ್‌ ಸುರಕ್ಷಿತವಾಗಿ ಹಿಂತಿರುಗಲೆಂದು ಆನಂದ ಸಂಧ್ಯಾವಂದನೆ ಮಾಡಿರುವುದಾಗಿಯೂ ಫೋನ್‌ನಲ್ಲಿ ತಿಳಿಸಿದ ಎಂದೂ ನೆನಪಿಸಿಕೊಂಡರು. 

ಅಷ್ಟೇ ಅಲ್ಲ, ಅಭಿನಂದನ್‌ ಅವರ ತಂದೆ ವರ್ಧಮಾನ್‌ ಡಿಆರ್‌ಡಿಒದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ನೆರವಿನಿಂದ ನನ್ನ ಮಗ ಆನಂದ ಶಂಕರ್‌ ಅದೇ ಡಿಆರ್‌ಡಿಒನಲ್ಲಿ ಎಂಜಿನಿಯರಿಂಗ್‌ ಪ್ರಾಜೆಕ್ಟ್ ಪೂರೈಸಿದ್ದ ಎಂದು ಹೇಳಿದರು. ಅಂದಹಾಗೆ ತಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಶತ್ರು ದೇಶದ ವಶದಲ್ಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅವರು ಹಿಂತಿರುಗಲೆಂದು ವಿದ್ಯಾಲಯದ ಆವರಣದಲ್ಲಿ ಈಚೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಾರ್ಥನೆ ಕೂಡ ಸಲ್ಲಿಸಿದರು. 

Advertisement

ಶಾಲೆಗೆ ಅತಿಥಿಯಾಗಿ ಅಭಿನಂದನ್‌?: ಶಾಲೆಯ ಹಳೆಯ ವಿದ್ಯಾರ್ಥಿ ಅಭಿನಂದನ್‌ ಈಗ ದೇಶದ ರಿಯಲ್‌ ಹೀರೋ. ಅವರನ್ನು ಶಾಲಾ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಆಮಂತ್ರಿಸಲು ಉದ್ದೇಶಿಸಲಾಗಿದೆ ಎಂದು ಪ್ರಾಂಶುಪಾಲ ಎಂ. ಮನೋಹರನ್‌ “ಉದಯವಾಣಿ’ಗೆ ತಿಳಿಸಿದರು. ಅಭಿನಂದನ್‌ ಶಾಲೆಯ ವಿದ್ಯಾರ್ಥಿ ಆಗಿದ್ದರು ಎಂಬುದು ನಮಗೆ ಹೆಮ್ಮೆ. ಮುಂದಿನ ದಿನಗಳಲ್ಲಿ ನೂರಾರು ಅಭಿನಂದನ್‌ಗಳು ಈ ಶಾಲೆಯಲ್ಲಿ ರೂಪುಗೊಳ್ಳಲು ಪ್ರೇರಣೆ ಆಗಲಿದೆ. ಆದ್ದರಿಂದ ಶಾಲಾ ವಾರ್ಷಿಕೋತ್ಸವದಲ್ಲಿ ಅತಿಥಿಯನ್ನಾಗಿ ಆಮಂತ್ರಿಸಲು ಉದ್ದೇಶಿಸಲಾಗಿದೆ ಎಂದರು.

ಅಭಿ ಮೀಸೆ ಟ್ರೆಂಡ್‌: ವಿಂಗ್‌ ಕಮಾಂಡರ್‌ ಅಭಿನಂದನ್‌ ಬಗ್ಗೆ ದೇಶಾದ್ಯಂತ ಮೆಚ್ಚುಗೆಯ ಸುರಿಮಳೆಯ ಮಧ್ಯೆಯೇ ಅವರ ಮೀಸೆಯೂ ಜನಪ್ರಿಯವಾಗಿದೆ. ಪಾಕಿಸ್ತಾನದಿಂದ ಅವರು ವಾಪಸಾಗುತ್ತಿದ್ದಂತೆಯೇ ಅಭಿನಂದನ್‌ ಶೈಲಿಯ ಮೀಸೆ ಬಿಡುವ ಹೊಸ ಟ್ರೆಂಡ್‌ ಶುರುವಾಗಿದೆ. ಈ ಮೀಸೆ ಈಗ ವಾಯುಪಡೆಯ ಸಾಹಸ ಮತ್ತು ಧೈರ್ಯಕ್ಕೆ ಮೆಚ್ಚುಗೆ ಸೂಚಿಸುವ ದ್ಯೋತಕವೂ ಆಗಿದೆ. 

ಯಾಕೆಂದರೆ, ಪಾಕಿಸ್ತಾನ ಸೇನೆ ವಶಪಡಿಸಿಕೊಂಡಿದ್ದಾಗ ಬಿಡುಗಡೆ ಮಾಡಿದ ಮೊದಲ ವಿಡಿಯೋದಲ್ಲಿ ಅವರ ಮಾತಿನ ಶೈಲಿ ಹಾಗೂ ವಾಘಾ ಗಡಿಯಿಂದ ಅವರು ನಡೆದು ಬಂದ ಶೈಲಿ  ಸ್ಫೂರ್ತಿಯಾಗಿದೆ. ಎಲ್ಲ ವಿಡಿಯೋಗಳಲ್ಲೂ ಅವರ ಮೀಸೆಯೇ ಹೆಚ್ಚು ಪ್ರಚಾರ ಪಡೆದಿದ್ದಂತೂ ಸುಳ್ಳಲ್ಲ. ಸಾಮಾಜಿಕ ಮಾಧ್ಯಮಗಳಲ್ಲಂತೂ ಅವರ ಮೀಸೆ ಭಾರೀ ವೈರಲ್‌ ಆಗಿದೆ. ಅವರಂತೆಯೇ ಮೀಸೆ ಬಿಟ್ಟು, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದು ಈಗ ಹೊಸ ಟ್ರೆಂಡ್‌  ಆಗಿದೆ.

* ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next