Advertisement
ನಂದಿನಿ ತಟದಲ್ಲಿರುವ ಚೇಳಾಯಿರು, ಪಾವಂಜೆಯ ನಿವಾಸಿಗಳೂ ಕುಡಿಯುವ ನೀರಿನ ಅಭಾವದಿಂದ ಬಳಲುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ನಂದಿನಿ ನದಿಯ ಹತ್ತಿರದ ಗ್ರಾಮ ಪಂಚಾಯತ್‌ಗಳು ಈಗಲೇ ಇನ್ನಿಲ್ಲದೆ ಕಸರತ್ತು ನಡೆಸುತ್ತಿವೆ.
ಹಳೆಯಂಗಡಿಗೆ ಮಂಗಳೂರು ಮಹಾ ನಗರ ಪಾಲಿಕೆಯಿಂದ ಬರುವ ತುಂಬೆ ನೀರೇ ಸಾಕಷ್ಟು ಆಸರೆಯಾಗಿದೆ. ಪಾವಂಜೆ, ಸಸಿಹಿತ್ಲು ಪ್ರದೇಶಕ್ಕೆ ಇದೇ ನೀರು ಅಗತ್ಯವಾಗಿದೆ. ಇನ್ನುಳಿದಂತೆ ತನ್ನದೇ ಆದ ಕೊಳವೆ ಪಂಪ್‌ಗಳನ್ನು ಹೊಂದಿದೆ. ತುಂಬೆ ನೀರಿನ ಪೈಪ್‌ಲೈನ್ ಹಾದು ಹೋಗಿದ್ದರೂ ಪಡುಪಣಂಬೂರು ಗ್ರಾ.ಪಂ.ಗೆ ಈ ನೀರು ಲಭ್ಯವಿಲ್ಲ. ಹೀಗಾಗಿ, ತನ್ನದೇ ವ್ಯವಸ್ಥೆಯಲ್ಲಿ ಗ್ರಾಮಸ್ಥರ ದಾಹ ನೀಗಿಸಲು ಹೆಣಗಾಡುತ್ತಿದೆ. ಇತ್ತೀಚೆಗೆ ಎರಡು ಟ್ಯಾಂಕ್‌ಗಳನ್ನು ಕಳೆದುಕೊಂಡು ನೀರಿನ ವ್ಯವಸ್ಥೆಗೆ ದೊಡ್ಡ ಗಂಡಾಂತರ ಎದುರಾಗಿದೆ. ಚೇಳಾಯಿರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿರ್ವಸಿತರ ಕಾಲನಿಯಲ್ಲಿ ಪ್ರಸ್ತುತ ನೀರಿನ ಬವಣೆ ತೀವ್ರವಾಗಿದೆ. ಎಂಆರ್‌ಪಿಎಲ್ ಸಂಸ್ಥೆಯ ನಿರ್ವಸಿತರ ಕಾಲನಿಗಳಿಗೆ ನೀರು ನೀಡಲು ಸಂಸ್ಥೆಯೇ ಮನಪಾಗೆ ದೊಡ್ಡ ಮೊತ್ತವನ್ನು ಠೇವಣಿ ಇಟ್ಟಿದೆ. ಆದರೂ ಇಲ್ಲಿ ಸಮಸ್ಯೆಗಳು ಕಾಡುತ್ತಿವೆ.
Related Articles
ಮಂಗಳೂರಿನಲ್ಲಿ ನೀರಿಗೆ ತತ್ವಾರ ಉಂಟಾದರೆ ಹಳೆಯಂಗಡಿ ಹಾಗೂ ಮೂಲ್ಕಿಗೂ ತುಂಬೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುತ್ತದೆ. ಇದಕ್ಕೆಲ್ಲ ಪರಿಹಾರ ರೂಪದಲ್ಲಿ ನಂದಿನಿ ನದಿಯ ಪಂಜ- ಕೊಯಿಕುಡೆ ಪರಿಸರದಲ್ಲಿ ಸುಮಾರು ಎರಡು ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ಏಕಕಾಲದಲ್ಲಿ ನಿರ್ಮಾಣವಾಗಲಿದೆ. ಸಣ್ಣ ಮಟ್ಟಿನ ಡ್ಯಾಂನಂತೆ ನಿರ್ಮಾಣವಾಗಲಿರುವ ಈ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯು ಸ್ಥಳ ಗುರುತಿಸಿ, ಟೆಂಡರ್ ಪ್ರಕ್ರಿಯೆ ಮುಗಿಸಿದ್ದು, ಏಜೆನ್ಸಿಯ ಆಯ್ಕೆ ಪ್ರಕ್ರಿಯೆ ಈ ತಿಂಗಳ ಅಂತ್ಯದಲ್ಲಿ ಪೂರ್ಣಗೊಂಡು, ಜನವರಿ ತಿಂಗಳಿನಿಂದ ಕಾಮಗಾರಿ ಪ್ರಾರಂಭವಾಗಲಿದೆ.
Advertisement
ಡ್ಯಾಂ ನಿರ್ಮಾಣವಾದರೆ…ನಂದಿನಿ ನದಿಗೆ ಡ್ಯಾಂ ಕಟ್ಟಿದ ಬಳಿಕ ಅಲ್ಲೊಂದು ಜಾಕ್‌ವಾಲ್ ನಿರ್ಮಿಸಿ ನೀರನ್ನು ಪಂಪ್ ಮಾಡಿದಲ್ಲಿ ಹತ್ತಿರದ ಹಳೆಯಂಗಡಿ, ಸೂರಿಂಜೆ, ಪಡುಪಣಂಬೂರು, ಚೇಳಾಯಿರು ಗ್ರಾ.ಪಂ. ಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಯೋಜನೆ ವಿಸ್ತರಣೆ ಆದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದಷ್ಟು ಪ್ರದೇಶಗಳಿಗೂ ನೀರು ನೀಡಬಹುದು. ಕೃಷಿಕರಿಗೆ, ಬಾವಿಗಳಿಗೂ ಅನುಕೂಲ
ಪಂಜ- ಕೊಯಿಕುಡೆ ಪರಿಸರದಲ್ಲಿ ಡ್ಯಾಂ ನಿರ್ಮಾಣವಾದಲ್ಲಿ ಈ ಭಾಗದ ಕೃಷಿಕರಿಗೂ ನೀರಿನ ಒರತೆ ಸಿಗುವುದು. ಈ ಪರಿಸರದ ಬಾವಿಗಳಿಗೂ ಬೇಸಗೆಯ ಕೊನೆಯ ದಿನದವರೆಗೂ ನೀರು ಸಿಗುವ ಸಾಧ್ಯತೆ ಹೆಚ್ಚಿದೆ. ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಿದಲ್ಲಿ ಇನ್ನಷ್ಟು ಗ್ರಾ.ಪಂ.ಗಳಿಗೆ ನೀರು ಸರಬರಾಜು ಮಾಡಬಹುದು. ಕಿನ್ನಿಗೋಳಿಯ ಬಹುಗ್ರಾಮ ಯೋಜನೆಯ ವೈಫಲ್ಯವನ್ನೂ ಇಲ್ಲಿ ಪರಿಹರಿಸಲು ಸಾಧ್ಯವಿದೆ. ಶಾಶ್ವತ ಪರಿಹಾರ
ಈ ಭಾಗದಲ್ಲಿ ನಂದಿನಿ ನದಿಯ ನೀರು ನೇರವಾಗಿ ಸಮುದ್ರಕ್ಕೆ ಸೇರುತ್ತಿದ್ದು, ಇದನ್ನು ಕುಡಿಯುವ ನೀರಿನ ಯೋಜನೆಯಲ್ಲಿ ಬಳಸಬೇಕು ಎಂದು ಬಹಳಷ್ಟು ವರ್ಷಗಳಿಂದ ಒತ್ತಾಯಿಸುತ್ತಿದ್ದೇನೆ. ಹಳೆಯಂಗಡಿ, ಪಾವಂಜೆ, ಪಡುಪಣಂಬೂರು, ಸಸಿಹಿತ್ಲು ಪ್ರದೇಶಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ಸಾಕಷ್ಟು ಏರುಪೇರಾಗುತ್ತಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ನಂದಿನಿ ನದಿಗೆ ಡ್ಯಾಂನ ಸಂಕಲ್ಪವಾಗಿದೆ.
– ಜೀವನ್ ಪ್ರಕಾಶ್ , ತಾ.ಪಂ. ಸದಸ್ಯರು ಜನವರಿಯಲ್ಲಿ ಆರಂಭ
ಕೆಮ್ರಾಲ್ ಪಂಚಾಯತ್‌ನ ಪಂಜ-ಕೊಯಿಕುಡೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ 9 ಅಡಿ ಅಗಲದ ರಸ್ತೆ ಸೇತುವೆಯ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಈ ಕಿಂಡಿ ಅಣೆಕಟ್ಟನ್ನು ಕುಡಿಯುವ ನೀರಿನ ಯೋಜನೆಯಾಗಿಯೂ ಪರಿವರ್ತಿಸಬಹುದು. ಇದಕ್ಕಾಗಿ ಹೆಚ್ಚುವರಿ ಅನುದಾನ ಅಗತ್ಯವಿದೆ. ಕಾಮಗಾರಿ ಜನವರಿಯಲ್ಲಿ ಆರಂಭಗೊಳ್ಳಲಿದೆ.
– ಷಣ್ಮುಗಂ, ಸಹಾಯಕ ಕಾರ್ಯನಿರ್ವಾಹಕ
ಅಭಿಯಂತರ ಸಣ್ಣ ನಿರಾವರಿ ಇಲಾಖೆ, ಮಂಗಳೂರು ನರೇಂದ್ರ ಕೆರೆಕಾಡು