Advertisement

ವಿಂಬಲ್ಡನ್‌ ಟೆನಿಸ್‌ : ನೊವಾಕ್‌ ಜೊಕೋವಿಕ್‌, ತಾಟ್ಜಾನಾ ಮರಿಯಾ ಸೆಮಿಗೆ

12:31 AM Jul 06, 2022 | Team Udayavani |

ಲಂಡನ್‌: ಹಾಲಿ ಚಾಂಪಿ ಯನ್‌ ನೊವಾಕ್‌ ಜೊಕೋವಿಕ್‌ ಮತ್ತು ವಿಶ್ವದ 103ನೇ ರ್‍ಯಾಂಕಿನ ಜರ್ಮನಿಯ ತಾಟ್ಜಾನಾ ಮರಿಯಾ ಅವರು ವಿಂಬಲ್ಡನ್‌ ಟೆನಿಸ್‌ ಕೂಟದಲ್ಲಿ ಸೆಮಿಫೈನಲ್‌ ತಲುಪಿದ್ದಾರೆ.

Advertisement

ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್‌ ಹೋರಾಟದಲ್ಲಿ 20 ಬಾರಿಯ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ಜೊಕೋವಿಕ್‌ ಇಟಲಿಯ ಜಾನಿಕ್‌ ಸಿನ್ನರ್‌ ಅವರನ್ನು ಐದು ಸೆಟ್‌ಗಳ ಮ್ಯಾರಥಾನ್‌ ಸೆಣಸಾಟದಲ್ಲಿ 5-7, 2-6, 6-3, 6-2, 6-2 ಸೆಟ್‌ಗಳಿಂದ ಸೋಲಿಸಿದರು.

ಮೊದಲ ಎರಡು ಸೆಟ್‌ ಜಯಿಸಿದ್ದ ಸಿನ್ನರ್‌ ಆಬಳಿಕ ಜೊಕೋವಿಕ್‌ ಅವರ ಅದ್ಭುತ ಆಟಕ್ಕೆ ಶರಣಾದರು. ಈ ನಡುವೆ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಸಿನ್ನರ್‌ ವೈದ್ಯರ ನೆರವು ಪಡೆದರು.

ಜರ್ಮನಿಯ ಆಟಗಾರ್ತಿಯರ ನಡುವೆ ನಡೆದ ವನಿತೆಯರ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ತಾಟ್ಜಾನಾ ಮರಿಯಾ ಅವರು ಸ್ನೇಹಿತೆ ಜೂಲಿ ನೀಮಿಯರ್‌ ಅವರನ್ನು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ಮೊದಲ ಬಾರಿ ಸೆಮಿಫೈನಲ್‌ ಹಂತಕ್ಕೇರಿದರು.

34ರ ಹರೆಯದ ಮರಿಯಾ ಮೊದಲ ಸೆಟ್‌ನಲ್ಲಿ ಸೋತರೂ ವಿಚಲಿತರಾಗದೆ ಉತ್ತಮ ಹೋರಾಟ ಸಂಘಟಿಸಿ 4-6, 6-2, 7-5 ಸೆಟ್‌ಗಳಿಂದ ಗೆಲುವು ಸಾಧಿಸಿ ಅಂತಿಮ ನಾಲ್ಕರ ಸುತ್ತಿಗೆ ತಲುಪಿದರು. ಅವರು ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಆನ್ಸ್‌ ಜಬೆಯುರ್‌ ಅಥವಾ ಮರಿಯೆ ಬೌಜ್ಕೋವಾ ಅವರನ್ನು ಎದುರಿಸಲಿದ್ದಾರೆ.

Advertisement

ಎರಡನೇ ಪುತ್ರಿಯ ಜನನದ ಬಳಿಕ ಕಳೆದ ವರ್ಷವಷ್ಟೇ ಟೆನಿಸ್‌ ರಂಗಕ್ಕೆ ಮರಳಿದ್ದ ಮರಿಯಾ ಈ ಪಂದ್ಯದಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದರು. ಪಂದ್ಯ ಗೆದ್ದ ತತ್‌ಕ್ಷಣವೇ ನೀಮಿಯರ್‌ ಅವರನ್ನು ತಬ್ಬಿಕೊಂಡ ಅವರು ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. 34ರ ಹರೆಯದ ವೇಳೆ ವಿಂಬಲ್ಡನ್‌ನ ಸೆಮಿಫೈನಲ್‌ ತಲುಪಿದ ಆರನೇ ವನಿತೆ ಎಂಬ ಹಿರಿಮೆಗೆ ಮರಿಯಾ ಪಾತ್ರರಾಗಿದ್ದಾರೆ.

ಪುರುಷರ ವಿಭಾಗದಲ್ಲಿ ರಫೆಲ್‌ ನಡಾಲ್‌, ನಿಕಿ ಕಿರ್ಗಿಯೋಸ್‌ ಕಠಿನ ಪಂದ್ಯದಲ್ಲಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ. ನಡಾಲ್‌ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ವಾನ್‌ ಡಿ ಜಾಂಡ್ಸ್‌ಚುಲ್ಪ್ ಅವರನ್ನು 6-4, 6-2, 7-6 (8-6) ಸೆಟ್‌ಗಳಿಂದ ಸೋಲಿಸಿದ್ದರೆ ಕಿರ್ಗಿಯೋಸ್‌ ಇನ್ನೊಂದು ಪಂದ್ಯದಲ್ಲಿ ಬಿ. ನಕಶಿಮಾ ಅವರನ್ನು 4-6, 6-4, 7-6 (7-2), 3-6, 6-2 ಸೆಟ್‌ಗಳಿಂದ ಉರುಳಿಸಿದ್ದರು.

ಸಾನಿಯಾ ಜೋಡಿ ಸೆಮಿಗೆ
ಮಿಕ್ಸೆಡ್‌ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಅವರ ಕ್ರೊವೇಶಿಯದ ಜತೆಗಾರ್ತಿ ಮಾಟೆ ಪಾವಿಕ್‌ ಅವರು ನಾಲ್ಕನೇ ಶ್ರೇಯಾಂಕದ ಜಾನ್‌ ಪೀರ್ ಮತ್ತು ಗ್ಯಾಬ್ರಿಯೆಲಾ ಅವರನ್ನು 6-4, 3-6, 7-5 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ ತಲುಪಿದ್ದಾರೆ. 2022ರ ಋತುವಿನ ಬಳಿಕ ಟೆನಿಸ್‌ ರಂಗದಿಂದ ನಿವೃತ್ತಿಯಾಗುವುದಾಗಿ ಸಾನಿಯಾ ಈಗಾಗಲೇ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next