Advertisement
ಸೆಂಟರ್ ಕೋರ್ಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಕೊಂಟಾ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಎರಡು ತಾಸು ಮತ್ತು 38 ನಿಮಿಷಗಳ ಕಾದಾಟದಲ್ಲಿ ಹಾಲೆಪ್ ಅವರನ್ನು 6-7 (2-7), 7-6 (7-5), 6-4 ಸೆಟ್‌ಗಳಿಂದ ಕೆಡಹಿದ ಕೊಂಟಾ ಅಂತಿಮ ನಾಲ್ಕರ ಸುತ್ತಿಗೇರಿದರು. ಗುರುವಾರ ನಡೆಯುವ ಸೆಮಿಫೈನಲ್‌ನಲ್ಲಿ ಕೊಂಟಾ ಅಮೆರಿಕದ ಐದು ಬಾರಿಯ ವಿಂಬಲ್ಡನ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಸೆಮಿಫೈನಲ್ ಪಂದ್ಯವು ಸ್ಪೇನ್‌ನ ಗಾರ್ಬಿನ್ ಮುಗುರುಜಾ ಮತ್ತು ಸ್ಲೊವಾಕಿಯಾದ ಮಗ್ಡೆಲಿನಾ ರಿಬರಿಕೋವಾ ಅವರ ನಡುವೆ ನಡೆಯಲಿದೆ. ಮುಗುರುಜಾ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ವೆತ್ಲಾನಾ ಕುಜ್ನೆತ್ಸೋವಾ ಅವರನ್ನು 6-3, 6-4 ಸೆಟ್‌ಗಳಿಂದ ಕೆಡಹಿದರೆ ರಿಬರಿಕೋವಾ ಅವರು ಅಮೆರಿಕದ ಕೊಕೊ ವಾಂಡೇವೆ ಅವರನ್ನು 6-3, 6-3 ಸೆಟ್‌ಗಳಿಂದ ಪರಾಭವಗೊಳಿಸಿದ್ದರು. ಏಳನೇ ಶ್ರೇಯಾಂಕದ ಕೊಂಟಾ 39 ವರ್ಷದ ಬಳಿಕ ವಿಂಬಲ್ಡನ್ ಸೆಮಿಫೈನಲಿಗೇರಿದ ಬ್ರಿಟನ್‌ನ ಮೊದಲ ವನಿತಾ ಆಟಗಾರ್ತಿಯಾಗಿದ್ದಾರೆ. 26ರ ಹರೆಯದ ಅವರು ಇಷ್ಟರವರೆಗೆ ಗ್ರ್ಯಾನ್ ಸ್ಲಾಮ್ ಕೂಟದ ಫೈನಲ್ ತಲುಪಿಲ್ಲ. ಉತ್ತಮ ಫಾರ್ಮ್ನಲ್ಲಿರುವ ಕೊಂಟಾ ಇಲ್ಲಿ ಫೈನಲ್ ತಲುಪುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.
Related Articles
Advertisement
ವೀನಸ್ ಹಿರಿಯ ಆಟಗಾರ್ತಿ: ಕೊಂಟಾ ಅವರ ಸೆಮಿಫೈನಲ್ ಎದುರಾಳಿ ವೀನಸ್ ಅವರು 23 ವರ್ಷ ಬಳಿಕ ವಿಂಬಲ್ಡನ್‌ನ ಸೆಮಿಫೈನಲಿಗೇರಿದ ಅತೀ ಹಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. 1994ರಲ್ಲಿ ಮಾರ್ಟಿನಾ ನವ್ರಾಟಿಲೋವಾ ಈ ಹಿಂದೆ ಈ ಸಾಧನೆ ಮಾಡಿದ್ದರು. ವೀನಸ್ ಎಂಟು ಬಾರಿ ವಿಂಬಲ್ಡನ್ ಕೂಟದ ಫೈನಲ್ ಹಂತಕ್ಕೇರಿದ್ದರು. 2009ರಲ್ಲಿ ಕೊನೆಯದಾಗಿ ಫೈನಲ್ ತಲುಪಿದ್ದರು. 2008ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಬಳಿಕ ಮೊದಲ ಬಾರಿ ಪ್ರಮುಖ ಕೂಟದ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ವಿಶ್ವದ 11ನೇ ರ್‍ಯಾಂಕಿನ ವೀನಸ್ ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ನಲ್ಲಿ ಸೋತಿದ್ದರು ಮತ್ತು 2016ರಲ್ಲಿ ಇಲ್ಲಿ ಸೆಮಿಫೈನಲ್‌ನಲ್ಲಿ ಆಘಾತ ಅನುಭವಿಸಿದ್ದರು. ವಿಂಬಲ್ಡನ್‌ನಲ್ಲಿ ನೀಡಿದ ಶ್ರೇಷ್ಠ ನಿರ್ವಹಣೆಯಿಂದ ವೀನಸ್ ನೂತನ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರೊಳಗಿನ ಸ್ಥಾನ ಪಡೆಯುವ ಸಾಧ್ಯತೆಯಿದೆ.
ವಿಂಬಲ್ಡನ್‌ಗೆ ಪಾದಾರ್ಪಣೆಗೈದ ಬಳಿಕ 20ನೇ ವರ್ಷದಲ್ಲಿ ವೀನಸ್ ಇಲ್ಲಿ 100ನೇ ಸಿಂಗಲ್ಸ್ ಪಂದ್ಯ ಆಡಿದರು. ಈ ಗೆಲುವಿನೊಂದಿಗೆ ಅವರು ತನ್ನ ತಂಗಿ ಸೆರೆನಾ ಜತೆ ವಿಂಬಲ್ಡನ್‌ನ ಮುಖ್ಯ ಡ್ರಾದಲ್ಲಿ 86 ಗೆಲುವು ಆಚರಿಸಿದರು.