Advertisement
ಸರ್ವಿಸ್ ಬಸ್ ನಿಲ್ದಾಣವನ್ನು ಸ್ಟೇಟ್ ಬ್ಯಾಂಕ್ ಕಡೆಗೆ ಸ್ಥಳಾಂತರ ಮಾಡಿದಾಗಲೇ ಈ ಪ್ರದೇಶ ಅರ್ಧ ಕಳೆ ಕಳೆದುಕೊಂಡಿತ್ತು. ಬಳಿಕ ಕಾರುಗಳ ಪಾರ್ಕಿಂಗ್, ವ್ಯಾಪಾರಗಳು ಬಂದು ಜನ ಸಂಚಾರ ಜೋರಾಗಿತ್ತು. ಆದರೆ ಇದೀಗ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣಕ್ಕೆ ಶುರು ಮಾಡಿದ ಮೇಲೆ ವಸ್ತುಶಃ ಶ್ಮಶಾನ ಮೌನ. ಸಮಸ್ಯೆಗಳ ಸರಮಾಲೆಯೇ ಎದುರಾಗಿದೆ.
ಸುತ್ತಲಿನ ಅಂಗಡಿ- ಮಳಿಗೆಯವರು, ಸಾರ್ವಜನಿಕರು, ವಿದ್ಯಾರ್ಥಿಗಳು, ಚಾಲಕರು, ಬೀದಿಬದಿ ವ್ಯಾಪಾರಿಗಳು ಒಂದಲ್ಲೊಂದು ಸಮಸ್ಯೆಯಿಂದ ಬಳಲುವಂತಾಗಿದೆ. ವ್ಯಾಪಾರಿಗಳಿಗೆ ಗ್ರಾಹಕರಿಲ್ಲದೆ ವ್ಯಾಪಾರವೇ ಇಲ್ಲ. ಒಂದಷ್ಟು ವ್ಯಾಪಾರಿಗಳು ಅಂಗಡಿ ಗಳನ್ನು ಮುಚ್ಚಿ ಬೇರೆ ಕಡೆಗೆ ತೆರಳಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲದಂತಾಗಿದೆ. ಬಾಡಿಗೆ ಕಾರಿನ ಚಾಲಕರು ಜಾಗವಿಲ್ಲದೆ ಮೂಲೆಯಲ್ಲಿದ್ದಾರೆ! ‘ಎರಡು ವರ್ಷಗಳಿಂದ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ. ಹಿಂದಿನಂತೆ ಪಾರ್ಕಿಂಗ್ ಇದ್ದಿದ್ದರೆ ಒಂದಷ್ಟು ವ್ಯಾಪಾರ ನಡೆಸಲು ಸಾಧ್ಯವಾಗುತಿತ್ತು. ಹಿಂದೆ ದಿನಕ್ಕೆ 300 ಲೀ. ಬಿಸಿ ಹಾಲು ಮಾರಾಟ ಮಾಡುತ್ತಿದ್ದೆ, ಆದರೆ ಈಗ ಅಂತಹ ವ್ಯಾಪಾರವೇ ಇಲ್ಲ’ ಎನ್ನುತ್ತಾರೆ 36 ವರ್ಷದಿಂದ ಡೇರಿ ವ್ಯಾಪಾರ ನಡೆಸುತ್ತಿರುವ ಗಣೇಶ್.
Related Articles
ಮಲ್ಟಿ ವೆಲೆವ್ ಪಾರ್ಕಿಂಗ್‌ಗಾಗಿ ಪಾತಾಳದವರೆಗೆ ಅಗೆದು “ನೀರು ಸಂಗ್ರಹ’ ಮಾಡುತ್ತಿರುವುದು ಹೊರತುಪಡಿಸಿದರೆ, ಸಾರ್ವಜನಿಕರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಇನ್ನೂ ಮಳೆ ಸ್ವಲ್ಪ ಹೆಚ್ಚು ಸುರಿದಿದ್ದರೆ ಸುತ್ತಲಿನ ಬಹು ಮಹಡಿ ಕಟ್ಟಡದಲ್ಲಿ ಯಾವುದಾದರೊಂದು ಕಟ್ಟಡ ಕುಸಿದು ಬೀಳುವ ಸಾಧ್ಯತೆಯಿತ್ತು ಎನ್ನುತ್ತಾರೆ ಸ್ಥಳೀಯರು.
Advertisement
ಸಾರ್ವಜನಿಕರ ಕಷ್ಟ ಕೇಳುವವರಿಲ್ಲಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ಹಂಪನಕಟ್ಟೆಯಿಂದ ಕೆಎಸ್ ರಾವ್ ರಸ್ತೆಯ ಕಡೆಗೆ ಸಾಗಲು ಹಿಂದೆ ಇಲ್ಲಿನ ಮೈದಾನವೇ ಹಾದಿಯಾಗಿತ್ತು. ಮಿಲಾಗ್ರಿಸ್ ಸ್ಟಾಪ್‌ನಲ್ಲಿ ಬಸ್ ಇಳಿದು ಕಾರ್‌ಸ್ಟ್ರೀಟ್ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ಇದೇ ಹತ್ತಿರದ ಹಾದಿಯಾಗಿತ್ತು. ಆದರೆ ಪ್ರಸ್ತುತ ಮಲ್ಟಿಲೆವೆಲ್ ಕಾರ್‌ಪಾರ್ಕಿಂಗ್ ನಿರ್ಮಾಣಕ್ಕಾಗಿ ಮಾಡಿರುವ ಗುಂಡಿಯ ಬದಿಯಲ್ಲೇ ಯಾವಾಗ ಜರಿದು ಬೀಳುವುದೋ ಎನ್ನುವ ಭಯದಿಂದ ಸಾಗಬೇಕಾಗಿದೆ. ಮಳೆ ಬಂದರೆ ಕೆಸರಿನ ರಾಡಿಯಾಗುತ್ತದೆ. ಒಂದೆಡೆ ದುರ್ನಾತ ಬೀರುವ ಕೊಳಚೆ ನೀರು ಹರಿಯುತ್ತಿದೆ. ಎರಡು ವರ್ಷದಿಂದ ಸರಿಯಾಗಿ ಕೆಲಸವಿಲ್ಲ!
ಎರಡು ವರ್ಷದಿಂದ ಸರಿಯಾಗಿ ಕೆಲಸವಿಲ್ಲದೆ, ಆದಾಯವೂ ಇಲ್ಲ! ಇಲ್ಲಿನ ಸ್ಥಳೀಯ ಬಟ್ಟೆ ಅಂಗಡಿಗಳಿಗೆ ಗ್ರಾಹಕರು ಬಂದರೆ ಮಾತ್ರ ನಮಗೆ ವ್ಯಾಪಾರವಾಗುತ್ತದೆ. ಅವರು ವ್ಯಾಪಾರ ಇಲ್ಲ ಎಂದು ಅವರು ಅಂಗಡಿಗಳನ್ನು ಮುಚ್ಚಿ ಹೋಗಿದ್ದಾರೆ. ದಿನದಲ್ಲಿ ಸ್ವಲ್ಪ ಹೊತ್ತು ಕೆಲಸ ಮಾಡಿ ಹೋಗುತ್ತೇನೆ ಎನ್ನುತ್ತಾರೆ ಸುಮಾರು 30 ವರ್ಷದಿಂದ ಸೀರೆಗಳಿಗೆ ಗೊಂಡೆ ಹಾಕುವ ಕೆಲಸ ಮಾಡುತ್ತಿರುವ ದೇವೇಂದ್ರ ಅವರು. ಅಂಗಡಿಗಳೇ ಮುಚ್ಚಿ ಹೋಗಿವೆ
ಮಲ್ಟಿ ಲೆವೆಲ್ ಪಾರ್ಕಿಂಗ್‌ನಿಂದ ವ್ಯಾಪಾರಿಗಳಿಗೆ ಭಾರೀ ಸಮಸ್ಯೆ ಆಗಿದೆ. ಮೊದಲು ಖಾಲಿ ಸ್ಥಳವಾಗಿದ್ದಾಗ ಒಂದಷ್ಟು ಮಂದಿ ಆಚೀಚೆ ಅಡ್ಡಾಡು ವಾಗ ವ್ಯಾಪಾರವಾದರೂ ಆಗುತಿತ್ತು. ಆದರೆ ಈಗ ಅದೂ ಇಲ್ಲದಾಗಿದೆ. ಕೆಲವು ಹೂವಿನ ವ್ಯಾಪಾರಿಗಳು ಅಂಗಡಿಯನ್ನೇ ಮುಚ್ಚಿದ್ದು, ಕೆಲವರು ಸಂಜೆ ಸ್ವಲ್ಪ ಹೊತ್ತು ಬಂದು ವ್ಯಾಪಾರ ಮಾಡಿ ಹೋಗುತ್ತಾರೆ.
-ಪ್ರಭಾಕರ್, 40 ವರ್ಷದಿಂದ ಹೂವಿನ ವ್ಯಾಪಾರ ಮಾಡುತ್ತಿರುವವರು ಟ್ಯಾಕ್ಸಿ ಸ್ಟ್ಯಾಂಡ್‌ಗೆ ಜಾಗವಿಲ್ಲ
ಹಿಂದೆ ಇಲ್ಲಿ 50ಕ್ಕೂ ಅಧಿಕ ಟ್ಯಾಕ್ಸಿ ಯವರು ಪಾರ್ಕಿಂಗ್ ಮಾಡುತ್ತಿದ್ದರು. ಸಾಕಷ್ಟು ವಿಶಾಲವಾದ ಸ್ಥಳವೂ ಇತ್ತು. ಪಾರ್ಕಿಂಗ್ ಕಟ್ಟಡದ ನಿರ್ಮಾಣ ಕಾಮಗಾರಿ ಆರಂಭವಾದ ಬಳಿಕ ಕಾರುಗಳು ನಿಲ್ಲಿಸಲು ಸ್ಥಳವಿಲ್ಲದೆ, ಒಂದು ಮೂಲೆಯಲ್ಲಿ 5-6 ಕಾರು ಗಳನ್ನು ಮಾತ್ರ ಪಾರ್ಕ್ ಮಾಡುತ್ತಿದ್ದೇವೆ. ಒಂದೆಡೆ ಬಾಡಿಗೆಯೂ ಇಲ್ಲ, ಇನ್ನೊಂದು ನಿಲ್ಲಲೂ ನೆಲೆಯಿಲ್ಲ.
-ಪುರುಷೋತ್ತಮ್,15 ವರ್ಷದಿಂದ ಹಳೆ ಬಸ್ ಸ್ಟ್ಯಾಂಡ್‌ನಲ್ಲಿರುವ ಬಾಡಿಗೆ ಕಾರು ಚಾಲಕ -ಭರತ್ ಶೆಟ್ಟಿಗಾರ್