Advertisement

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

12:11 AM Dec 24, 2024 | Team Udayavani |

ಅಹ್ಮದಾಬಾದ್‌: ವಿಜಯ್‌ ಹಜಾರೆ ಟ್ರೋಫಿ ಏಕದಿನ ಪಂದ್ಯಾ ವಳಿಯ ದ್ವಿತೀಯ ಪಂದ್ಯದಲ್ಲೂ ಕರ್ನಾಟಕ ತಂಡ ಗೆಲುವಿನ ಓಟ ಮುಂದುವರಿಸಿದೆ. ಸೋಮವಾರ ನಡೆದ ಗುಂಪು “ಸಿ’ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಪಡೆ ಪುದುಚೇರಿ ವಿರುದ್ಧ 3 ವಿಕೆಟ್‌ಗಳ ಜಯ ಗಳಿಸಿತು.

Advertisement

ಕರ್ನಾಟಕ ಪರ ಮಧ್ಯಮ ವೇಗಿ ವಿದ್ಯಾಧರ್‌ ಪಾಟೀಲ್‌ 27ಕ್ಕೆ 4 ವಿಕೆಟ್‌ ಉರುಳಿಸಿ ಬೌಲಿಂಗ್‌ನಲ್ಲಿ ಮಿಂಚಿದರೆ, ಆರ್‌. ಸ್ಮರಣ್‌ ಅಜೇಯ 100 ರನ್‌ ಸಿಡಿಸಿ ಬ್ಯಾಟಿಂಗ್‌ನಲ್ಲಿ ನೆರವಿತ್ತರು. ಇದು ಈ ಕೂಟದಲ್ಲಿ ಕರ್ನಾಟಕ ತಂಡಕ್ಕೆ ಲಭಿಸಿದ ಸತತ 2ನೇ ಜಯದ ಸಿಹಿ.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸ ಲ್ಪಟ್ಟ ಪುದುಚೇರಿ ತಂಡ ಆಘಾತಕ್ಕೆ ಒಳಗಾಯಿತು. ಅಗ್ರ ಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳು ಬೆರಳೆಣಿಕೆಯ ರನ್ನಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು.

ತಂಡವನ್ನು ರನ್‌ ಕುಸಿತದಿಂದ ಪಾರು ಮಾಡಿದವರೆಂದರೆ ನಾಯಕ ಅರುಣ್‌ ಕಾರ್ತಿಕ್‌ (71) ಮತ್ತು ಅಮನ್‌ ಖಾನ್‌ (45). ನಿಗದಿತ 50 ಓವರ್‌ಗಳಲ್ಲಿ ಪುದುಚೇರಿ 9 ವಿಕೆಟ್‌ ನಷ್ಟಕ್ಕೆ 211 ರನ್‌ ಗಳಿಸಿತು.

ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್‌ ಮಾಡಿದ ಕರ್ನಾಟಕ ಕೂಡ ಆರಂಭಿಕ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಒತ್ತಡಕ್ಕೊಳಗಾಯಿತು. ಆದರೆ 4ನೇ ಕ್ರಮಾಂಕದಲ್ಲಿ ಆಡಿದ ಸ್ಮರಣ್‌ 87 ಎಸೆತ ಗಳಲ್ಲಿ 10 ಬೌಂಡರಿ 3 ಸಿಕ್ಸರ್‌ ಸೇರಿ ಭರ್ತಿ 100 ರನ್‌ ಪೇರಿಸುವ ಮೂಲಕ ತಂಡದ ಗೆಲುವನ್ನು ಸಾರಿದರು. ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ 40 ರನ್‌ ಗಳಿಸಿ ಸ್ಮರಣ್‌ಗೆ ಸಾಥ್‌ ನೀಡಿದರು.

Advertisement

ಇವರಿಬ್ಬರ ಬ್ಯಾಟಿಂಗ್‌ ಬೆಂಬಲ ದೊಂದಿಗೆ ಕರ್ನಾಟಕ 40.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 214 ರನ್‌ ಬಾರಿಸಿ ವಿಜಯದ ನಗೆ ಬೀರಿತು. ಕರ್ನಾಟಕದ ಇನ್ನಿಂಗ್ಸ್‌ ವೇಳೆ ಎದುರಾಳಿ ಬೌಲರ್‌ಗಳಾದ ವಿಜಯ್‌ ರಾಜ 40ಕ್ಕೆ 3, ಅಮನ್‌ ಹಕೀಮ್‌ ಖಾನ್‌ 49ಕ್ಕೆ 2 ವಿಕೆಟ್‌ ಕೆಡವಿ ಗಮನ ಸೆಳೆದರು.

ಈ ಗೆಲುವಿನೊಂದಿಗೆ ಕರ್ನಾಟಕ “ಸಿ’ ಗುಂಪಿನಲ್ಲಿ 8 ಅಂಕ ಗಳಿಸಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಆರಂಭಿಕ ಪಂದ್ಯದಲ್ಲಿ ಮಾಯಾಂಕ್‌ ಪಡೆ ಬಲಿಷ್ಠ ಮುಂಬಯಿ ವಿರುದ್ಧ ಗೆದ್ದಿತ್ತು. ಕರ್ನಾಟಕ ತಂಡ 3ನೇ ಸುತ್ತಿನ ಪಂದ್ಯದಲ್ಲಿ ಡಿ. 26ರಂದು ಪಂಜಾಬ್‌ ವಿರುದ್ಧ ಕಣಕ್ಕಿಳಿಯಲಿದೆ. ಅಹ್ಮದಾಬಾದ್‌ ಮೈದಾನದಲ್ಲೇ ಪಂದ್ಯ ನಡೆಯಲಿದೆ.

ಋತುರಾಜ್‌ ಜಂಟಿ ವೇಗದ ಶತಕ ದಾಖಲೆ
ಮುಂಬಯಿಯಲ್ಲಿ ನಡೆದ ಮಹಾ ರಾಷ್ಟ್ರ ಮತ್ತು ಸರ್ವೀಸಸ್‌ ನಡುವಿನ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್‌ ಗಾಯಕ್ವಾಡ್‌ 57 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಅವರು ವಿಜಯ್‌ ಹಜಾರೆಯಲ್ಲಿ ಮಹಾರಾಷ್ಟ್ರ ಪರ ವೇಗದ ಶತಕದ ಜಂಟಿ ದಾಖಲೆ ನಿರ್ಮಿಸಿದರು. ಅವರು ಕೇದಾರ್‌ ಜಾಧವ್‌ ಜತೆಗೆ ಅಗ್ರಸ್ಥಾನ ಹಂಚಿಕೊಂಡರು. ಈ ಪಂದ್ಯದಲ್ಲಿ 74 ಎಸೆತಗಳಿಗೆ ಗಾಯಕ್ವಾಡ್‌ 16 ಬೌಂಡರಿ, 11 ಸಿಕ್ಸರ್‌ ಸಹಿತ ಒಟ್ಟು 148 ರನ್‌ ಬಾರಿಸಿದರು. ಪರಿಣಾ ಮವಾಗಿ ಸರ್ವೀಸಸ್‌ ನೀಡಿದ್ದ 205 ರನ್‌ ಗುರಿಯನ್ನು ಕೇವಲ 20.2ನೇ ಓವರ್‌ನಲ್ಲಿ ತಲುಪಿದ ಮಹಾ ರಾಷ್ಟ್ರ 9 ವಿಕೆಟ್‌ ಜಯ ದಾಖಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next