Advertisement
‘ಫ್ರೆಂಡ್ಸ್ ಗಿಳಿಯಾರು’ ಕ್ರಿಕೆಟ್ ತಂಡದ ಆಟಗಾರನಾಗಿದ್ದ ಅಭಿಲಾಷ್ ಶೆಟ್ಟಿ, ಆಳ್ವಾಸ್‌ನಲ್ಲಿ ಪಿಯುಸಿಗೆ ಸೇರಿದ ಅನಂತರದಿಂದ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿದರು. ಅಲ್ಲಿಂದ ಮಂಗಳೂರು ವಲಯ, ರಾಜ್ಯ ಜೂನಿಯರ್ ತಂಡ, ಅಂಡರ್-23, ಅಂಡರ್-25, ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿ… ಹೀಗೆ ಹಂತ ಹಂತವಾಗಿ ಒಂದೊಂದೇ ಮೆಟ್ಟಿಲು ಹತ್ತುತ್ತ ಸಾಗಿದ 26 ವರ್ಷದ ಅಭಿಲಾಷ್ ಈಗ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯದ ಶ್ರೇಷ್ಠ ಬೌಲರ್ ಅಭಿಮನ್ಯು ಮಿಥುನ್ ಅವರು ಅಭಿಲಾಷ್ ಕ್ರಿಕೆಟ್ ಬದುಕಿಗೆ ಬೆಂಬಲವಾಗಿ ನಿಂತಿದ್ದಾರೆ. ‘ನನ್ನ ಬೌಲಿಂಗ್‌ನಲ್ಲಿ ಸ್ವಿಂಗ್, ಪೇಸ್, ಏನೇ ಬಂದಿದ್ದರೂ ಅದಕ್ಕೇ ಮಿಥುನ್ ಅಣ್ಣನೇ ಕಾರಣ. ಅವರೇ ನನ್ನ ಪಾಲಿನ ಗುರು. ಪ್ರತೀ ದಿನ ಅವರೊಂದಿಗೆ ಮಾತನಾಡುತ್ತೇನೆ’ ಎನ್ನುತ್ತಾರೆ ಅಭಿಲಾಷ್.
Related Articles
2023ರ ಮಹಾರಾಜ ಟಿ20 ಕ್ರಿಕೆಟ್ ಪಂದ್ಯಾವಳಿಯ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಅಭಿಲಾಷ್ ಶೆಟ್ಟಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. 11 ಪಂದ್ಯಗಳಲ್ಲಿ 22 ವಿಕೆಟ್ ಉರುಳಿಸಿ ಜಂಟಿ ಅಗ್ರಸ್ಥಾನಿಯಾಗಿದ್ದರು. ಈ ಬಾರಿಯ ಟೂರ್ನಿಯಲ್ಲೂ ಮಂಗಳೂರು ಪರ ಆಡಿ, 10 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದರು.
Advertisement
ರೋಹಿತ್ ಶರ್ಮ ಮೆಚ್ಚುಗೆಐಪಿಎಲ್ ತಂಡಗಳಾದ ಸಿಎಸ್‌ಕೆ, ಮುಂಬೈ, ಕೆಕೆಆರ್ ನೆಟ್ ಬೌಲರ್ ಆಗಿಯೂ ಅಭಿಲಾಷ್ ಗುರುತಿಸಿಕೊಂಡಿದ್ದರು. ಮುಂಬೈ ನೆಟ್ ಬೌಲರ್ ಆಗಿದ್ದಾಗ ಭಾರತ ತಂಡದ ನಾಯಕ ರೋಹಿತ್ ಶರ್ಮ ಇವರ ರನ್‌ಅಪ್, ಔಟ್ ಸ್ವಿಂಗರ್, ಇನ್ ಸ್ವಿಂಗರ್, ಉತ್ತಮ ವೇಗವನ್ನೆಲ್ಲ ಮೆಚ್ಚಿದ್ದರು. ಕಳೆದ ರಣಜಿ ಆವೃತ್ತಿಯ ಕೊನೆಯ ಎರಡು ಪಂದ್ಯಗಳಿಗೆ ಅಭಿಲಾಷ್ ಆಯ್ಕೆಯಾದರೂ, ಅಂತಿಮ 11ರಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈಗ ನಡೆಯುತ್ತಿರುವ ಪಂದ್ಯಾವಳಿಯ ಮೊದಲ ಮೂರು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿಲ್ಲ. ಮುಂದೆ ಸಿಗುವ ನಿರೀಕ್ಷೆ ಇದೆ. ಭಾರತ ತಂಡದ ಪರ ಆಡಬೇಕು ಅನ್ನುವ ಅಭಿಲಾಷೆಯಿದೆ. ಹಾಗಂತ ಆ ಬಗ್ಗೆ ಜಾಸ್ತಿ ಯೋಚನೆ ಮಾಡುತ್ತಿಲ್ಲ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಸದುಪಯೋಗಪಡಿಸಿಕೊಂಡು, ಉತ್ತಮ ಪ್ರದರ್ಶನ ನೀಡುವುದಷ್ಟೇ ನನ್ನ ಕೆಲಸ. ಕ್ರಿಕೆಟ್ ಆರಂಭಿಸಿದಂದಿನಿಂದ ರಣಜಿ ಆಡುವ ಕನಸು ಇತ್ತು. ಅದೀಗ ನನಸಾಗುವ ಕಾಲ ಹತ್ತಿರವಾಗಿದೆ.
– ಅಭಿಲಾಷ್ ಶೆಟ್ಟಿ, ಮೂಡುಗಿಳಿಯಾರು -ಪ್ರಶಾಂತ್ ಪಾದೆ