ಲಂಡನ್: ಮೂರು ಬಾರಿಯ ಚಾಂಪಿಯನ್ ನೊವಾಕ್ ಜೊಕೋವಿಕ್ ಮತ್ತು ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ರವಿವಾರ ವಿಂಬಲ್ಡನ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಶನಿವಾರಕ್ಕೆ ಮುಂದೂಡಲ್ಪಟ್ಟ ದ್ವಿತೀಯ ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ 6-4, 3-6, 7-6 (11-9), 3-6, 10-8 ಅಂತರ ದಿಂದ ರಫೆಲ್ ನಡಾಲ್ ಅವರನ್ನು ಪರಾಭವಗೊಳಿಸಿದರು. ಇತ್ತೀಚಿನ ವರ್ಷಗಳಲ್ಲಿ ಕಳಪೆ ಫಾರ್ಮ್ ಹಾಗೂ ಫಿಟ್‌ನೆಸ್ ಸಮಸ್ಯೆ ಯಿಂದ ನರಳುತ್ತಿದ್ದ ಜೊಕೋವಿಕ್ 2015ರಲ್ಲಿ ಕೊನೆಯ ಸಲ ವಿಂಬಲ್ಡನ್ ಚಾಂಪಿಯನ್ ಆಗಿದ್ದರು.
ಮ್ಯಾರಥಾನ್ ಸೆಮಿಫೈನಲ್!
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಎಕವಿನ್ ಆ್ಯಂಡರ್ಸನ್ ಮತ್ತು ಅಮೆರಿಕದ ಜಾನ್ ಇಸ್ನರ್ ನಡುವಿನ ಶುಕ್ರವಾರ ರಾತ್ರಿಯ ವಿಂಬಲ್ಡನ್ ಸೆಮಿಫೈನಲ್ ಕಾಳಗ ಮ್ಯಾರಥಾನ್ ರಾಕೆಟ್ ಸಮರವೊಂದಕ್ಕೆ ಸಾಕ್ಷಿ ಯಾಯಿತು. ಇದು ವಿಂಬಲ್ಡನ್ ಕೂಟದ ಅತ್ಯಂತ ದೀರ್ಘಾವಧಿಯ ಸೆಮಿಫೈನಲ್ ಪಂದ್ಯವಾಗಿ ಇತಿಹಾಸ ನಿರ್ಮಿಸಿತು. ಇವರಿಬ್ಬರ ನಡುವಿನ ಪಂದ್ಯ ಒಟ್ಟು 6 ಗಂಟೆ, 36 ನಿಮಿಷಗಳ ತನಕ ಸಾಗಿತು. ಅಪರಾಹ್ನ 1.10ಕ್ಕೆ ಆರಂಭಗೊಂಡ ಈ ಸ್ಪರ್ಧೆ ಮುಗಿದದ್ದು ರಾತ್ರಿ 7.46ಕ್ಕೆ!
ಪಟ್ಟು ಸಡಿಲಿಸದೆ ಕಾದಾಡಿದ ಆ್ಯಂಡರ್ಸನ್-ಇಸ್ನರ್, ಟೆನಿಸ್ ಸ್ಪರ್ಧೆಯೊಂದು ಎಷ್ಟೊಂದು ರೋಚಕವಾಗಿ ಜಿದ್ದಾಜಿದ್ದಿಯಿಂದ ಸಾಗಲಿದೆ ಎಂಬುದನ್ನು ನಿರೂಪಿಸಿದರು. ಜೊಹಾನ್ಸ್‌ಬರ್ಗ್‌ನ ಜಂಟ್ಲಮನ್ ಕೆವಿನ್ ಆ್ಯಂಡರ್ಸನ್ 7-6 (6), 6-7 (5), 6-7 (9), 6-4, 26-24 ಅಂತರದ ಜಯದೊಂದಿಗೆ ಫೈನಲ್ ನಗು ಹೊಮ್ಮಿಸಿದರು! ಇದರಲ್ಲಿ ನಿರ್ಣಾಯಕ 5ನೇ ಸೆಟ್ ಕಾಳಗವೇ ಹತ್ತಿರ ಹತ್ತಿರ 3 ಗಂಟೆ ಕಾಲ ನಡೆಯಿತೆಂಬುದು ಟೆನಿಸ್ ಲೋಕದ ಅಚ್ಚರಿಯೇ ಸೈ. 102 ಏಸ್, 264 ಸರ್ವ್ ಹಾಗೂ 247 ವಿನ್ನರ್ ಈ ಪಂದ್ಯದ ವಿಸ್ಮಯಗಳಾಗಿ ದಾಖಲಾದವು.
97 ವರ್ಷಗಳಲ್ಲಿ…
ಕಳೆದ 97 ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದ ಟೆನಿಸಿಗನೋರ್ವ ವಿಂಬಲ್ಡನ್ ಫೈನಲ್ ತಲುಪಿದ್ದು ಇದೇ ಮೊದಲು. ಎತ್ತರದ ಲೆಕ್ಕಾಚಾರದಲ್ಲೂ ಈ ಬಾರಿಯ ವಿಂಬಲ್ಡನ್ ಹೊಸ ದಾಖಲೆ ಬರೆಯಿತು. 6 ಅಡಿ, 8 ಇಂಚು ಎತ್ತರದ ಆ್ಯಂಡರ್ಸನ್, 132 ವರ್ಷಗಳ ವಿಂಬಲ್ಡನ್ ಇತಿಹಾಸದಲ್ಲಿ ಫೈನಲ್‌ಗೆ ಲಗ್ಗೆ ಇರಿಸಿದ ಅತ್ಯಂತ ಎತ್ತರದ ಟೆನಿಸಿಗನಾಗಿ ಮೂಡಿಬಂದಿದ್ದಾರೆ.