ಬಾಗಲಕೋಟೆ: ರಾಜಕೀಯಕ್ಕಾಗಿ ಈ ಹಿಂದೆ ವೀರಶೈವ ಮತ್ತು ಲಿಂಗಾಯತ ಸಮುದಾಯದ ನಡುವೆ ಹಾಗೂ ಧರ್ಮ ಒಡೆಯುವ ಹುನ್ನಾರ ನಡೆದಿತ್ತು. ಅದು ಸಾಧ್ಯವಾಗದ ಕೆಲಸ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡಿದ್ದ ತಾಲೂಕಾ ಘಟಕದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಗುರುವಿರಕ್ತರು ಒಂದೇ ಎಂದು ಮೊದಲೇ ಹೇಳಿದ್ದೆ. ಅದು ಈಗ ನಿಜವಾಗಿದೆ. ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕಾಗಿದೆ.
ವೀರಶೈವ ಹಾಗೂ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು ಎಂಬ ಪ್ರಯತ್ನಕ್ಕೆ ನಾನೂ ಕೈಜೋಡಿಸುವೆ. ಶರಣರ ಮಾರ್ಗದರ್ಶನದಲ್ಲಿರುವ ಬಣಜಿಗ ಸಮುದಾಯ ಈಗ ಸಂಘಟಿತವಾಗುತ್ತಿದೆ. ಯಾರು ಸಹ ಸಮುದಾಯದಲ್ಲಿ ಒಡಕಿನ ಶಬ್ದ ಎತ್ತುವುದು ಬೇಡ. ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅವುಗಳನ್ನು ಮರೆತು ಸಮುದಾಯದ ಏಳ್ಗೆಗೆ ಶ್ರಮಿಸೋಣ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಸಣ್ಣ ಸಣ್ಣ ಸಮುದಾಯಗಳ ಅನುಕರಣೆ ನಮಗೆ ಇದೀಗ ಅವಶ್ಯವಾಗಿದೆ. ಅವರಲ್ಲಿರುವ ಪ್ರತಿಭೆಯನ್ನು ನಾವು ಸಹ ಅಳವಡಿಸಿಕೊಳ್ಳಬೇಕಿದೆ.ಇಂದು ಜಗತ್ತು ಸಣ್ಣದಾಗಿದೆ. ತಾಂತ್ರಿಕತೆ ದೊಡ್ಡದಾಗಿದೆ. ಅದನ್ನು ಬಳಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿ ಸಾಧಕರಾಗುವ ಪ್ರಯತ್ನಕ್ಕೆ ಯುವ ಪೀಳಿಗೆ ಮುಂದಾಗಲಿ ಎಂದು ಹೇಳಿದರು.
ಶಾಸಕ ಡಾ| ವೀರಣ್ಣ ಚರಂತಿಮಠ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವುದು ಅವಶ್ಯವಾಗಿದೆ ಎಂದರು. ಸಾಹಿತಿ ಬಸವರಾಜ ಹಂಚಲಿ ಉಪನ್ಯಾಸ ನೀಡಿದರು. ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಸಮುದಾಯದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ, ಪ್ರಧಾನ ಕಾರ್ಯದರ್ಶಿ ರವಿ ಕುಮಟಗಿ, ತಾಲೂಕಾಧ್ಯಕ್ಷ ಬಸವರಾಜ ಶೀಲವಂತ, ಸ್ವಾಗತ ಸಮಿತಿಯ ಆನಂದ ಜಿಗಜಿನ್ನಿ, ಮಲ್ಲಪ್ಪಣ್ಣ ಆರಬ್ಬಿ, ವಿಶ್ವನಾಥ ವೈಜಾಪುರ, ಮುರಗೇಶ ಶಿವನಗುತ್ತಿ, ಈರಣ್ಣ ವಾಲಿಶೆಟ್ಟರ ಇನ್ನಿತರರಿದ್ದರು.
ಸಾಧಕರಿಗೆ ಸನ್ಮಾನ
ಸಮಾಜದ ಪ್ರತಿಭಾವಂತ ಮಕ್ಕಳೊಂದಿಗೆ ಬಣಜಿಗ ಸಮಾಜದಲ್ಲಿ ಸಾಧನೆ ಮಾಡಿದ ಪ್ರಕಾಶ ತಪಶೆಟ್ಟಿ, ಚಂದ್ರಶೇಖರ ಜಿಗಜಿನ್ನಿ, ಬಸಲಿಂಗಪ್ಪ ನಾವಲಗಿ, ಸಿದ್ದಪ್ಪ ಅಂಗಡಿ, ಶಣ್ಮುಕಪ್ಪ ಹದ್ಲಿ, ಮಲ್ಲಪ್ಪ ಉದಪುಡಿ, ಮಹಾಲಿಂಗಪ್ಪ ಅಂಗಡಿ, ಬಸವರಾಜ ಬೋಳಿಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.