Advertisement

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

02:58 PM Dec 26, 2024 | Team Udayavani |

ಬೆಳಗಾವಿ: ಮಹಾತ್ಮ ಗಾಂಧಿ ಹೆಸರಿನಲ್ಲಿ, ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಆರೋಪ ಮಾಡಿದರು.

Advertisement

ಬೆಳಗಾವಿಯಲ್ಲಿ ಗುರುವಾರ (ಡಿ.26) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸ್ವಾತಂತ್ರ‍್ಯ ಹೋರಾಟ ಉಚ್ಛ್ರಾಯ ಘಟ್ಟದಲ್ಲಿದ್ದ ಸಂದರ್ಭದಲ್ಲಿ, ಬೆಳಗಾವಿಯ ನೆಲದಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನಕ್ಕೆ ಇಂದು ಶತಮಾನದ ಸಂಭ್ರಮ. ಈ ಸಂಭ್ರಮಾಚರಣೆಯ ಅಂಗವಾಗಿ ರಾಜ್ಯ ಸರ್ಕಾರವು ಗಾಂಧಿ ಭಾರತ ಎಂಬ ಕಾರ್ಯಕ್ರಮವನ್ನು ಆಯೋಜಿಸಿರುವುದು ಸ್ವಾಗತಾರ್ಹ. ಆದರೆ ಈ ಕಾರ್ಯಕ್ರಮದ ರೂಪುರೇಷೆಗಳನ್ನು ನೋಡಿದರೆ, ಇದೊಂದು ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎಂದು ಟೀಕೆ ಮಾಡಿದರು.

ಗಾಂಧಿ ಅವರ ಹೆಸರಿನಲ್ಲಿ ಸಿದ್ದರಾಮಯ್ಯನವರ ಸರ್ಕಾರ ಜನರ ತೆರಿಗೆ ದುಡ್ಡಲ್ಲಿ, ಕಾಂಗ್ರೆಸ್ ಪಕ್ಷದ ಜಾತ್ರೆ ಮಾಡುತ್ತಿದೆ ಎಂದು ಜಗದೀಶ್ ಶೆಟ್ಟರ್ ಆರೋಪ ಮಾಡಿದರು.

ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ನಕಲಿ ಗಾಂಧಿಗಳ ಗುಲಾಮಗಿರಿ ಮಾಡಲು, ಮಹಾತ್ಮ ಗಾಂಧಿಜೀಯವರ ಹೆಸರನ್ನು ಬಳಸಿಕೊಂಡು ರಾಜ್ಯದ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಎಂಬುದು ರಾಜಕೀಯ ಪಕ್ಷವಾಗಿರಲಿಲ್ಲ. ದೇಶದ ಸ್ವಾತಂತ್ರ‍್ಯ ಹೋರಾಟಗಾರರಿಗೆ ವೇದಿಕೆಯಾಗಿತ್ತು. ಸ್ವಾತಂತ್ರ‍್ಯದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂದು ಮಹಾತ್ಮ ಗಾಂಧಿ ಬಯಸಿದ್ದರು. ಆದರೆ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷವು ಇಂದು ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ಮಹಾತ್ಮ ಗಾಂಧಿ ಅಂದಿನ ಬೆಳಗಾವಿ ಅಧಿವೇಶನವು ಕಾಂಗ್ರೆಸ್‌ನ ಕಡು ವಿರೋಧಿಯಾಗಿದ್ದ ಸ್ವರಾಜ್ಯ ಪಕ್ಷದವರನ್ನೂ ವೇದಿಕೆಯ ಮೇಲೆ ಒಂದುಗೂಡಿಸುವುದರ ಮೂಲಕ ಐಕ್ಯತಾ ಸಮ್ಮೇಳನ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈಗ ಅದರ ಸಂಭ್ರಮಾಚರಣೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರಿಗೆ ಕನಿಷ್ಠ ಸೌಜನ್ಯಕ್ಕೂ ಈ ಕಾಂಗ್ರೆಸ್ ಸರ್ಕಾರ ಆಹ್ವಾನ ನೀಡಿಲ್ಲ ಎಂದು ಟೀಕೆ ಮಾಡಿದರು.

Advertisement

ಈಗಿನ ಕಾಂಗ್ರೆಸ್ ನಾಯಕರಿಗೆ ಸುಳ್ಳೇ ಅವರ ಮನೆ ದೇವರಾಗಿದೆ. ಮುಖ್ಯಮಂತ್ರಿಗಳು ತಮ್ಮ ಸಮ್ಮುಖದಲ್ಲೇ ಜಗದೀಶ ಶೆಟ್ಟರ ಅವರಿಗೆ ಕರೆ ಮಾಡಿ ಖುದ್ದು ಆಹ್ವಾನ ನೀಡಿದ್ದಾರೆಂಬ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಶುದ್ಧ ಸುಳ್ಳು. ಮುಖ್ಯಮಂತ್ರಿಗಳ ಕರೆ ಒತ್ತಟ್ಟಿಗಿರಲಿ, ಯಾವುದೇ ಹಿರಿಯ ಅದಿಕಾರಿಗಳಿಂದಲೂ ನನಗೆ ಸೌಜನ್ಯಕ್ಕೂ ಅಧಿಕೃತ ಆಹ್ವಾನ ಬಂದಿಲ್ಲ. ಡಿ.ಕೆ ಶಿವಕುಮಾರ್ ಅವರು ಈ ರೀತಿ ಹಸಿ ಸುಳ್ಳುಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಶೆಟ್ಟರ ಹೇಳಿದರು.

ಇದಲ್ಲದೆ ಈ ಸಂದರ್ಭದಲ್ಲಿ ಅನವಶ್ಯಕವಾಗಿ ದಿ.ಸುರೇಶ ಅಂಗಡಿ ಅವರ ಸಾವನ್ನು ತಮ್ಮ ನೀಚ ರಾಜಕಾರಣಕ್ಕೆ ಉಪಯೋಗಿಸಿಕೊಳ್ಳುತ್ತಿರುವ ಡಿ.ಕೆ ಶಿವಕುಮಾರ್ ಅವರು ತಮ್ಮ ನಿರ್ಲಜ್ಜ ರಾಜಕಾರಣದ  ತುದಿ ತಲುಪಿದ್ದಾರೆ. ದಿ. ಸುರೇಶ ಅಂಗಡಿಯವರು ಬೆಳಗಾವಿ ಜನತೆಯ ಪ್ರೀತಿ, ಆಶೀರ್ವಾದಿಂದ ಕೇಂದ್ರ ಸಚಿವರಾಗಿದ್ದರು. ಕೋವಿಡ್ ಮಹಾಮಾರಿಗೆ ಅವರು ಉಸಿರು ಚೆಲ್ಲಿದ ಬಳಿಕ, ಅವರನ್ನು ಕೊನೆಯದಾಗಿ ಕಣ್ತುಂಬಿಕೊಳ್ಳಬೇಕು, ಅವರು ಹುಟ್ಟಿ ಬೆಳೆದ ನೆಲದಲ್ಲಿಯೇ ಅವರ ಅಂತ್ಯಸಂಸ್ಕಾರ ಆಗಬೇಕೆಂದು ಬೆಳಗಾವಿ ಜನರ ಬೇಡಿಕೆಯಾಗಿತ್ತು. ಆದರೆ ಅಂದಿನ ಸಂದರ್ಭದಲ್ಲಿ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ನಾವು ಪಾಲಿಸಬೇಕಿತ್ತು. ಆದ್ದರಿಂದ, ಅವರ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲಾಗಲಿಲ್ಲವೆಂಬ ಬೇಸರ ಇನ್ನೂ ನಮಗೆ ಕಾಡುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next