ಅಥಣಿ: ಶೂನ್ಯ ಬಡ್ಡಿ ಬೆಳೆಸಾಲ ಯೋಜನೆಯ ಸಾಲ ಮರುಪಾವತಿ ಕೊನೆ ದಿನಾಂಕದಲ್ಲಿನ ಅಸ್ಪಷ್ಟತೆ ರೈತರನ್ನು ಗೊಂದಲದಲ್ಲಿ ಕೆಡವಿದೆ. ರಾಜ್ಯ ಸರ್ಕಾರ ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದರೆ ನಬಾರ್ಡ್ ಮೇ 31ರೊಳಗೆ ಪೂರ್ತಿ ಅಸಲು ತುಂಬಿದರೆ ಮಾತ್ರ ಯೋಜನೆ ಲಾಭ ಎಂದು ಹೇಳುತ್ತಿದೆ.
ಶೂನ್ಯ ಬಡ್ಡಿ ಸಾಲ ಯೋಜನೆಯಡಿ ರೈತ ಪಡೆದ ಗರಿಷ್ಟ 3 ಲಕ್ಷರೂ. ವರೆಗಿನ ಸಾಲಕ್ಕೆ ನಬಾರ್ಡ್ ಮೂಲಕ ರಾಜ್ಯ ಸರಕಾರ ಶೇ 6.4 ಹಾಗೂ ಕೇಂದ್ರ ಸರಕಾರ ಶೇ 5 ಬಡ್ಡಿ ಕಟ್ಟುತ್ತವೆ. ರೈತನಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರಕುತ್ತದೆ. ಅವಧಿ ಮೀರಿ ಬೆಳೆಸಾಲ ಮರು ಪಾವತಿಸುವ ರೈತ ಸಾಲ ಪಡೆದ ದಿನಾಂಕದಿಂದಲೂ ಪೂರ್ಣ ಪ್ರಮಾಣದ ಬಡ್ಡಿ ಕಟ್ಟಬೇಕಾಗುತ್ತದೆ.
ಕೋವಿಡ್ ಲಾಕ್‌ಡೌನ್ ಸಂಕಷ್ಟದಿಂದಾಗಿ ರೈತರು ಹಣ ಮರುಪಾವತಿಸುವ ಅವಧಿಯನ್ನು ರಾಜ್ಯ ಸರ್ಕಾರ ಜೂನ್ 30ಕ್ಕೆ ಮುಂದೂಡಿದೆ. ಸಿಎಂ ಯಡಿಯೂರಪ್ಪ ಕೋವಿಡ್-19 ವಿಶೇಷ ಪ್ಯಾಕೇಜ್ ಘೋಷಿಸುವಾಗಿ ಈ ಘೋಷಣೆಯನ್ನೂ ಮಾಡಿದ್ದಾರೆ. ನಬಾರ್ಡ್ ಆದೇಶದಲ್ಲಿ ಯಾವುದೇ ಗೊಂದಲ ಇಲ್ಲ. ಇದರಿಂದ ರೈತರಿಗೆ ಸಹ ಯಾವ ಸಮಸ್ಯೆಯೂ ಆಗುವುದಿಲ್ಲ. ಕಳೆದ ಫೆಬ್ರವರಿಯಲ್ಲೇ ಎಲ್ಲ ಬೆಳೆ ಬಂದಿದೆ. ಮೇಲಾಗಿ ಸೊಸೈಟಿಗಳಲ್ಲಿ ಈಗಾಗಲೇ ರೈತರಿಂದ ಪ್ರತಿಶತ 99 ರಷ್ಟು ಸಾಲ ಮರುಪಾವತಿಯಾಗಿದೆ. ಲಾಕ್‌ಡೌನ್ ಆದೇಶ ಜಾರಿಯಾಗಿದ್ದರಿಂದ ರೈತರಿಗೆ ಮಾರ್ಚ ತಿಂಗಳಿಂದ ಮೂರು ತಿಂಗಳು ಕಾಲಾವಕಾಶ ನೀಡಲಾಗಿತ್ತು ಎಂಬುದು ನಬಾರ್ಡ್ ಅಧಿಕಾರಿಗಳ ಹೇಳಿಕೆ.
ಈಗ ರಾಜ್ಯ ಸರ್ಕಾರ ಕೂಡಲೇ ನಬಾರ್ಡ್ ಜತೆಗೆ ಚರ್ಚಿಸಿ ಸಾಲ ಮರುಪಾವತಿ ಕೊನೆ ದಿನಾಂಕದಲ್ಲಿನ ಗೊಂದಲ ನಿವಾರಿಸಬೇಕೆಂಬುದು ರೈತರ ಆಗ್ರಹವಾಗಿದೆ. ಈ ಗೊಂದಲ ಬೇಗ ಬಗೆಹರಿಯದಿದ್ದರೆ ರೈತರು ಸಮಸ್ಯೆಯಲ್ಲಿ ಸಿಲುಕುವುದಂತೂ ಗ್ಯಾರಂಟಿ.
ಮೊದಲೇ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಹಣವನ್ನು ತುಂಬಲು ಸಬಲರಿಲ್ಲ. ಈ ಸಮಸ್ಯೆ ಬಗೆಹರಿಸಲು ಸರಕಾರವೇ ರೈತರ ಹಣ ತುಂಬುವಂತಾಗಬೇಕು.
-ಮಹಾದೇವ ಮಡಿವಾಳ, ಅಧ್ಯಕ್ಷರು ತಾಲೂಕಾ ರೈತ ಸಂಘ, ಅಥಣಿ
ನಬಾರ್ಡ ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಚರ್ಚಿಸುವುದಲ್ಲದೇ ಸರಕಾರದ ಗಮನಕ್ಕೆ ಈ ವಿಷಯವನ್ನು ತಂದು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ
-ದುಂಡಪ್ಪಾ ಕೋಮಾರ, ತಹಶೀಲ್ದಾರ, ಅಥಣಿ
-ಸಂತೋಷ ರಾ. ಬಡಕಂಬಿ