ಅಹಮದಾಬಾದ್: ಪಟೇಲ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತಾರೆಯೋ ಇಲ್ಲವೋ ಎಂಬ ಬಗ್ಗೆ ಇದ್ದ ಗೊಂದಲ ಗುರುವಾರ ನಿವಾರಣೆಯಾಗಿದೆ.
ಪಟೇಲ್ ಸಮುದಾಯದ ಕೆಲ ನಾಯಕರ ವಿರೋಧದ ನಡುವೆಯೇ ಹಾರ್ದಿಕ್ ಪಟೇಲ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಯಾವ ರೀತಿಯಲ್ಲಿ ಪಕ್ಷ ಸಮುದಾಯಕ್ಕೆ ನೆರವಾಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆಯನ್ನು ಹಾರ್ದಿಕ್ ಪಡೆದುಕೊಂಡಿಲ್ಲ ಎನ್ನು ವುದು ಆರೋಪ ಮಾಡುವ ನಾಯಕರ ವಾದ. “ಬಿಜೆಪಿಯನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು ಎಂದು ಸಮುದಾಯ ದವರಿಗೆ ಕರೆ ನೀಡುತ್ತಾ ಬಂದಿದ್ದೇನೆ. ಜನರು ಬುದ್ಧಿವಂತರಾಗಿರುವುದರಿಂದ ಯಾರಿಗೆ ಮತ ಹಾಕಬೇಕು ಎನ್ನುವುದು ಗೊತ್ತಿದೆ. ಕಾಂಗ್ರೆಸ್‌ಗೆ ಬೆಂಬಲ ನೀಡುವ ವಿಚಾರದಲ್ಲಿ ಒತ್ತಡಕ್ಕೆ ಮಣಿದಿಲ್ಲ. ಬಿಜೆಪಿ ಪರ ಇರುವವರು ಸಮುದಾಯದ ನಿಜವಾದ ಬೆಂಬಲಿಗರಲ್ಲ’ ಎಂದಿದ್ದಾರೆ ಹಾರ್ದಿಕ್.
ಪ್ರಭಾವಿ ನಾಯಕರೇ ಇಲ್ಲ: ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಗುಜರಾತ್ ಕಾಂಗ್ರೆಸ್ ಘಟಕದಲ್ಲಿ ಪ್ರಭಾವೀ ನಾಯಕರೇ ಇಲ್ಲದಿರುವುದು ಚಿಂತೆಯಾಗಿದೆ. ಆದರೆ ಪಕ್ಷ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಯುಳ್ಳವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಾಜಿ ಸಚಿವ ಶಂಕರ್ ಸಿನ್ಹ ವಘೇಲಾ ಪಕ್ಷ ತೊರೆದಿರುವುದು ಆಘಾತ ತಂದಿದೆ ಎನ್ನಲಾಗಿದೆ.
ಹಾರ್ದಿಕ್ ಹೋರಾಟ ಮತ್ತು ಸಮುದಾಯವನ್ನು ದಿಕ್ಕು ತಪ್ಪಿಸುವ ಮಾತನಾಡುತ್ತಿದ್ದಾರೆ. ಒಬಿಸಿಯಲ್ಲಿ ಕೋಟಾ ಬೇಡ ಎಂದು ಹೇಳುತ್ತಿದ್ದಾರೆ. ಅವರಿಗೆ ಮೀಸಲು ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುವುದೇ ಆದ್ಯತೆ ಎನ್ನುವುದು ಇದರಿಂದ ಸ್ಪಷ್ಟ.
– ಸಿ.ಕೆ.ಪಟೇಲ್, ಪಟೇಲ್ ಸಮುದಾಯದ ನಾಯಕ