Advertisement
ಸಮಾರಂಭದಲ್ಲಿ ಸೋನಿಯಾ, ಸೋದರಿ ಪ್ರಿಯಾಂಕಾ ವಾದ್ರಾ ಹಾಗೂ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರರು ಹಾಜರಿದ್ದರು. ಈ ಕ್ಷಣ ಐತಿಹಾಸಿಕ ಎಂದು ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಬಣ್ಣಿಸಿದರು. ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಆಗಮಿಸಿದ್ದರಿಂದ ಮುಖಂಡರೇ ವೇದಿಕೆಯೆಡೆಗೆ ಆಗಮಿಸಲು ಕಷ್ಟಪಡುವಂತಾಗಿತ್ತು.
ಕಾರ್ಯಕರ್ತರ ಅತಿಯಾದ ಸಂಭ್ರಮದಿಂದಾಗಿ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿ ಕೊನೆಯ ಭಾಷಣವೂ ಅರ್ಧಕ್ಕೇ ಮೊಟಕುಗೊಳಿಸುವಂತಾಗಿದೆ. ಮಾತನಾಡಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಲು ಆರಂಭಿಸಿದ್ದರು. ಇದರಿಂದಾಗಿ ಸೋನಿಯಾ ಮಾತೇ ಕೇಳದಂತಾಯ್ತು. ಹಲವು ಬಾರಿ ಮಧ್ಯೆ ಮಾತು ನಿಲ್ಲಿಸಿದ ಸೋನಿಯಾ, ಒಮ್ಮೆ “ನನಗೆ ಮಾತನಾಡಲಾಗುತ್ತಿಲ್ಲ’ ಎಂದು ಅಸಹಾಯಕತೆಯಿಂದ ಹೇಳಿದ್ದೂ ಕೇಳಿಬಂತು. ಹಲವು ಬಾರಿ ಕಾಂಗ್ರೆಸ್ ಮುಖಂಡರು ಸಂಭ್ರಮಾಚರಣೆಯನ್ನು ಕೆಲವು ನಿಮಿಷಗಳವರೆಗೆ ಮುಂದೂಡುವಂತೆ ಆಗ್ರಹಿಸಿದರೂ, ಪಟಾಕಿ ಸದ್ದು ನಿಲ್ಲಲೇ ಇಲ್ಲ. ಕೊನೆಗೂ ಸೋನಿಯಾ ತನ್ನ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯಿತು. ಈ ಮಧ್ಯೆಯೂ ಮಾತನಾಡಿದ ಸೋನಿಯಾ, ತಾವು ಅಧ್ಯಕ್ಷೆಯಾಗಿ ಆಯ್ಕೆಯಾದ ಸನ್ನಿವೇಶ ಮತ್ತು ನಂತರ ರಾಹುಲ್ ಈವರೆಗೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
Related Articles
ಅಧ್ಯಕ್ಷರಾಗಿ ಮೊದಲ ಭಾಷಣ ಮಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು. ಎಲ್ಲ ಭಾರತೀಯರಂತೆಯೇ ನಾನೂ ಕನಸುಗಾರ. ಭಾರತವನ್ನು 21ನೇ ಶತಮಾನಕ್ಕೆ ಕಾಂಗ್ರೆಸ್ ಕರೆದು ತಂದಿತು. ಆದರೆ ಮೋದಿ ನಮ್ಮನ್ನು ಮಧ್ಯಯುಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಮೋದಿ ಆಡಳಿತದಲ್ಲಿ ಅನುಭವ, ಪರಿಣಿತಿ ಮತ್ತು ಜ್ಞಾನವೆಲ್ಲವನ್ನೂ ಸ್ವಾರ್ಥಕ್ಕಾಗಿ ಕಡೆಗಣಿಸಲಾಗುತ್ತಿದೆ. ದೇಶವನ್ನು ಬಿಜೆಪಿ ಕ್ರುದ್ಧಗೊಳಿಸುತ್ತಿದೆ. ದೇಶಾದ್ಯಂತ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂದು ರಾಹುಲ್ ಟೀಕಿಸಿದರು. ಒಮ್ಮೆ ಬೆಂಕಿ ಹೊತ್ತಿಸಿದರೆ ಅದನ್ನು ನಂದಿಸಲು ಕಷ್ಟವಾಗುತ್ತದೆ. ನೀವು ಈಗ ಬೆಂಕಿ ಹಚ್ಚಿದ್ದೀರಿ. ಆದರೆ ಇದನ್ನು ನಂದಿಸುವುದು ಅತ್ಯಂತ ಕಷ್ಟಕರ ಎಂದು ಅವರು ಹೇಳಿದರು. ಹಿಂಸೆಯನ್ನು ಪ್ರೀತಿಯಿಂದ ತಡೆಯುವಂತೆ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು.
Advertisement
ಕಾಂಗ್ರೆಸ್ ಭ್ರಷ್ಟಾಚಾರವನ್ನು ನೆನಪಿಸಿದ ಬಿಜೆಪಿಮೊದಲ ಅಧ್ಯಕ್ಷೀಯ ಭಾಷಣದಲ್ಲೇ ಬಿಜೆಪಿಯನ್ನು ಟೀಕಿಸಿದ ರಾಹುಲ್ ಗಾಂಧಿಗೆ ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಬಿಜೆಪಿ ಮುಖಂಡರು ನೆನಪಿಸಿದ್ದಾರೆ. ಕಾಂಗ್ರೆಸ್‌ನಿಂದ ಬೆಂಬಲಿತ ಮಧು ಕೋಡಾ ಹಗರಣದಲ್ಲಿ ಸಿಕ್ಕು ಜೈಲು ಸೇರಿದ್ದಾರೆ. ಅಧಿಕಾರದಲ್ಲಿ ಈಗ ಕಾಂಗ್ರೆಸ್ ಇಲ್ಲದಿದ್ದರೂ ಭ್ರಷ್ಟಾಚಾರ ಪ್ರಕರಣಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ನ ಚಿಂತನಾಲಹರಿಯೇ ಭ್ರಷ್ಟವಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಟೀಕಿಸಿದ್ದಾರೆ. ರಾಯ್‌ಬರೇಲಿಯಲ್ಲಿ ಸೋನಿಯಾ ಸ್ಪರ್ಧಿಸುವುದು ಖಚಿತ: ಪ್ರಿಯಾಂಕಾ
ರಾಯ್‌ಬರೇಲಿಯಿಂದ 2019ರ ಲೋಕಸಭೆ ಚುನಾವಣೆಗೆ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹವನ್ನು ಅವರೇ ತಳ್ಳಿ ಹಾಕಿದ್ದು, ಮುಂದಿನ ಬಾರಿಯೂ ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿಯೇ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ. ಸದ್ಯ ಸೋನಿಯಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಪಕ್ಷದ ಅಧ್ಯಕ್ಷ ಸ್ಥಾನವನ್ನು ಪುತ್ರನಿಗೆ ಹಸ್ತಾಂತರಿಸಿದ ನಂತರ ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂಬ ಊಹಾಪೋಹ ಕೇಳಿಬಂದಿತ್ತು. ರಾಹುಲ್‌ಗೆ ಮನಮೋಹನ್ ಸಿಂಗ್ ಮೆಚ್ಚುಗೆ
ದೇಶದಲ್ಲಿ ಸದ್ಯ ಅಗತ್ಯವಿರುವ ರಾಜಕೀಯ ನಿರೀಕ್ಷೆಯನ್ನು ರಾಹುಲ್ ಪೂರೈಸಲಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದಾರೆ. ರಾಹುಲ್ ಅಧ್ಯಕ್ಷ ಪದವಿಗೇರುವ ಮೂಲಕ, ರಾಜಕೀಯದ ಭೀತಿ ಮೂಡಿಸುವ ಅವಕಾಶ ಇಲ್ಲದಂತಾಗಿದೆ ಎಂದಿದ್ದಾರೆ. ರಾಹುಲ್ ವಿರೋಧ, ಮೆಚ್ಚುಗೆ
ರಾಹುಲ್ ಅಧಿಕಾರಕ್ಕೇರುತ್ತಿದ್ದಂತೆ ವಿರೋಧ ಮತ್ತು ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಈ ಹಿಂದೆ ಬಿಜೆಪಿ ಪಾಳೆಯದಲ್ಲಿದ್ದ ಸುಧೀಂದ್ರ ಕುಲಕರ್ಣಿ ರಾಹುಲ್‌ರನ್ನು “ನಿಜವಾದ ನಾಯಕ’ ಎಂದು ಮೆಚ್ಚಿಕೊಂಡಿದ್ದರೆ, “ರಾಹುಲ್‌ರನ್ನು ಹೊಗಳುವ ಭರದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮಾತಿನಲ್ಲಿ ದೇಶದ ಬಗ್ಗೆ ನಕಾರಾತ್ಮಕ ಭಾವನೆಯೇ ತುಂಬಿತ್ತು’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಟೀಕಿಸಿದ್ದಾರೆ.