ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳ ಪೈಕಿ ಮೂರು ಸ್ಥಾನ ಗೆಲ್ಲುವ ಸಾಧ್ಯತೆಗಳಿರುವ ಬಿಜೆಪಿ ಹಾಗೂ 1 ಸ್ಥಾನ ಗೆಲ್ಲಬಲ್ಲ ಅವಕಾಶ ಇರುವ ಜೆಡಿಎಸ್, ಕೊನೆ ಕ್ಷಣದಲ್ಲಿ ಹೆಚ್ಚುವರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ.
ಬಿಜೆಪಿ ಗೆಲ್ಲಬಲ್ಲ 3 ಸ್ಥಾನಗಳಿಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಒಂದು ಸ್ಥಾನಕ್ಕೆ ಐವರಂತೆ 15 ಜನ ಸಂಭಾವ್ಯರ ಪಟ್ಟಿಯನ್ನು ರಾಜ್ಯ ನಾಯಕರು ಇಳಿಸಬೇಕಿದೆ. ಈ ಕಸರತ್ತು ನಡೆಸುವ ಸಲುವಾಗಿ ಒಂದು ಸುತ್ತಿನ ಮಾತುಕತೆ ನಡೆದಿದೆ.
ರಾಜ್ಯ ಬಿಜೆಪಿ ಸಂಘಟನಕಾರ್ಯದರ್ಶಿ ಬದಲಾಗುವುದರಿಂದ ಸದ್ಯದಲ್ಲೇ ರಾಜ್ಯ ನಾಯಕರು ಮತ್ತೊಂದು ಸಭೆ ನಡೆಸಲಿದ್ದು, ಅನಂತರ ಸಂಭಾವ್ಯರ ಪಟ್ಟಿಯನ್ನು 12ಕ್ಕೆ ಇಳಿಸಿ ಕೇಂದ್ರ ನಾಯಕರಿಗೆ ಕಳುಹಿಸಲಿದ್ದಾರೆ.
ಪ್ರಮುಖವಾಗಿ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಸಿ.ಟಿ. ರವಿ, ಮಾಧುಸ್ವಾಮಿ, ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿ ಘಟಾನುಘಟಿಗಳು ಕೂಡ ಮೇಲ್ಮನೆ ಪ್ರವೇಶಿಸಲು ಇಚ್ಛಿಸಿದ್ದು, ಮಹಿಳಾ ಕೋಟದಲ್ಲಿ ನಟಿಯರಾದ ಶೃತಿ, ತಾರಾ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸಹಿತ ಅನೇಕ ಆಕಾಂಕ್ಷಿಗಳಿದ್ದಾರೆ.
ಸೋಮವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿರುವ ಜೂ.3 ಕೊನೆಯ ದಿನವಾಗಿದೆ. ಜೆಡಿಎಸ್‌ನ ಬಿ.ಎಂ. ಫಾರೂಕ್ ಮರುಆಯ್ಕೆಯಾಗುವ ಸಾಧ್ಯತೆ ಬಗ್ಗೆ ಚರ್ಚೆಯಾಗಿದೆ.