ರಾಯಚೂರು: ಇಲ್ಲಿನ ಸಂತೋಷ ನಗರದಲ್ಲಿ ರಾತ್ರೋರಾತ್ರಿ ಶಿವ ಮತ್ತು ಗಣೇಶ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತದ ಕ್ರಮ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನ.20ರ ಬುಧವಾರ ಪ್ರತಿಭಟನೆ ಆರಂಭಿಸಲಾಯಿತು.
ನಗರದ ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್ ಅಧ್ಯಕ್ಷತೆಯಲ್ಲಿ ಜಮಾಯಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಜಿಲ್ಲಾಡಳಿತ ಕೂಡ ದೇವಸ್ಥಾನ ತೆರವು ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ (ನ.19) ರಾತ್ರಿ ದೇವಸ್ಥಾನ ತೆರವುಗೊಳಿಸಿದ ಸ್ಥಳದಲ್ಲಿ ಜಿಲ್ಲಾಡಳಿತ ಬುಧವಾರ (ನ.20) ಬೆಳಗ್ಗೆಯೇ ಶಾಲಾ ಕಟ್ಟಡ ಕಾಮಗಾರಿ ಆರಂಭಿಸಿದೆ. ಲೋಕೋಪಯೋಗಿ ಇಲಾಖೆ, ಕ್ಯಾಶುಟೆಕ್ ಸಂಸ್ಥೆಯಿಂದ ಕಾಲಂ ಹಾಕಲು ಗುಂಡಿ ಅಗೆಯಲಾಗಿದೆ. ಸ್ಥಳಕ್ಕೆ ಜಲ್ಲಿ ಕಲ್ಲು ಬಂದಿದ್ದು, ಮರಳು ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾತ್ರೋರಾತ್ರಿ ದೆಸವಸ್ಥಾನ ತೆರವು ಮಾಡಿದ್ದು, ಬೆಳಗ್ಗೆ ವೇಳೆಗೆ ಯುದ್ಧೊಪಾದಿಯಲ್ಲಿ ಸರ್ಕಾರಿ ಶಾಲಾ ಕಟ್ಟಡ ಕೆಲಸ ಶುರು ಮಾಡಿರುವುದು ಗಮನಾರ್ಹವಾಗಿದೆ.