ಹುಣಸೂರು: ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ವತಿಯಿಂದ ಹುಣಸೂರು ನಗರದಲ್ಲಿ ಆಯೋಜಿಸಿದ್ದ 63ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ವನ್ಯಜೀವಿ ಜಾಗೃತಿ ಜಾಥಾ ನಡೆಸಿದರು.
ಮೈಸೂರು ರಸ್ತೆಯ ದೇವರಾಜ ಅರಸ್ ಪುತ್ಥಳಿ ಬಳಿಯಿಂದ ಹೊರಟ ಜಾಥಾಕ್ಕೆ ಡಿವೆ.ಎಸ್.ಪಿ.ಭಾಸ್ಕರ್ ರೆ, ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂದನ್ ಚಾಲನೆ ನೀಡಿದರು. ಜಾಥಾದಲ್ಲಿ ಹುಲಿವೇಷದಾರಿಗಳ ನರ್ತನ, ವಿದ್ಯಾರ್ಥಿಗಳ ಪರಿಸರ ಪೂರಕ ಘೋಷಣೆಗಳು, ಇಲಾಖೆ ತರಬೇತಿ ಸಿಬ್ಬಂದಿಗಳ ಆಕರ್ಷಕ ಪಥಸಂಚಲನ ಆಕರ್ಷಿಸಿತು.
ಜಾಥಾನಂತರ ವನ್ಯಜೀವಿ ವಿಭಾಗದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್ ಸಪ್ತಾಹದ ಬಗ್ಗೆ ಮಾತನಾಡಿ, ಸಾರ್ವಜನಿಕರಲ್ಲಿ ಕಾಡು ಪ್ರೀತಿ, ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕಾಡಂಚಿನ ಹುಣಸೂರು, ಎಚ್.ಡಿ.ಕೋಟೆ ತಾಲೂಕು ಹಾಗೂ ಕೊಡಗು ಭಾಗದಲ್ಲೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಅ.13ಕ್ಕೆ ಸಮಾರೋಪ ಸಮಾರಂಭ ಹುಣಸೂರು ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಭಾಗವಹಿಸುವಂತೆ ಕೋರಿದರು.
ಈ ಬಾರಿ ತಡವಾಗಿಯಾದರೂ ಸಾಕಷ್ಟು ಮಳೆ ಬಿದ್ದಿದ್ದು, ಉದ್ಯಾನವನದ ಎಲ್ಲಾ ಕೆರೆಗಳು ಭರ್ತಿಯಾಗಿವೆ. ಅಲ್ಲದೆ ಬೇಸಿಗೆಯಲ್ಲಿ ಸೋಲಾರ್ ಪಂಪ್ ಸೆಟ್ ಮೂಲಕ ನೀರು ತುಂಬಿಸಿದ್ದು, ಉದ್ಯಾನವನ ಹಸಿರು ಮಯವಾಗಿ ನಳನಳಿಸುತ್ತಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ ಎಂದರು.
3 ಕಿ.ಮೀ.ಗೂ ಹೆಚ್ಚು ದೂರ ನಡೆದ ಜಾಥಾದಲ್ಲಿ ಎಸಿಎಫ್ಗಳಾದ ಪ್ರಸನ್ನಕುಮಾರ್, ಪೌಲ್ ಆಂಟೋನಿ, ವಲಯ ಅರಣ್ಯಾಧಿಕಾರಿಗಳಾದ ಸುರೇಂದ್ರ, ಶಿವರಾಂ, ಮಧುಸೂಧನ್,ಕಿರಣ್ ಕುಮಾರ್, ಇಲವಾಲದ ಅರಣ್ಯ ಇಲಾಖೆ ತರಬೇತಿ ನಿರತ ಡಿಆರ್‌ಎಫ್ಒ ತಂಡ, ಅರಣ್ಯ ಸಿಬ್ಬಂದಿ, ಟ್ಯಾಲೆಂಟ್ ಶಾಲೆ, ಮಹಿಳಾ ಸರ್ಕಾರಿ, ಜ್ಞಾನಧಾರಾ, ಸಂತಜೋಸಫರ ಪದವಿ ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.