Advertisement

ಕಾಳುಮೆಣಸಿಗೆ ವ್ಯಾಪಕ ಸೊರಗು ರೋಗ

10:44 AM Sep 27, 2018 | |

ಬೆಳ್ಳಾರೆ: ಅಡಿಕೆ ಬೆಲೆ ಕುಸಿತ, ಕೊಳೆರೋಗ, ಭತ್ತಕ್ಕೆ ಬೆಂಕಿ ರೋಗ ಇತ್ಯಾದಿಗಳಿಂದ ಕಂಗೆಟ್ಟಿದ್ದ ರೈತರು ಕಾಳು ಮೆಣಸು ಬೆಳೆಯಿಂದ ಒಂದಿಷ್ಟು ಹಣ ಕೈಗೆ ಬರಬಹುದು ಎಂದು ನಿರೀಕ್ಷಿಸುತ್ತಿರುವಾಗಲೇ ಅನಿಯಮಿತ ಮಳೆಯಿಂದಾಗಿ ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ವ್ಯಾಪಿಸಿದ ಕಾಳುಮೆಣಸಿನ ಬಳ್ಳಿಗೆ ಸೊರಗು ರೋಗದಿಂದ ತತ್ತರಿಸಿದ್ದಾರೆ.

Advertisement

ಅರಂತೋಡು ಸಮೀಪದ ಪೆರಾಜೆ, ಕಲ್ಲುಗುಂಡಿ, ಸಂಪಾಜೆ, ಚೆಂಬು, ಬೆಳ್ಳಾರೆ ಸಮೀಪದ ಬಾಳಿಲ, ನಿಂತಿಕಲ್ಲು, ಪೆರುವಾಜೆ ಇತರೆಡೆಗಳಲ್ಲಿ ಸೊರಗು ರೋಗ ಕಾಳುಮೆಣಸಿನ ಬಳ್ಳಿಗಳಿಗೆ ಹಬ್ಬಿದೆ. ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಅಡಿಕೆ ಇತ್ಯಾದಿ ಮರಗಳಿಗೇ ಕಾಳುಮೆಣಸಿನ ಬಳ್ಳಿಗಳನ್ನು ಹಬ್ಬಿಸಿ ಮಿಶ್ರ ಬೇಸಾಯ ಮಾಡುತ್ತಾರೆ. ಅಡಿಕೆ, ತೆಂಗಿನೊಂದಿಗೆ ಒಂದಿಷ್ಟು ಆರ್ಥಿಕ ಚೇತರಿಕೆಗೆ ಇದು ಕಾರಣವಾಗುತ್ತಿದೆ. ತಳಿಯನ್ನು ಅವಲಂಬಿಸಿ ಹಾಗೂ ಆರೈಕೆಯನ್ನು ಅನುಸರಿಸಿ, ನೆಟ್ಟ ಎರಡು – ಮೂರು ವರ್ಷಗಳಲ್ಲಿ ಕರಿಮೆಣಸು ಫ‌ಸಲು ಬಿಡಲು ಆರಂಭಿಸುತ್ತದೆ. ತೋಟಗಳ ಮಧ್ಯೆ ಕಾಳುಮೆಣಸಿನ ಬಳ್ಳಿಗಳನ್ನು ಹಬ್ಬಿಸಲೆಂದೇ ಕೆಲವು ರೈತರು ಸಿಲ್ವರ್‌ ಓಕ್‌ ಮರಗಳನ್ನು ಬೆಳೆಸುತ್ತಿದ್ದಾರೆ. ಗುಡ್ಡದ ಪ್ರದೇಶಗಳಲ್ಲಿ ಗೇರು, ಮಾವು, ತೆಂಗು, ಹೊಂಗೆ ಮರಗಳಲ್ಲಿ ಹಬ್ಬಿಸಿದರೂ ಹೇರಳವಾಗಿ ಫ‌ಸಲು ಬಿಡುತ್ತವೆ. ಕಡಿಮೆ ಬಂಡವಾಳದಿಂದ ಅಧಿಕ ಆದಾಯ ಪಡೆಯುವ ಬೆಳೆಗಳಲ್ಲಿ ಕರಿಮೆಣಸು ಮುಂಚೂಣಿಯಲ್ಲಿದೆ.

ಔಷಧ, ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ಬಹು ಬೇಡಿಕೆ ಇರುವ ಕಾರಣದಿಂದ ಕರಿಮೆಣಸು ಬೆಳೆಗಾರ ಧಾರಣೆ ಕುಸಿಯುವ ಭೀತಿಗೊಳ ಪಡಬೇಕಾಗಿಲ್ಲ. ಆದರೆ, ಅಧಿಕ ಮಳೆ ಕರಿಮೆಣಸಿಗೆ ಒಳಿತಲ್ಲ. ಮೂರು ತಿಂಗಳು ನಿರಂತರ ಗಾಳಿ-ಮಳೆ ಬಂತು, ಆಮೇಲೆ ಒಂದು ತಿಂಗಳಿಂದ ಸುಡುವ ಬಿಸಿಲು. ಹೀಗಾಗಿ, ಕರಿಮೆಣಸಿನ ಎರೆಗಳು ಕಪ್ಪಾಗಿ ಧರಾಶಾಹಿಯಾಗುತ್ತಿವೆ. ಕೃಷಿಯನ್ನೆ ನಂಬಿ ಕೃಷಿ ಸಾಲ ಮಾಡಿದ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿಯುವ ಪರಿಸ್ಥಿತಿಗೆ ಇದೂ ಕಾರಣವಾಗುತ್ತಿದೆ. ಕೊಳೆರೋಗದಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

 ಬಳ್ಳಿಗಳು ಸತ್ತಿವೆ
ನಾನು ಅಡಿಕೆ, ತೆಂಗು, ಕೃಷಿಯೊಂದಿಗೆ ಕಾಳುಮೆಣಸನ್ನು ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಮ್ಮ ತೋಟದ ಕಾಳುಮೆಣಸಿನ ಬಳ್ಳಿಗಳಲ್ಲಿ ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಕೆಲವು ಬಳ್ಳಿಗಳು ಸತ್ತು ಹೋಗಿವೆ.
– ವೆಂಕಪ್ಪ ಕಲ್ಲುಗುಂಡಿ, ಕಾಳುಮೆಣಸು ಕೃಷಿಕ

ಲಕ್ಷಣ ಗೋಚರಿಸಿದೆ
ಕೆಲವು ಕಡೆಗಳಲ್ಲಿ ಕರಿಮೆಣಸಿಗೆ ಸೊರಗು ರೋಗದ ಲಕ್ಷಣಗಳು ಗೋಚರಿಸಿವೆ. ಇದರಲ್ಲಿ ಎರಡು ಬಗೆ. ಒಂದು, ನಿಧಾನಗತಿಯಲ್ಲಿ ಕರಿಮೆಣಸಿನ ಬಳ್ಳಿಗೆ ರೋಗ ವ್ಯಾಪಿಸುತ್ತದೆ. ಇನ್ನೊಂದು ವಿಧದಲ್ಲಿ ಅತಿ ವೇಗವಾಗಿ ವ್ಯಾಪಿಸಿ, ಬಳ್ಳಿಯೇ ನಾಶವಾಗುತ್ತದೆ. ಬೋರ್ಡೋ ದ್ರಾವಣ ಹಾಗೂ ಇತರ ಕೀಟನಾಶಕಗಳ ಸಿಂಪಡಣೆಯಿಂದ ರೋಗ ಹತೋಟಿಗೆ ತರಬಹುದು.
– ಹರ್ಬನ್‌ ಪೂಜಾರ್‌,
ಸಹಾಯಕ ತೋಟಗಾರಿಕಾ
ನಿರ್ದೇಶಕರು, ಸುಳ್ಯ

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next