Advertisement

ಪಕ್ಷ ಕಟ್ಟಲು ಶ್ರಮಿಸಿದ ನಾನೇಕೆ ಹೊರ ಹೋಗಲಿ: ಯತ್ನಾಳ್‌ ಪ್ರಶ್ನೆ

11:14 PM Jan 15, 2023 | Team Udayavani |

ವಿಜಯಪುರ: ಉತ್ತರಾಯಣ ಆರಂಭವಾಗಿದ್ದು, ಇನ್ನು ನಮಗೆ ಒಳ್ಳೆಯ ದಿನಗಳು ಬರಲಿವೆ. ಟಿಕೆಟ್‌ ಕೊಡುವ ಜವಾ ಬ್ದಾರಿಯಲ್ಲಿ ನಾವೇ ಇರಲಿದ್ದೇವೆ ಎಂದು ಹೇಳಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ಮೂರು ದಶಕಗಳ ಹಿಂದೆ ಹಳ್ಳಿಗಳಿಗೆ ಓಡಾಡಿ ಪಕ್ಷ ಸಂಘಟನೆ ಮಾಡಿರುವ ನಾನೇಕೆ ಪಕ್ಷ ಬಿಡಬೇಕು? ಇಷ್ಟಕ್ಕೂ ಬಿಟ್ಟು ಹೋಗು ಎನ್ನಲು ಬಿಜೆಪಿ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ ಎಂದು ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಹಳ್ಳಿಗೆ ಹೋಗಿ ವಿಜಯಪುರಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದವರು ಯಾರೆಂದು ಕೇಳಿದರೆ ಜನಸಾಮಾನ್ಯರು ಉತ್ತರ ನೀಡು ತ್ತಾರೆ. “ಯತ್ನಾಳ್‌ ಗೌಡ ಬಿಜೆಪಿ ಪಾರ್ಟಿ ಕಟ್ಯಾನ. ನಮ್ಮೂರಿಗೆ ಕಮಲದ ಹೂ ತಂದಾನ’ ಎನ್ನುತ್ತಾರೆ ಎಂದರು.

ಶನಿವಾರ ಸಚಿವ ಮುರುಗೇಶ ನಿರಾಣಿ ಪಂಚಮಸಾಲಿ ಮೀಸಲಾತಿ ವಿಷಯದಲ್ಲಿ ನನ್ನ ಹೆಸರು ಎತ್ತದೇ ಪಕ್ಷ ಬಿಟ್ಟು ಹೋಗಬೇಕು, ಈ ಬಾರಿ ಟಿಕೆಟ್‌ ನೀಡುವುದಿಲ್ಲ ಎಂದಿದ್ದಾರೆ. ನನ್ನನ್ನು ಬಿಜೆಪಿ ಪಕ್ಷದಿಂದ ಹೊರ ಹಾಕುವ ತಾಕತ್ತು ಇವರ್ಯಾರಿಗೂ ಇಲ್ಲ. ಕೆಲವರಿಗೆ ನನ್ನನ್ನು ತುಳಿಯುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ಇಂಥ ಪ್ರಯತ್ನಗಳು ಬಹಳ ನಡೆದಿವೆ ಎಂದರು.

72 ಸಾವಿರ ಜನರಿಗೆ ಉದ್ಯೋಗ ನೀಡಿರುವ ನಾಯಕರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರು ನೀಡುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ಒಬ್ಬನೂ ಇವರ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ತರಹೇವಾರಿ ನಿಂದಿಸಿದ್ದಾರೆ ಎಂದರು.

ಮೀಸಲು ಬಗ್ಗೆ ವರಿಷ್ಠರಿಂದ ಸಕಾರಾತ್ಮಕ ಪ್ರತಿಕ್ರಿಯೆ
ವಿಜಯಪುರ: ಸಂಕ್ರಾಂತಿ ದಿನ ಬೆಳಗ್ಗೆ ಪಕ್ಷದ ವರಿಷ್ಠರು ಕರೆ ಮಾಡಿದ್ದು, ಪಂಚಮಸಾಲಿ ಮೀಸಲಾತಿ ಬಗ್ಗೆ ಒಳ್ಳೆಯ ಸುದ್ದಿ ನೀಡುತ್ತೇವೆ ಹಾಗೂ ಶೀಘ್ರವೇ ಸಭೆ ಕರೆಯುವ ಭರವಸೆ ನೀಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬೇಡಿಕೆ ಈಡೇರಿಸುವ ವಿಷಯದಲ್ಲಿ ವರಿಷ್ಠರು ಸಕಾರಾತ್ಮಕವಾಗಿದ್ದಾರೆ ಎಂಬ ಸಂದೇಶ ನೀಡಿದ್ದಾರೆ. ಜ. 21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಜಯಪುರಕ್ಕೆ ಆಗಮಿಸಲಿದ್ದು, ಪಂಚಮಸಾಲಿ ಮೀಸಲಾತಿ ವಿಷಯವೂ ಚರ್ಚೆಗೆ ಬರಲಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಕಲ್ಪಿಸುವ ವಿಷಯವಾಗಿ ಎರಡು ವರ್ಷಗಳಿಂದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ತಪಸ್ಸಿನ ರೀತಿಯಲ್ಲಿ ವಿವಿಧ ರೀತಿಯ ಹೋರಾಟ ನಡೆಸಿದ್ದಾರೆ. ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಸಹಿತ ವಿವಿಧ ರೀತಿಯ ಹೋರಾಟದ ಪ್ರತಿಫಲವಾಗಿ ಮಕರ ಸಂಕ್ರಮಣ ಉತ್ತರಾಯಣದ ಶುಭ ಪ್ರಸಂಗದಲ್ಲಿ ವರಿಷ್ಠರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಶೀಘ್ರವೇ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರ ಭೇಟಿಗಾಗಿ ದಿಲ್ಲಿಗೆ ಹೋಗುತ್ತಿದ್ದೇವೆ ಎಂದರು.

ಕೆಲವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದೆಂದು ನಾಯಕರು ಸೂಚಿಸಿದ್ದಾರೆ. ವರಿಷ್ಠರು ಎಲ್ಲವನ್ನೂ ಗಮನಿಸಿದ್ದಾರೆ. ಹೀಗಾಗಿ ಸಂಸ್ಕಾರ ಇಲ್ಲದವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next