Advertisement

Karnataka BJP: ಯತ್ನಾಳ್‌ ವಿರುದ್ಧದ ದೂರು ಪಡೆಯದ ತರುಣ್‌ ಚುಗ್‌

01:46 AM Dec 04, 2024 | Team Udayavani |

ಬೆಂಗಳೂರು: ನಿರೀಕ್ಷೆಯಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್‌ ಅಧ್ಯಕ್ಷತೆಯಲ್ಲಿ ನಡೆದ ಸಂಘಟನ ಪರ್ವ ಕಾರ್ಯಕ್ರಮದಲ್ಲೂ ಕೇಸರಿ ಪಾಳಯದ ಒಳಬೇಗುದಿ ಸ್ಫೋಟಗೊಂಡಿದ್ದು, ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಚಾಟನೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷರು ನೀಡಿದ ದೂರಿನ ಪತ್ರ ಸ್ವೀಕರಿಸುವುದಕ್ಕೆ ಚುಗ್‌ ನಿರಾಕರಿಸಿದ್ದಾರೆ. ಆದರೆ ನಿಮ್ಮ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಪ್ರಾರಂಭದಲ್ಲಿ 32 ಜಿಲ್ಲಾಧ್ಯಕ್ಷರ ಸಹಿಯುಳ್ಳ ಪತ್ರವನ್ನು ನೀಡಲು ನಿಯೋಗ ಮುಂದಾಯಿತು. ಆದರೆ ಅಸಮಾಧಾನಿತರ ಮನವಿ ಪತ್ರವನ್ನು ಸ್ವೀಕರಿಸುವುದಕ್ಕೆ ಖಡಾಖಂಡಿತವಾಗಿ ನಿರಾಕರಿಸಿದ ತರುಣ್‌ ಚುಗ್‌, ನಿಮ್ಮ ಭಾವನೆಗಳನ್ನು ನಾನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ. ಇದು ಸಂಘಟನಾತ್ಮಕ ಸಭೆಯಾಗಿರುವುದರಿಂದ ಪಕ್ಷದ ಬಲವರ್ಧನೆಯ ವಿಚಾರದ ಬಗ್ಗೆ ಮೊದಲು ಚರ್ಚೆ ನಡೆಸೋಣ ಎಂದರು.

ಆದರೆ ಜಿಲ್ಲಾಧ್ಯಕ್ಷರು ಪಟ್ಟು ಸಡಿಲಿಸಲು ಒಪ್ಪದೆ, ಯತ್ನಾಳ್‌ ಅಂಥವರಿದ್ದರೆ ಪಕ್ಷದ ಸಂಘಟನೆ ಹೇಗೆ ಸರಿಯಾಗುತ್ತದೆ? ಮೊದಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಕೊನೆಗೆ ತರುಣ್‌ ಚುಗ್‌ ಮತ್ತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಮೌನಕ್ಕೆ ಶರಣಾದರು ಎಂದು ತಿಳಿದು ಬಂದಿದೆ.

ಅಭಿಪ್ರಾಯ ಸಂಗ್ರಹಣೆ ಆಗಿಲ್ಲ: ವಿಜಯೇಂದ್ರ
ಕೇಂದ್ರದ ನಾಯಕರು ಬೆಂಗಳೂರಿಗೆ ಬಂದು ಸತತ 4 ತಾಸುಗಳ ಕಾಲ ಸಭೆ ಮಾಡಿದ್ದಾರೆ. ಸಂಘಟನಾತ್ಮಕ ಚರ್ಚೆ ಮಾತ್ರ ನಡೆದಿದೆ. ಯಾರ ವಿರುದ್ಧವೂ ಅಭಿಪ್ರಾಯ ಸಂಗ್ರಹಣೆ ಕಾರ್ಯವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಬಂಡಾಯ ಬಗ್ಗೆ ಡಿ.7ಕ್ಕೆ ಚರ್ಚಿಸಿ
ಬಿಜೆಪಿಯಲ್ಲಿ ನಡೆಯುತ್ತಿರುವ ಬಂಡಾಯ, ವಾದ-ವಿವಾದದ ಬಗ್ಗೆ ಡಿ. 7ರಂದು ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ. ಆದರೆ ಸಂಘಟನಾ ಪರ್ವಕ್ಕೆ ಸಂಬಂಧಪಟ್ಟಂತೆ ನೀಡಿರುವ ಗುರಿ, ಅಧ್ಯಕ್ಷ, ಪದಾಧಿಕಾರಿಗಳ ಚುನಾವಣೆಯನ್ನು ಡಿ. 12ರೊಳಗೆ ಪೂರ್ಣಗೊಳಿಸಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್‌ ಬಿಜೆಪಿ ರಾಜ್ಯ ಕೋರ್‌ ಕಮಿಟಿ ಸಭೆಯಲ್ಲಿ ರಾಜ್ಯ ಘಟಕಕ್ಕೆ ಸೂಚನೆ ನೀಡಿದ್ದಾರೆ.

Advertisement

ಪಾಲ್‌ಗೆ ಯತ್ನಾಳ್‌ ಬಣದಿಂದ ವರದಿ
ಬೆಂಗಳೂರು: ವಕ್ಫ್ ಪ್ರಕರಣಕ್ಕಾಗಿನ ಸಂಸತ್ತಿನ ಜಂಟಿ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಅವರನ್ನು ಬಿಜೆಪಿ ಹಿರಿಯ ಶಾಸಕ ಯತ್ನಾಳ್‌ ತಂಡ ಭೇಟಿ ಮಾಡಿದ್ದು, ರಾಜ್ಯದಲ್ಲಿನ ವಕ್ಫ್ ಸಮಸ್ಯೆಗಳ ಕುರಿತು ಮಧ್ಯಾಂತರ ವರದಿ ಸಲ್ಲಿಸಿದೆ. ಡಿ. 5ರಂದು ಈ ತಂಡ ಜಂಟಿ ಸಮಿತಿ ಸಭೆಗೂ ಹಾಜರಾಗಲಿದೆ.

ಈ ಸಂದರ್ಭ ಮಾಜಿ ಸಚಿವ ಅರವಿಂದ ಲಿಂಬಾವಳಿ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ವಿಚಾರದಲ್ಲಿ ರೈತರು ಮತ್ತು ಮಠಾಧೀಶರಿಗೆ ನ್ಯಾಯ ಕೊಡಿಸುತ್ತೇವೆ. ಈ ವಿಚಾರವನ್ನು ದಿಲ್ಲಿಗೆ ತಲುಪಿಸುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಅದರಂತೆ ನಡೆದುಕೊಂಡಿದ್ದೇವೆ ಎಂದರು.

ನಮ್ಮ ವಾರ್‌ ರೂಂಗೆ ಸುಮಾರು 400 ದೂರು ಬಂದಿದ್ದವು. 5 ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗಿದೆ. ಉಳಿದ ಜಿಲ್ಲೆಗಳಿಗೆ ಹೋಗಿ ಮಾಹಿತಿ ಸಂಗ್ರಹಿಸುತ್ತೇವೆ. 2ನೇ ಹಂತದ ಹೋರಾಟವನ್ನು ಸದ್ಯವೇ ಪ್ರಾರಂಭಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next