ಗಾಲೆ: ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಗಾಲೆ ಟೆಸ್ಟ್ ಪಂದ್ಯಕ್ಕೆ ಶನಿವಾರ ವಿಶ್ರಾಂತಿ ದಿನವಾಗಿತ್ತು. ದ್ವೀಪರಾಷ್ಟ್ರದಲ್ಲಿ ಶನಿವಾರ ಅಧ್ಯಕ್ಷೀಯ ಚುನಾವಣೆ ನಡೆದಿದ್ದು, ಲಂಕಾ ಕ್ರಿಕೆಟಿಗೆ ಸಂಬಂಧಿಸಿದವರೆಲ್ಲ ಮತದಾನದಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ವಿಶ್ರಾಂತಿ ನೀಡಲಾಗಿತ್ತು. ಮತ ಚಲಾಯಿಸಲು ಕೆಲವು ಕ್ರಿಕೆಟಿಗರು ಗಾಲೆಯಿಂದ 225 ಕಿ.ಮೀ. ದೂರದ ಕ್ಯಾಂಡಿಗೆ ತೆರಳಿದ್ದರು.
ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 35 ರನ್ನುಗಳ ಸಣ್ಣ ಮುನ್ನಡೆ ಗಳಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ಶ್ರೀಲಂಕಾ 4ಕ್ಕೆ 237 ರನ್ ಮಾಡಿದ್ದು, 3ನೇ ದಿನದಾಟದ ಅಂತ್ಯಕ್ಕೆ 202 ರನ್ ಲೀಡ್ ಹೊಂದಿದೆ.
ಶ್ರೀಲಂಕಾದ 305 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ನ್ಯೂಜಿಲ್ಯಾಂಡ್ 340 ರನ್ ಗಳಿಸಿತು. ಪ್ರವಾಸಿಗರ ಕೊನೆಯ 5 ವಿಕೆಟ್‌ಗಳನ್ನು 49 ರನ್ ಅಂತರದಲ್ಲಿ ಉರುಳಿಸಿದ ಲಂಕಾ, ಭಾರೀ ಹಿನ್ನಡೆಯಿಂದ ಪಾರಾಯಿತು.
ನ್ಯೂಜಿಲ್ಯಾಂಡ್ 4ಕ್ಕೆ 255 ರನ್ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಉಳಿದ 6 ವಿಕೆಟ್‌ಗಳಿಂದ ಕಿವೀಸ್‌ಗೆ ಗಳಿಸಲು ಸಾಧ್ಯವಾದದ್ದು 85 ರನ್ ಮಾತ್ರ. ಪ್ರಭಾತ್ ಜಯಸೂರ್ಯ 4 ವಿಕೆಟ್, ರಮೇಶ್ ಮೆಂಡಿಸ್ 3 ಮತ್ತು ಧನಂಜಯ ಡಿ ಸಿಲ್ವ 2 ವಿಕೆಟ್ ಉರುಳಿಸಿದರು. ಡ್ಯಾರಿಲ್ ಮಿಚೆಲ್ 57, ಗ್ಲೆನ್ ಫಿಲಿಪ್ಸ್ ಔಟಾಗದೆ 49 ರನ್ ಮಾಡಿದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಕಾರ ನಿಸ್ಸಂಕ (2) ಅವರನ್ನು ಶ್ರೀಲಂಕಾ ಬೇಗನೆ ಕಳೆದುಕೊಂಡಿತು. ದರೆ ದಿಮುತ್ ಕರುಣಾರತ್ನೆ (83) ಮತ್ತು ದಿನೇಶ್ ಚಂಡಿಮಾಲ್ (61) ಸೇರಿಕೊಂಡು 147 ರನ್ ಜತೆಯಾಟ ನಡೆಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-305 ಮತ್ತು 4 ವಿಕೆಟಿಗೆ 237. ನ್ಯೂಜಿಲ್ಯಾಂಡ್-249.