ತಿರುವನಂತಪುರಂ: ಕೋವಿಡ್ 19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿದರೆ ತಪ್ಪೇನಿದೆ. ಪ್ರಧಾನಿಗೆ ಈ ದೇಶದ ಜನರು ಅಧಿಕಾರವನ್ನು ನೀಡಿದ್ದಾರೆ…ಇದು ಕೇರಳ ಹೈಕೋರ್ಟ್ ಪಿಐಎಲ್ ವಿಚಾರಣೆ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯ.
ಇದನ್ನೂ ಓದಿ:ನಾನು ಸಿಎಂ ಆದರೆ ರಾಜ್ಯದ ಇತಿಹಾಸವೇ ಬದಲಾವಣೆಯಾಗುತ್ತದೆ: ಯತ್ನಾಳ್
ಕೋವಿಡ್ 19 ಲಸಿಕೆ ಪ್ರಮಾಣಪತ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಪಿ.ವಿ.ಕುಂಞಿಕೃಷ್ಣನ್, ಪ್ರಧಾನಿ ಫೋಟೋದಿಂದ ನಿಮಗೆ ಅವಮಾನವಾಗುತ್ತಿದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದರು.
ಈ ದೇಶದ ಜನರು ಪ್ರಧಾನಿಯನ್ನು ಆಯ್ಕೆ ಮಾಡಿ, ಅಧಿಕಾರ ನೀಡಿದ್ದಾರೆ. ಆದರೆ ಕೋವಿಡ್ ಪ್ರಮಾಣಪತ್ರದಲ್ಲಿ ಪ್ರಧಾನಿ ಭಾವಚಿತ್ರ ಪ್ರಕಟಿಸಿದರೆ ತಪ್ಪೇನಿದೆ. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಬೇರೆ ದೇಶಗಳಲ್ಲಿ ಇಂತಹ ಸಂಪ್ರದಾಯ ಇಲ್ಲ ಎಂದು ವಾದಿಸಿದರು. ಆಗ ಜಡ್ಜ್, ಆ ದೇಶಗಳಿಗೆ ಅವರ ಪ್ರಧಾನಿ ಬಗ್ಗೆ ಹೆಮ್ಮೆ ಇಲ್ಲದಿರಬಹುದು, ನಾವು ನಮ್ಮ ಪ್ರಧಾನಿ ಬಗ್ಗೆ ಹೆಮ್ಮೆ ಪಡೆಬೇಕು ಎಂದು ಮೌಖಿಕವಾಗಿ ಹೇಳಿದರು.
ಪ್ರಧಾನಮಂತ್ರಿಯಿಂದ ನಿಮಗೆ ಯಾಕೆ ನಾಚಿಕೆಯಾಗುತ್ತಿದೆ. ನಮಗೆ ರಾಜಕೀಯವಾಗಿ ವಿಭಿನ್ನ ದೃಷ್ಟಿಕೋನಗಳಿರಬಹುದು. ಆದರೆ ಅವರು (ಮೋದಿ) ಈಗ ನಮ್ಮ ಪ್ರಧಾನಿ ಎಂದು ಕೋರ್ಟ್ ಅರ್ಜಿದಾರರಿಗೆ ತಿಳಿಸಿದೆ.
ನನ್ನ ಕಕ್ಷಿದಾರರು ಹಿರಿಯ ನಾಗರಿಕರಾಗಿದ್ದಾರೆ, ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಭಾವಚಿತ್ರ ಹಾಕಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ದೇಶದ ಕೋಟ್ಯಂತರ ಜನರಿಗೆ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಇದ್ದಿರುವುದು ಸಮಸ್ಯೆಯಾಗಿಲ್ಲ, ನಿಮಗೆ ಮಾತ್ರ ಇದರಿಂದ ಯಾಕೆ ಸಮಸ್ಯೆಯಾಗಿದೆ ಎಂದು ಕೋರ್ಟ್ ಅರ್ಜಿದಾರರನ್ನು ಪ್ರಶ್ನಿಸಿದೆ.
ಈ ಅರ್ಜಿ ಪರಿಗಣಿಸಲು ಯಾವುದಾದರೂ ಅರ್ಹತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ಇಲ್ಲದಿದ್ದಲ್ಲಿ ಅರ್ಜಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಜಡ್ಜ್ ತಿಳಿಸಿದರು.