ನವದೆಹಲಿ: ರಿತು ಖಂಡೂರಿ ಭೂಷಣ್ ಅವರನ್ನು ಶನಿವಾರ(ಮಾರ್ಚ್ 26) ಉತ್ತರಾಖಂಡ್ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಿತು ಖಂಡೂರಿ ಅವರು ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ತಪ್ಪೇನಿದೆ ?: ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ಡಾ.ಯತೀಂದ್ರ
ಯಾರೀಕೆ ರಿತು ಖಂಡೂರಿ:
ದೇವಭೂಮಿ ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಪುತ್ರಿ ರಿತು ಖಂಡೂರಿ. ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕಿ ರಿತು ಅವರು ಕೋಟ್ವಾರ್ ನಲ್ಲಿ ತಮ್ಮ ತಂದೆಗಾದ ಅವಮಾನದ ಸೇಡನ್ನು ತೀರಿಸಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಸಿಂಗ್ ನೇಗಿಯನ್ನು ರಿತು ಖಂಡೂರಿ ಅವರು 3,687 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ರಿತು ಖಂಡೂರಿ 2017ರಲ್ಲಿ ಯಮಕೇಶ್ವರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. ರಿತು ಅವರು ಉತ್ತರಾಖಂಡ್ ನ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದಾರೆ.
ರಿತು ಖಂಡೂರಿ ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕಿಯಾಗಿದ್ದು, ಇವರು ಐಎಎಸ್ ಅಧಿಕಾರಿ ರಾಜೇಶ್ ಭೂಷಣ್ ಅವರನ್ನು ವಿವಾಹವಾಗಿದ್ದರು. ರಾಜೇಶ್ ಭೂಷಣ್ ಕೇಂದ್ರ ಆರೋಗ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.