Advertisement

ಚಿತ್ರಮಂದಿರ ಕಾರ್ಮಿಕರ ಗೋಳು ಕೇಳುವವರು ಯಾರು..?

10:38 AM Apr 20, 2020 | Suhan S |

ಕೋವಿಡ್ 19 ಬಂದು ಇಡೀ ಜಗತ್ತನ್ನೇ ನಲುಗಿಸಿದೆ. ಆದೆಷ್ಟೋ ಜೀವಗಳು ಪ್ರಾಣತೆತ್ತಿವೆ. ಚಿತ್ರರಂಗದಲ್ಲಂತೂ ದುಡಿಯುವ ಮನಸ್ಸುಗಳ ಸ್ಥಿತಿ ಹೇಳತೀರದು. ಅದರಲ್ಲೂ ಚಿತ್ರಮಂದಿರಗಳಲ್ಲಿ ನಿತ್ಯ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವ ಅಗತ್ಯವಿದೆ.

Advertisement

ಹೌದು, ಪ್ರಸ್ತುತ ಕರ್ನಾಟಕದಲ್ಲಿ ಹೆಚ್ಚು ಕಮ್ಮಿ ದೊಡ್ಡ, ಸಣ್ಣ ಚಿತ್ರಮಂದಿರಗಳನ್ನೂ ಲೆಕ್ಕ ಹಾಕಿದರೆ, ಸಂಖ್ಯೆ 900 ದಾಟುತ್ತದೆ. ಒಂದೊಂದು ಚಿತ್ರಮಂದಿರಗಳಲ್ಲಿ ಹೆಚ್ಚು ಕಮ್ಮಿ 10 ಜನ ಕಾರ್ಮಿಕರಂತೂ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕಸಗೂಡಿಸುವವರಿಂದ ಹಿಡಿದು, ಟಿಕೆಟ್‌ ಹರಿಯುವವನು, ಸೀಟಿಗೆ ಪ್ರೇಕ್ಷಕರನ್ನ ಕೂರಿಸುವವನು, ಪಾರ್ಕಿಂಗ್‌ ವ್ಯವಸ್ಥೆ ಮಾಡುವವನು, ಪ್ರೊಜೆಕ್ಟರ್‌ನಲ್ಲಿ ಕೆಲಸ ಮಾಡುವವನು, ಟಾಯ್ಲೆಟ್‌ ಇತ್ಯಾದಿ ಕ್ಲೀನ್‌ ಮಾಡುವವನು, ಕ್ಯಾಂಟೀನ್‌ ನೋಡಿಕೊಳ್ಳುವವನು ಹೀಗೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಏನಿಲ್ಲವೆಂದರೂ 10 ಸಾವಿರ ಇದೆ.

ಇವರೀಗ ತೊಂದರೆಯಲ್ಲಿದ್ದಾರೆ. ಚಿತ್ರರಂಗದ ಒಕ್ಕೂಟದ ಕಾರ್ಮಿಕರ ಸಹಾಯಕ್ಕೆ ಅಲ್ಲಿನ ಒಕ್ಕೂಟದ ಅಂಗ ಸಂಸ್ಥೆಗಳು ದಿನಸಿ, ಸಾಲ ಇತ್ಯಾದಿ ಅಗತ್ಯತೆ ಪೂರೈಸಿವೆ. ಸ್ಟಾರ್‌ಗಳು ಅವರ ನೆರವಿಗೆ ಬಂದಿವೆ. ಆದರೆ, ಚಿತ್ರಮಂದಿರಗಳಲ್ಲಿ ದುಡಿಯುವ ವರ್ಗಕ್ಕೆ ಯಾರು ಸಹಾಯಹಸ್ತ ಚಾಚಿದ್ದಾರೆ? ಕೆಲವು ಬೆರಳೆಣಿಕೆ ಚಿತ್ರಮಂದಿರಗಳ ಮಾಲಿಕರು ಸ್ವತಃ ತಮ್ಮ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ನೆರವಿಗೆ ಧಾವಿಸಿದ್ದಾರೆ. ಆದರೆ, ಕೆಲವು ಚಿತ್ರಮಂದಿರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ನೆರವಿಗೆ ಯಾರೂ ಆಗಿಲ್ಲ ಎಂಬ ಕೂಗು ಕೇಳಿಬರುತ್ತಿದೆ.

ಹಾಗೆ ನೋಡಿದರೆ, ಚಿತ್ರಮಂದಿರಗಳಲ್ಲಿ ದುಡಿಯುವ ವರ್ಗಕ್ಕೆ ಚಿತ್ರಮಂದಿರಗಳ ಮಾಲಿಕರೇ ದೊರೆ. ಅವರೇ ಅವರಿಗೆ ದೇವರು. ಅವರ ಮನಸ್ಸಲ್ಲಿ ನಮ್ಮ ದೊರೆ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೆ, ಇಂದು ದಿನಸಿಗೆ ವ್ಯವಸ್ಥೆ ಮಾಡುತ್ತಾರೆ. ನಾಳೆ ಕಾಸು ಕೊಡಬಹುದು ಎಂಬ ಆಸೆಯ ಕಂಗಳಿಂದ ಕಾಯುತ್ತಿರುತ್ತಾರೆ. ಎಷ್ಟೋ ಚಿತ್ರಮಂದಿರಗಳ ಮಾಲಿಕರು ಕಾರ್ಮಿಕರ ನೆರವಿಗೆ ಆಗಿದ್ದಾರೆ. ಕೆಲವು ಆ ಕಡೆ ಗಮನಿಸಿಲ್ಲ. ಅಂತಹವರಿಗೆ ಸಹಾಯ ಮಾಡಬೇಕಾದ ಅನಿವಾರ್ಯತೆ ಇದೆ.

ಈಗಾಗಲೇ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ರುವ ಚಿತ್ರಮಂದಿರಗಳ ಕಾರ್ಮಿಕರಿಗೆ ಶಾಸಕ ಗೂಳಿ ಹಟ್ಟಿ ಶೇಖರ್‌ ದಿನಸಿ ವಿತರಿಸಿ, ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಅವರಿಗೂ ಸಿನಿಮಾರಂಗಕ್ಕೂ ಸಂಬಂಧವೇ ಇಲ್ಲ. ಆದರೂ, ಕಾರ್ಮಿಕರಿಗೂ ಕಷ್ಟ ಇದೆ. ಅವರಿಗೂ ಮಕ್ಕಳು, ಮನೆ ಇದೆ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ದಿನಸಿ ವ್ಯವಸ್ಥೆ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿರುವ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ, ಚಿತ್ರರಂಗದ ಇತರೆ ಕಾರ್ಮಿಕ ವರ್ಗಕ್ಕೆ ಫ‌ಂಡ್‌ ಇರುತ್ತೆ. ಆದರೆ, ಚಿತ್ರಮಂದಿರದ ಕಾರ್ಮಿಕರಿಗೆ ಯಾವುದೇ ಫ‌ಂಡ್‌ ಇಲ್ಲ. ಹಾಗಾಗಿ ಮಾಲಿಕರು ತಮ್ಮ ಕಾರ್ಮಿ ಕರ ನೋವಿಗೆ ಸ್ಪಂದಿಸಬೇಕು ಎಂಬುದು ಅವರ ಮನವಿ.

Advertisement

ಅದೇನೆ ಇರಲಿ, ಚಿತ್ರಮಂದಿರವನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿ, ಬರುವ ಪ್ರೇಕ್ಷಕರನ್ನು ಪ್ರೀತಿಯಿಂದಲೇ ಎಲ್ಲವನ್ನೂ ವ್ಯವಸ್ಥೆಗೊಳಿಸಿ, ಖುಷಿಪಡಿಸುವ ಕಾರ್ಮಿಕರ ಸಮಸ್ಯೆಗೆಎಲ್ಲರೂ ಸ್ಪಂದಿಸುವಂತಾಗಲಿ ಎಂಬುದೇ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next