ಬೆಂಗಳೂರು: ನವಿಲು ಕೊಂದ ಪ್ರಕರಣ ಸಂಬಂಧ ನಾಲ್ವರು ವಿದ್ಯಾರ್ಥಿಗಳನ್ನು ಸೋಲದೇವನಹಳ್ಳಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಹೆಸರುಘಟ್ಟದ ಬಿಳಿಜಾಗಿ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಕಿರಣ್ ಹಾಗೂ ಇತರೆ ಮೂವರು ವಿದ್ಯಾರ್ಥಿಗಳನ್ನು ವಿಚಾರೆಗೊಳಪಡಿಸಲಾಗಿದೆ. ಆದರೆ, ಪ್ರಕರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಇಲ್ಲ ಎಂಬುದು ಖಾತ್ರಿಯಾಗಿದ್ದು, ಘಟನೆ ಸಂಬಂಧ “ನಮ್ಮ-100’ಕ್ಕೆ ಕರೆ ಮಾಡಿ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ “ನಮ್ಮ-100’ಕ್ಕೆ ರಾಜು ಎಂಬಾತ ಕರೆ ಮಾಡಿ ಹೆಸರುಘಟ್ಟದ ಬಿಳಿಜಾಗಿ ರಸ್ತೆಯಲ್ಲಿರುವ ಕಿರಣ್ ಎಂಬುವವರ ಮನೆಯಲ್ಲಿ ನವಿಲು ಸತ್ತು ಬಿದ್ದಿದ್ದೆ ಎಂದು ಕರೆ ಸ್ಥಗಿತಗೊಳಿಸಿದ. ಈ ಮಾಹಿತಿ ಪಡೆದ ಸಹಾಯವಾಣಿ ಸಿಬ್ಬಂದಿ ಕೂಡಲೇ ಸೋಲದೇವನಹಳ್ಳಿ ಪಿಎಸ್‌ಐ ಅಂಜನಪ್ಪ ಅವರಿಗೆ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮನೆಯ ಕಾಂಪೌಂಡ್‌ನಲ್ಲಿ ನವಿನ ಮೃತ ದೇಹ ಪತ್ತೆ ಹಚ್ಚಿ, ಕಿರಣ್ ಮತ್ತು ಇತರೆ ಮೂವರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾತ್ರ ಇಲ್ಲ ಎಂಬುದು ಗೊತ್ತಾಗಿದೆ.
ಇತ್ತ ಸಹಾಯವಾಣಿಗೆ ಕರೆ ಮಾಡಿದ ರಾಜು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಮಾಹಿತಿ ನೀಡಿದ ವ್ಯಕ್ತಿಯ ವಿಳಾಸ ಕೊಳ್ಳೆಗಾಲ ಎಂಬುದು ಪತ್ತೆಯಾಗಿದ್ದು, ಆರೋಪಿ ಸಹಾಯವಾಣಿಗೆ ಕರೆ ಮಾಡಿದ ಬಳಿಕ ದೊಡ್ಡಬಳ್ಳಾಪುರ ಹಾಗೂ ಹೆಸರುಘಟ್ಟದಲ್ಲಿ ನೆಟ್‌ವರ್ಕ್ ಕಾರ್ಯನಿರ್ವಹಿಸಿ, ಬಳಿಕ ಸ್ಥಗಿತಗೊಂಡಿದೆ. ಆತನ ಪತ್ತೆ ಗಾಗಿ ಕೊಳ್ಳೇಗಾಲಕ್ಕೆ ಒಂದು ತಂಡ ತೆರಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರಣ್ ಮತ್ತು ಸ್ನೇಹಿತರ ವಿರುದ್ಧ ಪಿತೂರಿ: ಸಹಾಯವಾಣಿಗೆ ಕರೆ ಮಾಡಿದ ರಾಜು ದೂರು ನೀಡುವಾಗ ಕಿರಣ್ ಮನೆ ಮಾಲೀಕರ ಹೆಸರನ್ನು ಸಹ ಸ್ಪಷ್ಟವಾಗಿ ಹೇಳಿದ್ದಾನೆ. ಆದರೆ, ಇದೀಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಿರಣ್ ಮತ್ತು ಸ್ನೇಹಿತರನ್ನು ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ನವಿಲನ್ನು ಕೊಲೆಗೈದ ಆರೋಪಿಗಳು ಕಲ್ಲುಗಳಿಂದ ಕೊಂದು ಮೃತ ದೇಹವನ್ನು ಕಿರಣ್ ಮನೆ ಮುಂದೆ ಬಾಸಾಡಿ ಪರಾರಿಯಾಗಿದ್ದಾರೆ. ಬಳಿಕ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು, ಕೆಲ ವ್ಯಕ್ತಿಗಳು ಅನುಮಾನಸ್ಪದವಾಗಿ ಸಂಚರಿಸುತ್ತಿರುವುದು ಕಂಡು ಬಂದಿದೆ ಎಂದು ಸೋಲದೇವನಹಳ್ಳಿ ಪೊಲೀಸರು ತಿಳಿಸಿದ್ದಾರೆ.