Advertisement
ನಗರದ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಮುಖ ರಸ್ತೆಗಳನ್ನು ವೈಟ್ ಟಾಪಿಂಗ್‌ನಡಿ ಅಭಿವೃದ್ಧಿಪಡಿಸಲು ಪಾಲಿಕೆ ಮುಂದಾಗಿತ್ತು. ಆದರೆ, ಹಲವೆಡೆ ಪ್ರಮುಖ ರಸ್ತೆಗಳಲ್ಲಿ ಏಕಕಾಲಕ್ಕೆ ಕಾಮಗಾರಿ ಆರಂಭವಾಗಿದ್ದರಿಂದ ಪರ್ಯಾಯ ಮಾರ್ಗಗಳೇ ಇಲ್ಲದಂತಾಗಿದ್ದು, ಕಾಮಗಾರಿ ಸ್ಥಳದಲ್ಲೇ ಸಂಚರಿಸುವುದು ಅನಿವಾರ್ಯವಾಗಿತ್ತು. ಇದರಿಂದ ಜನ ಬೇಸತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಈ ನಿರ್ಧಾರಕ್ಕೆ ಮುಂದಾಗಿದೆ.
Related Articles
Advertisement
ಅಧಿಕಾರಿಗಳಿಗೆ ತರಾಟೆ: ಕಾಮಗಾರಿಯಿಂದಾಗುತ್ತಿರುವ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದ ಅಧಿಕಾರಿಗಳನ್ನು ಶುಕ್ರವಾರದ ಸಭೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಲಮಿತಿಯೊಳಗೆ ಕಾಮಗಾರಿ ಮುಗಿಸದ ಕಾರಣ ಜನ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ವಿಫಲವಾಗಿರುವುದರಿಂದ ಅನಿವಾರ್ಯವಾಗಿ ಕಾಮಗಾರಿಗಳಿಗೆ ತಾತ್ಕಾಲಿಕ ತಡೆ ನೀಡಲು ಸೂಚಿಸಿದ್ದಾರೆ ಎಂದು ಸಭೆಯಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾತ್ಕಾಲಿಕ ಸ್ಥಗಿತ: ಮೊದಲ ಹಂತದಲ್ಲಿ 281 ಕೋಟಿ ರೂ. ವೆಚ್ಚದಲ್ಲಿ ಐದು ಮಾರ್ಗಗಳ 39.80 ಕಿ.ಮೀ. ಉದ್ದದ ವೈಟ್‌ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ನೀಡಲಾಗಿತ್ತು. ಅದರಂತೆ ಮೈಸೂರು ರಸ್ತೆ, ಹೊಸೂರು ರಸ್ತೆ, ನಾಗವಾರ ಹೊರವರ್ತುಲ ರಸ್ತೆ, ವಿಜಯನಗರ ಮೆಟ್ರೊ ಸ್ಟೇಷನ್ ಹಾಗೂ ಕೋರಮಂಗಲ 20ನೇ ಮುಖ್ಯರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಈವರೆಗೆ ಐದೂ ರಸ್ತೆಗಳಲ್ಲಿ ಒಟ್ಟು 9 ಕಿ.ಮೀ. ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ. ಆ ಬಳಿಕ ವೈಟ್‌ಟಾಪಿಂಗ್ ಸ್ಥಗಿತಕ್ಕೆ ಪಾಲಿಕೆ ನಿರ್ಧರಿಸಿದೆ.
2 ಸಂಸ್ಥೆಗಳ ಕಾಮಗಾರಿ ಬಿಎಂಆರ್‌ಸಿಎಲ್ ಸಂಸ್ಥೆಯಿಂದ ಮೈಸೂರು ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಗಳಲ್ಲಿ ಮೆಟ್ರೋಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದಾಗಿ ಈ ಹಿಂದೆಯೇ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇದೀಗ ಪಾಲಿಕೆಯು ವೈಟ್‌ಟಾಪಿಂಗ್ ಕಾಮಗಾರಿ ಕೈಗೊಂಡಿರುವುದರಿಂದ ಮತ್ತಷ್ಟು ದಟ್ಟಣೆ ಉಂಟಾಗುತ್ತಿದೆ. ಇದರೊಂದಿಗೆ ವೈಟ್‌ಟಾಪಿಂಗ್ ನಡೆಯುತ್ತಿರುವ ಸಮೀಪದ ರಸ್ತೆಗಳಲ್ಲಿಯೂ ಇತರೆ ಕಾಮಗಾರಿ ನಡೆದಿರುವುದರಿಂದ ಪರ್ಯಾಯ ಮಾರ್ಗಗಳಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.
● ವೆಂ. ಸುನೀಲ್ ಕುಮಾರ್