Advertisement
ಹೌದು.. ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿ ಜಂಕ್ಷನ್ನಲ್ಲಿದ್ದ ಹಳೆಯ ಬಸ್ ನಿಲ್ದಾಣವನ್ನು ಚತುಷ್ಪಥ ಕಾಮಗಾರಿಗೆ ಆಹುತಿ ಪಡೆದು, ಈಗ ಜನರು ಬಸ್ಸಿಗಾಗಿ ಗಾಳಿ-ಮಳೆ, ಬಿಸಿಲಿಗೆ ಯಾವುದೇ ರಕ್ಷಣೆಯಿಲ್ಲದೆ, ರಸ್ತೆ ಬದಿಯೇ ನಿಲ್ಲುವಂತಾಗಿದೆ. ಹೆದ್ದಾರಿಗಾಗಿ ಬಸ್ ತಂಗುದಾಣ ಕೆಡವಿದ ಅದರ ಮರು ನಿರ್ಮಾಣ ವಿಚಾರದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಅಥವಾ ಕಾಮಗಾರಿ ಹೊಣೆ ಹೊತ್ತ ಗುತ್ತಿಗೆದಾರರಾಗಲಿ ಆಸ್ಥೆ ವಹಿಸಿಲ್ಲ. ಇದರಿಂದ ಬಸ್ಸಿಗಾಗಿ ರಸ್ತೆ ಬದಿಯೇ ಕಾಯಬೇಕಾದ ಅನಿವಾರ್ಯತೆ ಪ್ರಯಾಣಿಕರದು.
ಹೆಮ್ಮಾಡಿ ಜಂಕ್ಷನ್ ಹತ್ತಾರು ಊರುಗಳಿಗೆ ಸಂಪರ್ಕ ಕೊಂಡಿ. ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವುದು ಮಾತ್ರವಲ್ಲದೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಮಂಗಳೂರು, ಉಡುಪಿ, ಕೇರಳ ಭಾಗದಿಂದ ಬರುವ ಭಕ್ತರು ಇದೇ ಜಂಕ್ಷನ್ ಮೂಲಕವೇ ತೆರಳಬೇಕು. ಇದಲ್ಲದೆ ಬಗ್ವಾಡಿ ದೇಗುಲ, ಮಹಿಷಮರ್ದಿನಿ ದೇಗುಲ, ನೆಂಪು, ವಂಡ್ಸೆ, ಮಾರಣಕಟ್ಟೆ, ಚಿತ್ತೂರು, ಜಡ್ಕಲ್- ಮುದೂರು ಮತ್ತಿತರ ಹತ್ತಾರು ಊರುಗಳಿಗೆ ಇದೇ ಮಾರ್ಗವಾಗಿ ತೆರಳಬೇಕು. ಎಲ್ಲೆಲ್ಲೋ ನಿಲ್ಲುವ ಬಸ್ಗಳು
ಬಸ್ ಬೇ ಅಂತ ಒಮ್ಮೆ ಮಾಡಿದ್ದರೂ, ಈಗ ಅಲ್ಲಿ ಬಸ್ಗಳು ನಿಲ್ಲದೆ, ಎಲ್ಲೆಲ್ಲೋ ರಸ್ತೆ ಬದಿ ಬಸ್ಗಳು ನಿಲ್ಲುತ್ತಿವೆ. ಇದರಿಂದ ಜಂಕ್ಷನ್ನಲ್ಲೂ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಸುಸಜ್ಜಿತ ಬಸ್ ನಿಲ್ದಾಣ ಮಾಡಿ, ಬಸ್ಗಳು ನಿಲ್ಲಲು ಒಂದಷ್ಟು ಜಾಗ ಮಾಡಿಕೊಟ್ಟರೆ ಪೇಟೆಗೂ ಒಂದು ರೀತಿಯ ಶೋಭೆ ತಂದಂತಾಗಲಿದೆ.
Related Articles
ಬಸ್ ತಂಗುದಾಣಗಳು ಇಲ್ಲದೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರಿಗೂ ತಾವು ಯಾವ ಊರನ್ನು ದಾಟಿ ಮುಂದೆ ಹೋಗುತ್ತಿದ್ದೇವೆ ಎಂಬ ಅರಿವೂ ಆಗುವುದಿಲ್ಲ. ಹಿಂದೆ ಬಸ್ ನಿಲ್ದಾಣಗಳು ಇದರ ಸ್ಪಷ್ಟ ಮಾಹಿತಿಯನ್ನು ನೀಡುತ್ತಿದ್ದವು.
Advertisement
ಬೆಳಗ್ಗೆ ಇಲ್ಲಿ ಜನವೋ ಜನಹೆಮ್ಮಾಡಿಯಿಂದ ಕುಂದಾಪುರಕ್ಕೆ ತೆರಳುವ ನೂರಾರು ಮಂದಿ ಶಾಲಾ, ಕಾಲೇಜು ಮಕ್ಕಳು ರಸ್ತೆ ಬದಿಯೇ ಬಸ್ಸಿಗಾಗಿ ನಿಲ್ಲುತ್ತಾರೆ. ಮಳೆಗೂ ಕೊಡೆ ಹಿಡಿದುಕೊಂಡೇ ನಿಲ್ಲಬೇಕಾದ ಪರಿಸ್ಥಿತಿ. ಇನ್ನು ಬೆಳಗ್ಗೆ 8-9 ಗಂಟೆ ಹೊತ್ತಿನಲ್ಲಂತೂ ಇಲ್ಲಿ ಜನವೋ ಜನ. ಕುಂದಾಪುರ ಕಡೆಗೆ ನಿತ್ಯ ಕೆಲಸಕ್ಕೆ ಹೋಗುವವರು, ಉದ್ಯೋಗಿಗಳು, ಕಚೇರಿ ಕಾರ್ಯಗಳಿಗೆ ಹೋಗುವವರು, ಸೇರಿದಂತೆ ನೂರಾರು ಮಂದಿ ಬಸ್ ತಂಗುದಾಣವಿಲ್ಲದೆ ಪರದಾಡುವಂತಾಗಿದೆ. ಹಿಂದೆ ಇಲ್ಲಿ ಬಸ್ ನಿಲ್ದಾಣವಿತ್ತು. ಹೆದ್ದಾರಿ ಕಾಮಗಾರಿಯಿಂದ ಅದನ್ನು ತೆಗೆದಿದ್ದಾರೆ. ಈಗ ಕಾಮಗಾರಿ ಆದರೂ, ಬಸ್ ನಿಲ್ದಾಣ ಮಾಡಿಕೊಟ್ಟಿಲ್ಲ. ಈಗಲಾದರೂ ಅದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಲಿ ಎಂದು ಹೆಮ್ಮಾಡಿಯ ವರ್ತಕರಾದ ದಿನೇಶ್ ಕೊಠಾರಿ ಒತ್ತಾಯಿಸಿದ್ದಾರೆ. ಉತ್ತಮ ಬಸ್ ನಿಲ್ದಾಣ ಇಲ್ಲಿತ್ತು
ಹೆದ್ದಾರಿ ಅಭಿವೃದ್ಧಿ ಹೆಸರಲ್ಲಿ ಆ ಮಾರ್ಗ ಹಾದುಹೋಗುವ ಸ್ಥಳೀಯ ಜನರ ಮೂಲ ಆವಶ್ಯಕತೆಗಳ ಬಗ್ಗೆ ಮಾತ್ರ ಹೆದ್ದಾರಿ ಪ್ರಾಧಿಕಾರ ಗಮನವೇ ಹರಿಸದಿರುವುದು ದುರಂತ. ಹೆಮ್ಮಾಡಿಯಲ್ಲಿಯೂ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭವಾಗುವ ಮೊದಲು ಬಹಳಷ್ಟು ವರ್ಷಗಳಿಂದ ಒಂದು ಉತ್ತಮವಾದ ನಿಲ್ದಾಣವಿತ್ತು. ಬಸ್ಸಿಗಾಗಿ ಕಾಯುವ ಊರ ಜನರಿಗೆ ಗಾಳಿ-ಮಳೆ, ಬಿಸಿಲಿಗೆ ಆ ತಂಗುದಾಣವೇ ಆಸರೆಯಾಗಿತ್ತು. ಆದರೆ ಏಳೆಂಟು ವರ್ಷಗಳ ಹಿಂದೆ ಆರಂಭಗೊಂಡ ಈ ಚತುಷ್ಪಥ ಕಾಮಗಾರಿಯು ಇದ್ದ ಒಂದು ಬಸ್ ನಿಲ್ದಾಣವನ್ನು ಸಹ ಬಲಿ ಪಡೆಯಿತು. ಈಗ ಹೆಮ್ಮಾಡಿಯಲ್ಲಿ ಬಸ್ ನಿಲ್ದಾಣವನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಚತುಷ್ಪಥವಾದರೂ, ಎರಡೂ ಬದಿಯಲ್ಲಿ ಸ್ಥಳೀಯ ಜನರಿಗೆ ನಿಲ್ಲಲು ಒಂದು ಸಣ್ಣ ನಿಲ್ದಾಣವೂ ಇಲ್ಲದಾಗಿದೆ. ಅದಕ್ಕಾಗಿ ಜಾಗವನ್ನು ಇನ್ನೂ ಸಹ ನಿಗದಿಪಡಿಸಿಲ್ಲ. ಬಸ್ ನಿಲ್ದಾಣವಿಲ್ಲದ ಊರಿನಂತಾಗಿದೆ ಹೆಮ್ಮಾಡಿ. ಅಂಡರ್ಪಾಸ್ನಿಂದ ಬಾಕಿ
ಹೆಮ್ಮಾಡಿಯಲ್ಲಿ ಬಸ್ ನಿಲ್ದಾಣ ಅಗತ್ಯವಿದೆ. ಪಂಚಾಯತ್ನಿಂದ ಪತ್ರ ಬರೆದು ಕೇಳಲಾಗಿದೆ. ಆದರೆ ಅಂಡರ್ಪಾಸ್ ಬೇಡಿಕೆಯಿದ್ದು, ಅದಕ್ಕೆ ಈಗಗಾಲೇ ಪ್ರಸ್ತಾವನೆ ಸಹ ಸಲ್ಲಿಕೆಯಾಗಿದೆ. ಹಾಗಾಗಿ ಈಗ ಮಾಡಿದರೂ, ಮತ್ತೆ ತೆಗೆಯಬೇಕಾಗಬಹುದು. ಅಂಡರ್ಪಾಸ್ ಆದ ಬಳಿಕ ಇಲ್ಲಿ ನಿಲ್ದಾಣ ಮಾಡಲು ಖಾಸಗಿಯವರೇ ಸಿದ್ಧರಿದ್ದಾರೆ. ಕನ್ನಡಕುದ್ರುವಿನಲ್ಲಿ ಎರಡು ಕಡೆ ಈಗಾಗಲೇ ದಾನಿಗಳಿಂದ ಮಾಡಲಾಗಿದೆ.
– ಯು.ಸತ್ಯನಾರಾಯಣ ರಾವ್, ಮಾಜಿ ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ. -ಪ್ರಶಾಂತ್ ಪಾದೆ