Advertisement

Desi Swara: ಆಸೆಗೆ ಮಿತಿ ಎಲ್ಲಿದೆ…?: ಆಸೆಯ ಆಗುಹೋಗುಗಳ ನಡುವಿನ ಜೀವನ

12:01 PM Jan 06, 2024 | Team Udayavani |

ಆಸೆ. ಮನುಷ್ಯನಿಗೂ, ಆಸೆಗೂ ಅವಿನಾಭಾವ ಸಂಬಂಧ. ಆಸೆಯೇ ಇಲ್ಲದ ಮನುಷ್ಯನಿಲ್ಲ, ಮನುಷ್ಯನಿಗಿರುವಷ್ಟು ಆಸೆ ಬೇರೆ ಯಾವ ಜೀವಿಗೂ ಇಲ್ಲ. ಇದಕ್ಕೆ ನಾವು ನೀವು ಹೊರತಾ? ಕೆಲವೊಬ್ಬರ ಜೀವನಚರಿತ್ರೆ ಓದುವಾಗ ನನಗೆ ತಿಳಿದದ್ದು ಎಲ್ಲೋ ಲಕ್ಷಕ್ಕೆ ಒಬ್ಬರು ಆಸೆ ಕಡಿಮೆ ಇದ್ದವರು ಎನ್ನುವ ವಿಷಯ. ಇದರಲ್ಲಿ ನಡೆದಾಡುವ ದೇವರಂತಹ ಸಾಧು ಸಂತರು, ಯೋಗಿಗಳು, ಮಹಾನ್‌ ಸಾಧಕರು, ಅಬ್ದುಲ್‌ ಕಲಾಂರಂತ ಬುದ್ಧಿಜೀವಿಗಳನ್ನ ಸೇರಿಸಬಹುದು. ಸಾಧನೆಯ ಉತ್ತುಂಗದಲ್ಲಿದ್ದು ಸರಳ ಜೀವನವನ್ನು ಸಾಗಿಸುವವರನ್ನು ಈ ಪಟ್ಟಿಗೆ ಸೇರಿಸಬಹುದೇನೋ. ನಮ್ಮ ಅಪ್ಪ ಅಮ್ಮನಿಗೆ ಹೆಣ್ಣು ಮಗು ಬೇಕು ಎಂಬ ಆಸೆ ಇತ್ತಂತೆ. ಅಂತೆಯೇ ನಾನು ಹುಟ್ಟಿದೆ ಹØ ಹØ ಹØ..ಅಂದರೆ ನನ್ನ ಮೂಲ ಆಸೆಯಿಂದಲೇ ಪ್ರಾರಂಭ.

Advertisement

ಮಕ್ಕಳಿಗೆ ಸ್ವಾಭಾವಿಕವಾಗಿ ಏನೆಲ್ಲ ಆಸೆ ಇರುತ್ತದೆಯೋ ನನಗೂ ಇತ್ತು. ಆದರೆ ಅಂದಿನ ಆರ್ಥಿಕತೆಗೆ ಅನುಗುಣವಾಗಿ ಕೆಲವು ನೆರವೇರುತ್ತಿತ್ತು, ಇನ್ನು ಕೆಲವು ಆಸೆಯಾಗಿಯೇ ಉಳಿಯುತ್ತಿತ್ತು. ಯವ್ವನಕ್ಕೆ ಕಾಲಿಟ್ಟೆ…ಆಸೆಗಳ ಪಟ್ಟಿ ದೊಡ್ಡದಾಗುತ್ತ ಹೋಯಿತು. ಇಲ್ಲಿ ಸಿಗದೇ ಹೋದದ್ದು ನನಗೆ ಷರತ್ತಾಗಿ ಕಾಣಿಸಿತು. ನನ್ನ ಆಸೆಗಳನ್ನು ಪೂರೈಸಿಕೊಳ್ಳುವ ಹಠ, ಛಲ ನನ್ನಲ್ಲಿ ಮೂಡಿತು. ಈಗ ನನಗೆ ದೊರಕದಿದ್ದರೂ ನಾಳೆ ನಾನೇ ದುಡಿದು ತೀರಿಸಿಕೊಳ್ಳುವೆ ಎಂಬ ಹಠಕ್ಕೆ ಬಿದ್ದೆ. ಒಳ್ಳೆಯದಲ್ಲವೇ ? ಆದರೆ ಬೆಳೆಯುತ್ತಾ ಬೆಳೆಯುತ್ತಾ ನಾವು ಪ್ರಬುದ್ಧರಾಗುತ್ತೇವೆ. ಈ ಸಮಯದಲ್ಲಿ ಕೆಲವು ಆಸೆಗಳು ಸಮಯದೊಂದಿಗೆ ಮಾಸಿಹೋಗುತ್ತದೆ. ಜೀವನ ಬೆಳೆದಂತೆ ಜನರ ಪರಿಚಯವು ಬೆಳೆಯುತ್ತದೆ, ಕುಟುಂಬವೂ ರೂಪುಗೊಳ್ಳುತ್ತದೆ. ಆಗ ಕೇವಲ ನಮ್ಮ ಆಸೆಯಲ್ಲ, ನಮ್ಮವರ ಆಸೆಯನ್ನು ಗಮನದಲ್ಲಿರಿಸಿಕೊಳ್ಳಬೇಕಾದ ಸಂದರ್ಭ ಉಂಟಾಗುತ್ತದೆ.

ಈಗ ನೋಡಿ ನನ್ನ ಆಸೆಗಳು ಬದಿಗೆ ಹೋಗಿವೆ ಹಾಗೆ ನನ್ನ ಮಕ್ಕಳ ಆಸೆಗಳನ್ನ ತೀರಿಸುವ ಸ್ಪರ್ಧೆಯಲ್ಲಿ ಇದ್ದೇನೆ. ನಮ್ಮ ಹಿರಿಯರು ಇಂದಿಗೂ ಇದರ ಪ್ರಯತ್ನ ಬಿಟ್ಟಿಲ್ಲ ಬಹುಷಃ. ಇದರಿಂದ ನನಗೆ ತಿಳಿದದ್ದು ಏನೆಂದರೆ ಆಸೆ ಪ್ರತಿಯೊಬ್ಬ ಮನುಷ್ಯನ ವಯಸ್ಸು, ಸಂಗಡನೆ, ಸುತ್ತಮುತ್ತಲಿನ ಪರಿಸರದಿಂದ ಪ್ರಭಾವಕ್ಕೆ ಒಳಗಾಗುತ್ತದೆ. ಹಾಗೆಯೇ ಬೆಳೆಯುತ್ತ ಹೋಗುತ್ತದೆ.

ಹುಟ್ಟುವಾಗ ಪ್ರಜ್ಞೆ, ಬುದ್ಧಿ ಬೆಳೆಯುವ ವರೆಗೂ ಆಸೆ ಎಂಬ ಎರಡಕ್ಷರದ ಪರಿಚಯವೂ ಇರುವುದಿಲ್ಲ. ಆದರೆ ಮುಂದೆ ಇಡೀ ಜೀವನವೇ ಆಸೆಯೊಳಗೆ ಕಳೆದುಹೋಗುತ್ತದೆ. ಎಷ್ಟು ವಿಚಿತ್ರವಲ್ಲವೇ. ಈ ಆಸೆಯೆ ಎಲ್ಲದಕ್ಕೂ ಮೂಲವಾಗುತ್ತದೆ. ಬದುಕಿನಲ್ಲಿ ಅದನ್ನು ತೆಗೆದುಕೊಳ್ಳಬೇಕು, ಇದನ್ನು ಖರೀದಿಸಬೇಕು ಎಂಬ ಆಸೆಗಳು ಒಂದೊಂದಾಗೇ ಹುಟ್ಟಿಕೊಳ್ಳುತ್ತದೆ. ಈ ಆಸೆಗಳ ಪೂರೈಕೆಗಾಗಿಯೇ ನಾವು ನಿರಂತರವಾಗಿ ದುಡುಮೆಯಲ್ಲಿ ಮುಳುಗುತ್ತೇವೆ. ಈ ಆಸೆ ನಾವು ಸಾಯುವ ವರೆಗೂ ಬಹುಷಃ ಸತ್ತ ಮೇಲೂ ನಮ್ಮೊಂದಿಗೆ ಇರುತ್ತದೆ. ನೆನಪಿದೆಯೇ ನೇಣಿಗೆ ಹಾಕುವ ಮುಂಚೆಯೂ ನಿಮ್ಮ ಕೊನೆ ಆಸೆ ಏನು ಎಂದು ಕೇಳುವ ಪ್ರತೀತಿ ಇದೆ….ಹಾಗೇ ಜೀವನದ ಕೊನೆಯಗಾಲದಲ್ಲಿ ಕೊನೆಯ ಆಸೆಯನ್ನು ತೀರಿಸಿ ಎಂದು ಕೆಲವರು ಹೇಳುತ್ತಾರೆ. !

ಇಲ್ಲಿ ಯಾವುದೇ ಆಸೆಯನ್ನು ಒಳ್ಳೆಯದ್ದು ಅಥವಾ ಕೆಟ್ಟದ್ದು ಎಂದು ನಿರ್ಧರಿಸುವುದು ಕಷ್ಟ. ನನ್ನ ಸ್ಥಿತಿಗೆ ನನಗಿರುವ ಆಸೆ ಒಳ್ಳೆಯದು ಆದರೆ ಪರರಿಗೆ ಅದು ತಪ್ಪೆಂದು ಅನಿಸಬಹುದು. ನನ್ನ ಪ್ರಕಾರ ನಮ್ಮ ಆಸೆಯಿಂದ ಬೇರೊಬ್ಬರಿಗೆ ತೊಂದರೆ ಆಗುವುದಾದರೆ ಯಾವುದೇ ಸ್ಥಿತಿಯಲ್ಲಿರಲಿ ಅದು ತಪ್ಪೇ. ಒಬ್ಬ ಭಯೋದ್ಪಾದಕ ಇನ್ನೊಬರಿಗೆ ಅಪ್ಪನೋ, ಮಗನೋ, ಅಣ್ಣನೋ ಆಗಿರಬಹುದು. ಆದರೆ ಅವನ ಕಾನೂನಿನ ಹಿಡಿತದಿಂದ ಬಿಡಿಸಿಕೊಳ್ಳುವ ಆಸೆ ಎಷ್ಟು ಸರಿ?

Advertisement

ಇನ್ನೊಬ ವ್ಯಕ್ತಿಗೆ ತನ್ನ ಸ್ವಂತಕ್ಕೆ ಆಸೆಗಳೇ ಇಲ್ಲದೆ ಇರಬಹುದು ಆದರೆ ತಮ್ಮ ಊರು, ಜನ, ಜಾತಿ ಭಾಷೆ, ದೇಶದ ಒಳಿತಿಗಾಗಿ ಹೊರಾಡುವ ಆಸೆ ತಪ್ಪೇನು ? ಆಸೆಯಿಂದ ಬೆಳೆಯಬೇಕು, ಆನಂದಿಸ ಬೇಕು, ಸಾರ್ಥಕತೆ ಕಾಣಬೇಕು, ಅಂತಹ ಆಸೆಗಳನ್ನ ವಿಂಗಡಿಸಿಕೊಂಡು ಬೆನ್ನಟ್ಟುವ ಪ್ರತಿಭೆಯ ಸಂಸ್ಕಾರವನ್ನ ನಮ್ಮ ಮಕ್ಕಳಿಗೆ ಕಲಿಸೋಣ. ಇಲ್ಲದಿದ್ದರೆ ಗೊತ್ತಲ್ಲ ಆಸೆಯೇ ದುಃಖಕ್ಕೆ ಮೂಲ ಎಂದು.ಹಾ…ಇನ್ನೊಂದು ಮಾತು ನೆನಪಿರಲಿ ಅತಿ ಆಸೆ —–!

*ಶ್ವೇತಾ ನಾಡಿಗ್‌, ದುಬೈ

Advertisement

Udayavani is now on Telegram. Click here to join our channel and stay updated with the latest news.

Next