ಶಹಾಪುರ: ಮನಸ್ಸು ನಿರ್ಮಲ ಇರಬೇಕಾದರೆ ನಾವು ವಾಸಿಸುತ್ತಿರುವ ಪ್ರದೇಶ ಸ್ವತ್ಛತೆಯಿಂದ ಕೂಡಿರಬೇಕು. ದೇವಾಲಯಗಳು ಸ್ವತ್ಛತೆ ಇದ್ದಲ್ಲಿ ಮಾತ್ರ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ನೆಮ್ಮದಿ ಒದಗಿಸಲು ಸಾಧ್ಯವಿದೆ ಎಂದು ಮಹಾಂತಯ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ದೋರನಹಳ್ಳಿ ಗ್ರಾಮದ ಮಹಾಂತೇಶ್ವರ ಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಶ್ರದ್ಧಾ ಕೇಂದ್ರ ಸ್ವತ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರದ್ಧಾ ಕೇಂದ್ರಗಳಲ್ಲಿ ಸ್ವತ್ಛತೆ ಕಾಪಾಡುವ ಮೂಲಕ ಆಯಾ ಕೇಂದ್ರಗಳಿಗೆ ಆಗಮಿಸುವ ಭಕ್ತರ ಮನಸ್ಸು ಉಲ್ಲಾಸ, ಏಕಾಗ್ರತೆ ಮತ್ತು ಶಾಂತಿ ಸಮಧಾನ ಹೊಂದಲು ಸಾಧ್ಯವಿದೆ. ಹೀಗಾಗಿ ಭಕ್ತರು ಸಹ ಉತ್ತಮ ವಾತಾವರಣ ಕಾಪಾಡುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕಿದೆ. ಭಕ್ತರಿಗೆ ಶಾಂತಿ ದೊರೆಯಬೇಕಿದ್ದಲ್ಲಿ ಮೊದಲನೇಯದಾಗಿ ಸ್ವತ್ಛತೆಯೇ ಪೂರಕ. ಅಲ್ಲದೆ ಹೊರಾಂಗಣ, ಹೊರ ನೋಟ ಮಾತ್ರ ಸ್ವತ್ಛತೆ ಇದ್ದರೆ ಸಾಲದು ಒಳ ಮನಸ್ಸು ಕೂಡ ಸ್ವತ್ಛವಾಗಿ ನಿರಮ್ಮಳವಾಗಿ ಇರಬೇಕು. ಆ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಉತ್ತಮ ಕಾರ್ಯಕ್ರಮ ಹಾಕಿಕೊಂಡಿದೆ. ಸಂಸ್ಥೆಯ ಜೊತೆಗೆ ನಾಗರಿಕರು ಕೈ ಜೋಡಿಸಬೇಕು. ಉತ್ತಮ ಕಾರ್ಯ ಎಂದಿಗೂ ನಿಲ್ಲುವುದಿಲ್ಲ. ಈ ಸಂಸ್ಥೆ ಹೈ.ಕ ಭಾಗಕ್ಕೆ ಕಾಲಿಟ್ಟಿದೆ ಎಂದರೆ ಉತ್ತಮ ದಿನಗಳು ಶುರುವಾಗಿವೆ ಎಂದು ಅರ್ಥ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಹಾಪುರ ಶಾಖೆ ಯೋಜನಾಧಿಕಾರಿ ಮೋಹನ್ ಕೆ. ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀಮಠದ ಸ್ವತ್ಛತೆಯಲ್ಲಿ ಮುಖಂಡರಾದ ಭಗವಂತರಾಯ, ಬಸವರಾಜ ಮತ್ತು ಗ್ರಾಮದ ಮಹಿಳೆಯರು ತೊಡಗಿಸಿಕೊಂಡರು. ಕೃಷಿ ಮೇಲ್ವಿಚಾರಕ ಪ್ರಕಾಶ.ಜಿ., ಸೇವಾ ಪ್ರತಿನಿಧಿ ಮೀನಾಕ್ಷಿ, ಶರಣಮ್ಮಸೇರಿದಂತೆ ಇತರರು ಉಪಸ್ಥಿತರಿದ್ದರು.