Advertisement

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

01:23 AM Oct 25, 2024 | Team Udayavani |

ಬೆಳ್ತಂಗಡಿ: ಬದುಕಿನ ತಾತ್ಪರ್ಯ ಸಂಪತ್ತಿನಲ್ಲಿ ಸರಳತೆ, ಅಧಿಕಾರದಲ್ಲಿ ಸೌಮ್ಯತೆ, ಕೋಪದಲ್ಲಿ ಮೌನ ಇರಬೇಕೆನ್ನುವುದಾಗಿದೆ. ಯಾವುದೇ ವ್ಯಾಪಾರೀಕರಣವಿಲ್ಲದೆ ಶಿಸ್ತು, ವಿನಯ, ಮಾನವೀಯತೆ ಯಿಂದ ಧರ್ಮಸ್ಥಳ ಕ್ಷೇತ್ರವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಿದ ಧರ್ಮಾಧಿಕಾರಿಗಳ ಗ್ರಾಮಾಭಿವೃದ್ಧಿ ಮತ್ತು ಕ್ಷೇತ್ರಾಭಿವೃದ್ಧಿ ಸೇವೆಗೆ ಭಾರತ ರತ್ನ ಒಲಿದು ಬರಲಿ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ| ಸಿ.ಎನ್‌. ಮಂಜುನಾಥ್‌ ಆಶಿಸಿದರು.

Advertisement

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತಿ ಪ್ರಯುಕ್ತ ಅ.24ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಜರಗಿದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೃಷ್ಟಿಯ ಜತೆಗೆ ದೂರದೃಷ್ಟಿ, ಹೃದಯದಲ್ಲಿ ಹೃದಯವಂತಿಕೆ ಬೇಕು ಹಾಗೂ ಜಾಣ್ಮೆಯ ಜತೆಗೆ ತಾಳ್ಮೆಯೂ ಬೇಕು. ಧರ್ಮಸ್ಥಳವನ್ನು ಜಾತ್ಯತೀತ ಕ್ಷೇತ್ರವಾಗಿಸುವ ಮೂಲಕ ಡಾ| ಹೆಗ್ಗಡೆಯವರು ನಡೆದಾಡುವ ಪರಮೇಶ್ವರರಾಗಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಮೂಲಕ ಪೂಜ್ಯರು ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಸಂಜೀವಿನಿಯಾಗಿದ್ದಾರೆ ಎಂದು ಬಣ್ಣಿಸಿದರು.

ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಆದರ್ಶಪ್ರಾಯ ಬೀಡು ಪವಿತ್ರ ಭೂಮಿ ಕುಡುಮಸ್ಥಳ. ಅದಕ್ಕೆ ಜೀವಂತ ಮೂರ್ತಿಯಾಗಿ ಇರುವವರು ಧರ್ಮಾಧಿಕಾರಿ ಡಾ| ಹೆಗ್ಗಡೆಯವರು. ಆತ್ಮಧರ್ಮದ ಮೂಲಕ ಜೈನ ಮತ್ತು ಹಿಂದು ಧರ್ಮವನ್ನು ಪಸರಿದ ಧರ್ಮ ದೇವತೆಗಳು, ಈ ನಾಡಿಗೆ 21ನೇ ಹೆಗ್ಗಡೆಯವರ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಪಾರಿವಾರಿಕ ಮತ್ತು ಅಂತಸತ್ವವದ ಶ್ರೇಷ್ಠ ಅನವರತ ಸೇವೆ ಲಭಿಸುವಂತೆ ಮಾಡಿದ್ದಾರೆ. ಧರ್ಮಾಧಿಕಾರಿ ಪೀಠದಲ್ಲಿ ನೂರ್ಕಾಲ ಬಾಳುವ ಮೂಲಕ ಆದರ್ಶ ಸೇವೆ ಸಮಾಜಕ್ಕೆ ದೊರೆಯಲಿ ಎಂದು ಹಾರೈಸಿದರು.

ಡಾ| ವೀರೇಂದ್ರ ಹೆಗ್ಗಡೆ ಮಾತನಾಡಿ, ನಾನು ಪ್ರತಿ ಬಾತಿ ದಶಾವತಾರಿಯಾಗಿ ಎಲ್ಲ ಸಾಮಾಜಿಕ ಕಾರ್ಯಗಳನ್ನು ಏಕಕಾಲದಲ್ಲಿ ಕೈಗೆತ್ತಿಕೊಳ್ಳುತ್ತೇನೆ. ಅದಕ್ಕೆ ನನಗೆ ಮಂಜುನಾಥ ಸ್ವಾಮಿಯ ಅಭಯವಿದೆ. ಅನೇಕ ಕೆಲಸಗಳ ಒತ್ತಡಗಳಿದ್ದರೂ ಸಾಮಾಜಿಕ ಸುಧಾರಣೆಗೆ ಇದೆಲ್ಲ ಅನಿವಾರ್ಯ ವಾಗಿದೆ. ಮನುಷ್ಯನ ಭಾವನೆಗಳ ಪರಿವರ್ತನೆ ಮಾಡುವುದೇ ಕ್ಷೇತ್ರದ ಧ್ಯೇಯವಾಗಿದೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್‌ ಶುಭ ಹಾರೈಸಿದರು.ಹೇಮಾವತಿ ವೀ.ಹೆಗ್ಗಡೆ, ಸುರೇಂದ್ರ ಕುಮಾರ್‌ ಮತ್ತು ಡಿ.ಹರ್ಷೇಂದ್ರ ಕುಮಾರ್‌ ವೇದಿಕೆಯಲ್ಲಿದ್ದರು.

ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ| ಎಸ್‌.ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತಿ ಸಮಿತಿ ಸಂಚಾಲಕ ಲಕ್ಷ್ಮೀನಾರಾಯಣ ರಾವ್‌ ವಂದಿಸಿದರು. ಅನ್ನಪೂರ್ಣಾ ಛತ್ರದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್‌ ನಿರ್ವಹಿಸಿದರು.

57 ನೇ ವರ್ಧಂತಿ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡಾ| ಹೆಗ್ಗಡೆ ಸಹಿತ ಗಣ್ಯರನ್ನು ಭವ್ಯ ಮೆರವಣಿಗೆ ಮೂಲಕ ಸಭಾ ವೇದಿಕೆಗೆ ಕರೆತರಲಾಯಿತು.

ಗಣ್ಯರಿಂದ ಅಭಿನಂದನೆ
ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕೆ.ಪಿ.ಸಿ.ಸಿ. ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಡಿ. ಸಂಪತ್‌ ಸಾಮ್ರಾಜ್ಯ, ಕೆ. ರಾಜವರ್ಮ ಬಲ್ಲಾಳ್‌, ವಿಜಯಾ ಬ್ಯಾಂಕ್‌ ನಿವೃತ್ತ ಪ್ರಬಂಧಕ ಎಂ. ಜಿನರಾಜ ಶೆಟ್ಟಿ, ಮಂಗಳೂರು, ಸುದರ್ಶನ್‌ ಜೈನ್‌, ಬಂಟ್ವಾಳ, ಪಿ.ಜಯರಾಜ ಕಂಬಳಿ, ಪೆರಿಂಜೆಗುತ್ತು, ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಮೊಕ್ತೇಸರ ಜೀವಂಧರ ಕುರ್ಮಾ, ಕೆ.ಪ್ರದೀಪ್‌ಕುಮಾರ್‌ ಕಲ್ಕೂರ, ಹರಿಕೃಷ್ಣ ಪುನರೂರು ಮೊದಲಾದ ಗಣ್ಯರು ಹೆಗ್ಗಡೆಯವರಿಗೆ ಅಭಿನಂದಿಸಿದರು.

ಡಾ| ಹೆಗ್ಗಡೆಯವರ ಮೇಣದ ಪ್ರತಿಮೆ ಅನಾವರಣ
ಡಾ| ಹೆಗ್ಗಡೆಯವರ ಅಭಿಮಾನಿ ಪುಟ್ಟಪರ್ತಿಯ ಹರೀಶ್‌ ಕೃಷ್ಣ ಸ್ವಾಮಿ ಹಾಗೂ ಸಹೋದರಿ ಪ್ರಿಯಾ ಕೃಷ್ಣ ಸ್ವಾಮಿ ಅವರು 6 ತಿಂಗಳಿಂದ ಸಂಶೋಧಿಸಿ ಸಿದ್ಧಪಡಿಸಿದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ತದ್ರೂಪಿ ಮೇಣದ ಪ್ರತಿಮೆಯನ್ನು ಡಾ| ಸಿ.ಎನ್‌. ಮಂಜುನಾಥ್‌ ಅನಾವರಣ ಮಾಡಿದರು.

ಹೊಸ ಯೋಜನೆಗಳು
-ಧರ್ಮಸ್ಥಳದಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಮಾಡಿ ಭಕ್ತರ ಸಂಪೂರ್ಣ ಚಿತ್ರಣ ಬರುವ ಸಿಸಿ ಕೆಮರಾ ಅಳವಡಿಕೆ, ಸೇವೆಗಳ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ.
-ನ.8ರಂದು ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರಿಂದ ನೂತನ (ಕ್ಯೂ ಕಾಂಪ್ಲೆಕ್ಸ್‌) ಭಕ್ತರ ಆರಾಮದಾಯಕ ಸರತಿ ಸಾಲಿನ ಸೌಲಭ್ಯದ ಕಟ್ಟಡ ಉದ್ಘಾಟನೆ.
-ದೇಶದಲ್ಲಿ ಇನ್ನೂ 120 ಹೊಸ ರುಡ್‌ಸೆಟ್‌ ಸಂಸ್ಥೆಗಳ ಪ್ರಾರಂಭ.
-ಧರ್ಮೋತ್ಥಾನ ಟ್ರಸ್ಟ್‌ ಮೂಲಕ ಹಳೆಯ 11 ಸಾವಿರ ದೇವಾಲಯಗಳಿಗೆ ಸಹಕಾರ.
-70 ಕೋ.ರೂ. ವೆಚ್ಚದಲ್ಲಿ ನೂತನ ಸಿರಿ ಉತ್ಪಾದನ ಘಟಕ ಜನವರಿಯಲ್ಲಿ ಉದ್ಘಾಟನೆ

 

Advertisement

Udayavani is now on Telegram. Click here to join our channel and stay updated with the latest news.

Next