Advertisement

Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ

02:29 PM Nov 08, 2024 | Team Udayavani |

ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸ್ಮರಣೆಯೊಂದಿಗೆ 24 ವರ್ಷದ ಹಿಂದೆ ಲಾರಿಯೊಂದನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರು ಮುಂದೆ ಉದ್ಯಮಿಯಾಗಿ ಬೆಳೆದು ಇದೀಗ ಮೊದಲ ಬಾರಿಗೆ ಖರೀದಿ ಮಾಡಿದ್ದ ಲಾರಿಯನ್ನೇ ಧರ್ಮಸ್ಥಳದ ಸೇವೆಗೆ ಸಮರ್ಪಣೆ ಮಾಡಿದ್ದಾರೆ.

Advertisement

ಧರ್ಮಸ್ಥಳ ಕ್ಷೇತ್ರದ ಪರಮ ಭಕ್ತರಾಗಿರುವ ಸಿದ್ಧಾಪುರದ ಬಿ. ನಾಗು ಕುಲಾಲ ಅವರು 2000ರಲ್ಲಿ ದೇವರನ್ನು ಸ್ಮರಿಸಿ, ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಒಂದು ಲಾರಿಯನ್ನು ಖರೀದಿಸಿದ್ದರು. ಅದಕ್ಕೆ ಶ್ರೀ ಮಂಜುನಾಥ ಎಂದು ಹೆಸರು ಇಟ್ಟಿದ್ದರು.

ಅಂದಿನಿಂದ ಅವರ ಅದೃಷ್ಟ ಖುಲಾಯಿಸಿತು. ಕೆಂಪು ಕಲ್ಲು ಕೋರೆಯಲ್ಲಿ ಕಲ್ಲು ಕಡಿಯುವ ಕೆಲಸ ಮಾಡುತ್ತಿದ್ದ ನಾಗು ಕುಲಾಲ ಅವರು ಸ್ವಂತ ಕಲ್ಲು ಕೋರೆ ಆರಂಭಿಸಿದರು. ತಮ್ಮ ಶ್ರಮದ ಫಲವಾಗಿ ಇಂದು 4 ಲಾರಿ ಮತ್ತು 2 ಜೆಸಿಬಿ ಸೇರಿದಂತೆ 6 ವಾಹನ ಹೊಂದಿದ್ದಾರೆ.

ಇದೀಗ ಉತ್ತಮ ಸ್ಥಿತಿಯಲ್ಲಿರುವ ಮೊದಲ ಲಾರಿಯನ್ನು ಸಂಪೂರ್ಣವಾಗಿ ಪೈಟಿಂಗ್‌ ಮಾಡಿ, ದೀಪಾವಳಿಯ ಅಮವಾಸ್ಯೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೊಡುಗೆ ನೀಡಿದ್ದಾರೆ.

ಸಿದ್ದಾಪುರ ಭಾಗದಲ್ಲಿ ಓಡಾಡುತ್ತಿದ್ದ ಲಾರಿಯು ಮುಂದೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಚರಿಸಲಿದೆ.

Advertisement

ವಿದ್ಯೆ ಇಲ್ಲದಿದ್ದರು, ದೇವರ ಅನುಗ್ರಹದಿಂದ ಒಂದು ಹಂತಕ್ಕೆ ಬೆಳೆಯಲು ಕಾರಣವಾಗಿದೆ. ಕಡು ಬಡತನದಿಂದ ಬೆಳೆದು ಬಂದ ತಾನೂ ಇಂದು ಸಮಾಜದಲ್ಲಿ ಒಂದು ಸ್ಥಾನ ಸಿಕ್ಕಿದೆ. ಮೊದಲ ಲಾರಿ ಖರೀದಿ ಮಾಡುವಾಗಲೇ ಮಾಡಿದ ಸಂಕಲ್ಪದಂತೆ ಲಾರಿಯನ್ನು ಕ್ಷೇತ್ರಕ್ಕೆ ಸಮರ್ಪಿಸಿದ್ದೇನೆ ಎನ್ನುತ್ತಾರೆ ಬಿ. ನಾಗು ಕುಲಾಲ.

ನಾಲ್ಕೂ ವಾಹನಗಳಿಗೆ ಧರ್ಮಸ್ಥಳದಲ್ಲೇ ಪೂಜೆ
ಓದು ಬರಹ ಬಾರದ ಬಿ. ನಾಗು ಕುಲಾಲ ಸಿದ್ದಾಪುರ ಹಲವಾರು ವರ್ಷಗಳಿಂದ ದೀಪಾವಳಿಯ ಅಮವಾಸ್ಯೆಯಂದು ಶ್ರೀ ಕ್ಷೇತ್ರದಲ್ಲಿ ತಮ್ಮ 4 ವಾಹನಗಳನ್ನು ವಾಹನ ಪೂಜೆ ಮಾಡಿಸುತ್ತಾರೆ. ಕ್ಷೇತ್ರಕ್ಕೆ ಹೋಗುವಾಗ ವಾಹನಗಳ ತುಂಬ ಕೆಂಪುಕಲ್ಲುಗಳನ್ನು ತುಂಬಿಸಿಕೊಂಡು ಹೋಗುತ್ತಾರೆ. ನಿರಂತರ 25 ವರ್ಷಗಳಿಂದ ಧರ್ಮಸ್ಥಳ ಮೇಳದ ಆಟ ಆಡಿಸುತ್ತಿದ್ದಾರೆ. 25ನೇ ವರ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರೇ ಆಟಕ್ಕೆ ಬಂದು ಹರಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next