Advertisement
ಕಾಡನ್ನೂ ಒಳಗೊಂಡಂತೆ ನಾಡಿನ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯು ಆಳುವ ಸರಕಾರ ಮತ್ತು ಸಾರ್ವಜನಿಕರ ಹೊಣೆಯಾಗಿದೆ. ಆದರೆ ಇತ್ತೀಚಿನ ಅರಣ್ಯ ಒತ್ತುವರಿ, ಗಣಿಗಾರಿಕೆ, ರಸ್ತೆ, ಅಣೆಕಟ್ಟು ಮತ್ತಿತರ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ತೀವ್ರಗತಿಯ ಅರಣ್ಯನಾಶವು ಸಕಲ ಜೀವಚರಗಳ ವರ್ತಮಾನ ಮತ್ತು ಭವಿಷ್ಯತ್ತಿನ ಆತಂಕವನ್ನು ಹೆಚ್ಚಿಸಿದೆ.
Related Articles
Advertisement
ಮತ್ತೊಂದೆಡೆ ಇಲ್ಲಿಯ ಉಳ್ಳವರು ಮತ್ತು ಜಮೀನಾªರರು ತಮಗೆ ಸಾಕಷ್ಟು ಕೃಷಿ ಜಮೀನು ಇದ್ದಾಗಲೂ ಗುಡ್ಡಗಳಿಗೆ ಬೇಲಿ ಹಾಕಿಕೊಂಡು ಹತ್ತಾರು ಎಕ್ರೆ ಕಾಡು ಕರಗಿಸಿ ಸಾಗುವಳಿಗಾಗಿ ವರ್ಷವೂ ತಮ್ಮ ಬೇಲಿಯನ್ನು ಕಾಡುಗುಡ್ಡ, ಹೊಳೆ, ಹಳ್ಳಗಳವರೆಗೆ ತೋಟವನ್ನು ವಿಸ್ತರಿಸಿಕೊಂಡಿರುವ ಪ್ರಭಾವಿಗಳಾಗಿದ್ದಾರೆ. ಅವರೆಲ್ಲರೂ ಈಗ ಬಡ ರೈತರು, ಕೂಲಿಕಾರ್ಮಿಕರ ಜತೆಗೂಡಿ ಒತ್ತುವರಿ ವಿರೋಧಿ ಹೋರಾಟದ ಕಾವೇರಿಸಿ ಹೇಗಾದರೂ ಒತ್ತುವರಿ ತೆರವು ಕಾರ್ಯಚರಣೆಯನ್ನು ಹತ್ತಿಕ್ಕಲೇಬೇಕೆಂದು ಹತ್ತುಹಲವು ನಮೂನೆಯಲ್ಲಿ ಒತ್ತಡ ಹೇರಲು ಸಕಲ ಶಕ್ತಿ, ಪ್ರಭಾವಗಳ ಮೊರೆಹೋಗಿದ್ದಾರೆ.
ಅರಣ್ಯವಾಸಿಗಳ ಪ್ರಕಾರ “ಸಹಜ ಕಾಡನ್ನು ಕಡಿದು ಅಕೇಶಿಯ, ನೀಲಗಿರಿ ನೆಡುತೋಪುಗಳನ್ನು ಬೆಳೆಸಿದ ಇಲಾಖೆ/ಸರಕಾರವೇ ಅರಣ್ಯನಾಶದ ಮೊದಲ ಆರೋಪಿ’. ಅಷ್ಟರ ನಡುವೆ ಹೊಟ್ಟೆಪಾಡಿಗೆ ಬಡವರು ಮಾಡಿಕೊಂಡ 3 ಎಕ್ರೆವರೆಗಿನ ಒತ್ತುವರಿ, ರೆವಿನ್ಯೂ ಮತ್ತು ಸೊಪ್ಪಿನಬೆಟ್ಟ 4(1) ಭೂಮಿಯನ್ನು ಮಾನವೀಯ ನೆಲೆಯಲ್ಲಿ ಹೊರಗಿರಿಸಿ, ಸ್ಥಿತಿವಂತರ ಅನಿಯಂತ್ರಿತ ಒತ್ತುವರಿ ಭೂಮಿಯನ್ನು ಯಾವುದೇ ಪ್ರಭಾವಕ್ಕೆ ಮಣಿಯದೆ ತೆರವುಗೊಳಿಸುವ ಮೂಲಕ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರಕ್ಕೆ ಹಾನಿಯಾಗದಂತೆ ಕ್ರಮವಹಿಸಬೇಕೆಂಬ ನಿಲುವಿಗೆ ಸಾರ್ವಜನಿಕರ ಒಲವಿದೆ.
ಪ್ರತಿಭಟನೆಯು ತೀವ್ರಗೊಂಡು ಸದ್ಯಕ್ಕೆ ಒತ್ತುವರಿ ತೆರವು ಕಾರ್ಯ ನಿಂತು ಯಥಾಸ್ಥಿತಿ ಮುಂದುವರಿಯುವುವಂತಾದರೆ ಮಲೆನಾಡಿನ ಜ್ವಲಂತ ಸಮಸ್ಯೆಗೆ ಪರಿಹಾರ ಲಭಿಸೀತೆ? ಯೋಚಿಸಬೇಕಿದೆ. ರೈತ ಸಂಘಟನೆಗಳು ಒತ್ತುವರಿ ಸಮಸ್ಯೆ ಬಗೆಹರಿಸಲು ನೀಡಿದ ಪರಿಹಾರ ಸೂತ್ರಗಳನ್ನೂ ಮುಕ್ತವಾಗಿ, ಸಂವೇದನಾಶೀಲರಾಗಿ ಚರ್ಚಿಸಬೇಕು.
-ಕಂದಾಯ ಮತ್ತು ಅರಣ್ಯ ಭೂಮಿಗಳ ವಿಂಗಡನೆಯನ್ನು ಪುನರ್‌ಪರಿಶೀಲಿಸಿ ವಾಸ್ತವಿಕ ನೆಲೆಗಟ್ಟಿನಲ್ಲಿ ವಿಂಗಡಿಸಬೇಕು.-ಜೀವನೋಪಾಯಕ್ಕಾಗಿ ಮಾಡಿರುವ ಕನಿಷ್ಠ ಪ್ರಮಾಣದ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಿ ಮಿಕ್ಕ ಜಾಗಗಳನ್ನು ಅರಣ್ಯ ಎಂದು ಘೋಷಿಸಬೇಕು.
-ಸ್ವತಃ ಅರಣ್ಯ ಇಲಾಖೆಯೇ ಕಾಡನ್ನು ಒತ್ತುವರಿ ಮಾಡಿ ಬೆಳೆಸಿರುವ ನೆಡುತೋಪುಗಳನ್ನು ತೆರವುಗೊಳಿಸಿ ಸಹಜ ಅರಣ್ಯ ಬೆಳಸಬೇಕು. ಬಲಾಡ್ಯರ ಒತ್ತುವರಿಗಳನ್ನು ತೆರವುಗೊಳಿಸಿ ಅರಣ್ಯ ಪ್ರದೇಶಕ್ಕೆ ಪುನಃ ಸೇರಿಸಬೇಕು.
-ಮನೆಕಟ್ಟಿಕೊಂಡು ವಾಸವಾಗಿರುವ ಪ್ರತೀ ಕುಟುಂಬಕ್ಕೆ ಮನೆಯ ಹಕ್ಕುಪತ್ರ ನೀಡಬೇಕು.
-ಸಾರ್ವಜನಿಕ ಸಹಭಾಗಿತ್ವದ ಪರಿಸರ ಸಂರಕ್ಷಣ ಯೋಜನೆಗಳನ್ನು ಜಾರಿಗೊಳಿಸಬೇಕು. ಅದಕ್ಕಾಗಿ ಸಮಗ್ರ ಪರಿಸರ ಇಲಾಖೆಯೊಂದನ್ನು ಸ್ಥಾಪಿಸಬೇಕು.
-ವಿನಾಶಕಾರಿ ಅಭಿವೃದ್ಧಿಗೆ ಕಡಿವಾಣ ಹಾಕಿ ವೈಜ್ಞಾನಿಕ ಅಭಿವೃದ್ಧಿ ಜಾರಿಗೊಳಿಸಬೇಕು.
-ಹವಾಗುಣ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಯೋಜನೆ ರೂಪಿಸಬೇಕು. ಇದಕ್ಕೆ ಪೂರಕವಾಗಿ ತಜ್ಞರು, ರೈತರು-ಸ್ಥಳೀಯರನ್ನೊಳಗೊಂಡ ನಾಗರಿಕ ಸಮಿತಿಗಳನ್ನು ರಚಿಸಬೇಕು.
-ಅದಕ್ಕಾಗಿ ಕಾನೂನು ತಿದ್ದುಪಡಿ ಮಾಡಬೇಕು.
ಇದು ಸಾಧ್ಯವಾಗಲಿ, ರಾಜಕೀಯ ಹಿತಾಸಕ್ತಿಗಳಾಚೆಗೆ ಮಲೆನಾಡಿನ ನಿವಾಸಿಗಳ ಬದುಕು ಕಸಿಯದೆಯೇ ಹಸುರು ಉಳಿಯುವಂತಾಗಲಿ. ಸರಕಾರವು ಈ ತಂತಿಮೇಲಿನ ನಡಿಗೆಯನ್ನು ನಾಜೂಕಿನಿಂದ ಕೈಗೊಳ್ಳಲಿ ಎಂಬುದು ಆಶಯ. -ಸತೀಶ್ ಜಿ.ಕೆ.,ತೀರ್ಥಹಳ್ಳಿ,