ಬೇಸಗೆ ಬಂತೆಂದರೆ ಅರಣ್ಯದಂಚಿನಲ್ಲಿ ಕಾಳ್ಗಿಚ್ಚಿನದ್ದೇ ಆತಂಕ. ಪ್ರಸಕ್ತ ಚಳಿ ಆರಂಭಗೊಂಡಿದ್ದು, ಮಧ್ಯಾಹ್ನ ಸುಡುಬಿಸಿಲು ಕಂಡುಬರುತ್ತಿದೆ. ಮುಂದಿನ ಮೂರ್ನಾಲ್ಕು ತಿಂಗಳು ಕಾಳ್ಗಿಚ್ಚು ಉಂಟಾಗುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮಕ್ಕೆ ಈಗಲೇ ಮುಂದಾಗಬೇಕಿದೆ.
ಮಳೆಗಾಲದಲ್ಲಿ ಬೆಳೆದ ಹುಲ್ಲು ಸೂರ್ಯನ ತಾಪಕ್ಕೆ ಒಣಗುವುದರಿಂದ ಸಣ್ಣ ಕಿಡಿ ಸೋಕಿದರೂ ಅರಣ್ಯ ನಾಶಕ್ಕೆ ಕಾರಣವಾಗುತ್ತದೆ. ಈ ಬಾರಿ ದೀರ್ಘ ಕಾಲ ಉತ್ತಮ ಮಳೆಯಾಗಿದ್ದರಿಂದ ಹುಲ್ಲು ಕೂಡ ದಟ್ಟವಾಗಿ ಬೆಳೆದಿದೆ. ಆದುದರಿಂದ ಹಿಂದಿಗಿಂತ ಹೆಚ್ಚು ಎಚ್ಚರಿಕೆಯನ್ನು ಈ ಬಾರಿ ತೆಗೆದುಕೊಳ್ಳಬೇಕಾಗಿದೆ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಕಿಡಿಗೇಡಿಗಳ ಉಪಟಳಕ್ಕೆ ಸಾವಿರಾರು ಎಕ್ರೆ ಅರಣ್ಯ ಪ್ರದೇಶ ನಾಶವಾಗುವುದಿದೆ. ಹೀಗಾಗಿ ಬಹಳ ಮುನ್ನೆಚ್ಚರಿಕೆ ವಹಿಸಬೇಕಿದೆ.
ಪ್ರತೀ ವರ್ಷ ಚಳಿಗಾಲ ಆರಂಭದಿಂದ ಬೇಸಗೆ ಮುಗಿಯುವ ವರೆಗೆ ಪಶ್ಚಿಮಘಟ್ಟ, ಚಾರ್ಮಾಡಿ ಅರಣ್ಯ ಸಹಿತ ಶಿಶಿಲ, ಅರಸಿನಮಕ್ಕಿ ಸೇರಿದಂತೆ ಗುಡ್ಡಗಾಡು ಪ್ರದೇಶಗಳಲ್ಲಿ, ರಸ್ತೆ ಬದಿಗಳಲ್ಲಿ ಬೆಂಕಿ ಆವರಿಸಿ ಅರಣ್ಯ ಸಂಪತ್ತು ನಾಶಕ್ಕೆ ಕಾರಣವಾಗುತ್ತಿರುತ್ತದೆ. ಕಳೆದ ಎರಡು ವರ್ಷಗಳಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಈ ವೇಳೆ ವಿದೇಶಗಳಲ್ಲಿರುವ ನಾನಾ ರೀತಿಯ ಬೆಂಕಿ ನಂದಿಸುವ ಸುಧಾರಿತ ಕ್ರಮಗಳ ಮೂಲಕ ನಮ್ಮ ದೇಶದಲ್ಲಿ; ಅದರಲ್ಲೂ ಪ್ರಮುಖವಾಗಿ ಪಶ್ಚಿಮಘಟ್ಟ ಸಂರಕ್ಷಣೆಗೆ ಒತ್ತು ನೀಡಬೇಕೆಂದು ಹಲವು ಬಾರಿ ಕೂಗು, ಬೇಡಿಕೆ, ಆಗ್ರಹಗಳು ನಾನಾ ಕಡೆಯಿಂದ ಬಂದರೂ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪರಿಣಾಮ ಹೇರಳವಾದ ಅರಣ್ಯ ಸಂಪತ್ತಿನ ಜತೆಗೆ ಪ್ರಾಣಿ ಸಂಕುಲಗಳು ಅಳಿಯುವಂತಾಗಿದೆ.
ದಾರಿ ಬದಿ, ಗುಡ್ಡಗಾಡುಗಳ ಅಂಚಿನಲ್ಲಿ ಬೀಡಿ, ಸಿಗರೇಟು ಸೇದಿ ಎಸೆದ ಬೆಂಕಿಯಿಂದ ಅಥವಾ ಕಾಳ್ಗಿಚ್ಚಿನಿಂದ ಅಪಾರ ಪ್ರಮಾಣದ ಮರಮಟ್ಟು ನಾಶವಾಗಿ ವಾಯುಮಾಲಿನ್ಯದ ಜತೆಗೆ ಅಂತರ್ಜಲದ ಮೇಲೂ ಪರಿಣಾಮ ಬೀರುತ್ತದೆ. ಪ್ರತೀ ವರ್ಷ ಅರಣ್ಯ ಇಲಾಖೆ ಬೆಂಕಿ ರೇಖೆಯನ್ನು ರಚಿಸಿ ಕಾಳ್ಗಿಚ್ಚಿನಿಂದ ಅರಣ್ಯ ಸಂಪತ್ತು ರಕ್ಷಿಸಲು ಮುಂದಾಗುತ್ತದೆ. ಆದರೆ ಬೆಂಕಿ ರೇಖೆ ಮಾಡುವ ಸ್ಥಳಗಳನ್ನು ಹೊರತು ಪಡಿಸಿ ದಟ್ಟ ಅರಣ್ಯದ ಮಧ್ಯೆಯೇ ಬೆಂಕಿ ಬೀಳುವ ಸಂದರ್ಭ ಅದನ್ನು ನಂದಿಸಲು ಯಾವುದೇ ವಾಹನ ಸಾಗಲು ಸಾಧ್ಯವಾಗದ ಸ್ಥಿತಿ ಇದೆ. ಈ ವೇಳೆ ಅಪಾಯದ ತೀವ್ರತೆ ಹೆಚ್ಚಾಗಿರುತ್ತದೆ. ಅರಣ್ಯದಲ್ಲಿ ಪ್ರಾಣಿಗಳ ಬೇಟೆಯಾಡಿ ಅಲ್ಲೇ ಅಡುಗೆ ಮಾಡುವುದರಿಂದ ಕಾಳ್ಗಿಚ್ಚು ಉಂಟಾಗುವ ಬಗ್ಗೆ ಸ್ಥಳೀಯರು ಅನೇಕ ಬಾರಿ ದೂರು ನೀಡಿದರೂ ಯಾವುದೇ ದೊಡ್ಡ ಕ್ರಮ ಸಾಧ್ಯವಾಗಿಲ್ಲ.
ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಆದ್ದರಿಂದ ಕಾಳ್ಗಿಚ್ಚು ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ವಿದ್ಯುತ್ ಕಂಬಗಳ ಸನಿಹ ಇರುವ ಪೊದೆಗಳ ಸ್ವತ್ಛತೆ, ರಸ್ತೆ ಅಂಚಿನಲ್ಲಿ ಒಣ ಹುಲ್ಲುಗಳ ತೆರವು ಸಹಿತ ಅಗತ್ಯ ಕ್ರಮಗಳನ್ನು ಅರಣ್ಯ ಇಲಾಖೆ, ಸ್ಥಳೀಯಾಡಳಿತಗಳು, ಮೆಸ್ಕಾಂ ಹಾಗೂ ಸಾರ್ವಜನಿಕರು ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಈ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸಿ ಅರಣ್ಯ ಸಂಪತ್ತು, ಪ್ರಾಣಿ, ಜೀವಸಂಕುಲಗಳ ರಕ್ಷಣೆಯೆಡೆಗೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ.