ಉಪ್ಪಿನಂಗಡಿ: ಗ್ರಾಮಸ್ಥರಿಗೆ ಕುಡಿಯುವ ನೀರೊದಗಿಸಲು ಸರಕಾರಿ ವೆಚ್ಚದಲ್ಲಿ, ಸರಕಾರಿ ಭೂಮಿಯಲ್ಲಿ ಟ್ಯಾಂಕ್ ನಿರ್ಮಿಸಿ, ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿದ ಮೇಲೆ, ಟ್ಯಾಂಕ್ ಇರುವ ಭೂಮಿ ಅಕ್ರಮ ಸಕ್ರಮದಡಿ ತನ್ನ ಅನುಭೋಗದಲ್ಲಿದೆ ಎಂದು ವಾದಿಸಿ ಟ್ಯಾಂಕ್‌ಗೆ ಪೈಪ್ ಜೋಡಿಸಲು ತಡೆಯೊಡ್ಡಿದ ಘಟನೆ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಗಡಿಕಲ್ಲು ಎಂಬಲ್ಲಿಂದ ವರದಿಯಾಗಿದೆ.
ಜಿ.ಪಂ.ನ ಕಳೆದ ಅವಧಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ, ಖಾಸಗಿ ವ್ಯಕ್ತಿಯೊಬ್ಬರ ಬಳಕೆಗೆ ಅದು ಮೀಸಲಾಗಿದ್ದನ್ನು ಮನಗಂಡ ಸ್ಥಳೀಯರು ಮುಖ್ಯಮಂತ್ರಿವರೆಗೂ ದೂರು ಸಲ್ಲಿಸಿ, ಕುಡಿಯಲು ನೀರು ಕೊಡಿಸಿ ಎಂದು ಆಗ್ರಹಿಸಿದರು.
ನಾಗರಿಕರ ದೂರಿಗೆ ಸ್ಪಂದಿಸಿದ ಜಿ.ಪಂ. ಎಂಜಿನಿಯರಿಂಗ್ ವಿಭಾಗ, ಗ್ರಾ.ಪಂ.ಗೆ ಟ್ಯಾಂಕ್ ಹಸ್ತಾಂತರಿಸಿತ್ತು. ನೀರು ಸರಬರಾಜು ಪೈಪ್ ಅಳವಡಿಸಲು ಮುಂದಾದಾಗ ವ್ಯಕ್ತಿಯೊಬ್ಬರು ತಡೆಯೊಡ್ಡಿದ್ದಾರೆ. ಟ್ಯಾಂಕ್ ನಿರ್ಮಿಸುವಾಗ ಸುಮ್ಮನಿದ್ದ ಅವರು, ಆಮೇಲೆ ಬೇಲಿ ಹಾಕಿ, ತಡೆಯೊಡ್ಡಿದ್ದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದ್ದು, ರಾಜಕೀಯ ಪ್ರಭಾವ ಬಳಸಿ, ಟ್ಯಾಂಕ್ ಕಬಳಿಸಲು ಈ ಜಾಗ ಅಕ್ರಮ- ಸಕ್ರಮದಲ್ಲಿ ತನ್ನದಾಗಿದೆ ಎಂದು ವಾದಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಂದು ವೇಳೆ ಅಕ್ರಮ- ಸಕ್ರಮ ಅಡಿ ಖಾಸಗಿಗೆ ಭೂಮಿ ಮಂಜೂರಾಗಿದ್ದರೂ, ಮಂಜೂರಾತಿ ಆದೇಶವನ್ನು ರದ್ದುಪಡಿಸುವ ಅಧಿಕಾರ ಕಂದಾಯ ಇಲಾಖೆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾರ್ಯ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ ಪೈ, ಹಿಂದಿನ ಜಿ.ಪಂ. ಅವಧಿಯಲ್ಲಿ ಟ್ಯಾಂಕ್ ಕಾಮಗಾರಿಯಾಗಿದ್ದು, ನಮ್ಮ ಅವಧಿಯಲ್ಲಿ ಹಸ್ತಾಂತರಗೊಂಡಿದೆ. ಈ ಟ್ಯಾಂಕ್ ಗ್ರಾಮಸ್ಥರಿಗೆ ನೀರು ಪೂರೈಸುವ ಬದಲು ಖಾಸಗಿ ವ್ಯಕ್ತಿಯೊಬ್ಬರ ತೋಟಕ್ಕೆ ಬಳಕೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳವರೆಗೂ ಅರ್ಜಿ ಸಲ್ಲಿಕೆಯಾಗಿತ್ತು. ಟ್ಯಾಂಕ್‌ಗೆ ಪೈಪ್ ಅಳವಡಿಸಲು ಮುಂದಾದಾಗ ಸ್ಥಳೀಯರೊಬ್ಬರು, ಈ ಭೂಮಿ ಅಕ್ರಮ ಸಕ್ರಮ ಅಡಿಯಲ್ಲಿ ಬಳಕೆಯಲ್ಲಿದೆ ಎಂದು ವಾದಿಸಿ, ಬೇಲಿ ಹಾಕಿದ್ದಾರೆ. ಭೂಮಿಯನ್ನು ಅಳತೆ ಮಾಡಿ, ಗಡಿ ಗುರುತು ಹಾಕಿಕೊಡುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆಯಾಗಿದ್ದರೂ ಈ ವರೆಗೆ ಅಳತೆ ಕಾರ್ಯ ನಡೆದಿಲ್ಲ. ಗ್ರಾಮಸ್ಥರ ನೀರಿನ ಸಮಸ್ಯೆ ನಿವಾರಿಸಲು ಕೊಳವೆ ಬಾವಿಯಿಂದ ನೇರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಈ ಟ್ಯಾಂಕ್ ಬಳಕೆಯಾಗುತ್ತಿದ್ದರೆ ಸಮರ್ಪಕ ನೀರು ಸರಬರಾಜಿಗೆ ಅವಕಾಶವಾಗುತ್ತಿತ್ತು ಎಂದು ಹೇಳಿದ್ದಾರೆ.