Advertisement

ಸಿದ್ದುಗೆ ಜೆಡಿಎಸ್‌ ಏನೆಂಬುದ ತೋರಿಸುವೆ

04:03 PM Sep 05, 2017 | |

ದಾವಣಗೆರೆ: ಜೆಡಿಎಸ್‌ ಪಕ್ಷದ ಅಸ್ತಿತ್ವದ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೆಡಿಎಸ್‌ ಮತ್ತು ನಾನು ಏನೆಂದು ತೋರಿಸುವೆ ಎಂದು ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

Advertisement

ಸೋಮವಾರ ಶ್ರೀ ಸದ್ಯೋಜಾತ ಮಠದ ಆವರಣದಲ್ಲಿ ಜೆಡಿಎಸ್‌ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 1999ರಲ್ಲಿ ದಶ ದಿಕ್ಕುಗಳಿಂದ ದಾವಣಗೆರೆಗೆ ಕಾರ್ಯಕ್ರಮದಲ್ಲಿ ಇದೇ ಸಿದ್ದರಾಮಯ್ಯನವರನ್ನು ವ್ಯಕ್ತಿಯಲ್ಲ ಶಕ್ತಿ ಎಂಬುದಾಗಿ ಹೇಳಿದ್ದು ನಾನೇ. ಈಗ ಅವರೇ
ಜೆಡಿಎಸ್‌ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಚುನಾವಣೆ ಬರಲಿ, ಜೆಡಿಎಸ್‌ ಎಲ್ಲಿದೆ ಎಂಬುದನ್ನು ನೋಡೋಣ ಎಂದರು. 

ದಾವಣಗೆರೆ-ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್‌ ಕನಿಷ್ಠ 8ರಿಂದ 9 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಮತ್ತೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕೆಂಬ ಆಸೆ ಇದ್ದರೆ ನಾವೆಲ್ಲಾ ಐಕ್ಯತೆಯಿಂದ ಕೆಲಸ ಮಾಡಬೇಕು. ಆಗ ನಮ್ಮ ನಿರೀಕ್ಷೆಯಂತೆ 125 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
 ಶಾಸಕ ಶಿವಶಂಕರ್‌ಗೆ ನಾಯಕರಾಗುವ ಸಾಮರ್ಥ್ಯ ಇದೆ. ಮುಂದೆ ಸಿಎಂ ಆಗಬೇಕು. ಆಗುವ ಕಾಲ ಬರುತ್ತೆ. ಅದಕ್ಕೆ ಅವರು ಬೇಕಾದಂತಹ ನಾಯಕತ್ವ ರೂಪಿಸಿಕೊಳ್ಳಬೇಕು. ಎಲ್ಲಾ ಜಾತಿ, ಮತದವರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟಿಸಬೇಕು. ಹರಪನಹಳ್ಳಿಯ ಕಾರ್ಯಕ್ರಮ
ನೋಡಿ ನನಗೆ ಸಂತೋಷವಾಯಿತು. ಎಲ್ಲಾ ಜಾತಿ, ಧರ್ಮದವರು ಅಲ್ಲಿ ಸೇರಿದ್ದರು ಎಂದು ಹೇಳಿದರು.

ದಾವಣಗೆರೆಯನ್ನು ಚಿತ್ರದುರ್ಗದಿಂದ ಬೇರ್ಪಡಿಸಿದ್ದು ನಾನಲ್ಲ, ಜೆ.ಎಚ್‌. ಪಟೇಲರು. ದಾವಣಗೆರೆ ಜಿಲ್ಲೆಯ ರಾಜಕೀಯ ಸೂಕ್ಷತೆ ನನಗೆ ಗೊತ್ತಿದೆ. ಗಾಂಜಿ ವೀರಪ್ಪ, ಕೊಂಡಜ್ಜಿ ಬಸಪ್ಪನವರ ರಾಜಕೀಯವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಈಗಲೂ ಅಂತಹುದ್ದೇ ಸ್ಥಿತಿ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಕೈ ಮುಗಿದು, ಮನವಿ ಮಾಡಿದರು. ತಮ್ಮ ರಾಜಕೀಯ ಜೀವನದ ಏರಿಳಿತ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದ ದೇವೇಗೌಡರು, ರಾಮಕೃಷ್ಣ ಹೆಗಡಡೆಯವರೇ ನನ್ನನ್ನು ಪಕ್ಷದಿಂದ ಹೊರಹಾಕಿ, ಕೊನೆಗೆ ಅವರು ಸೋತು, ನಾನು
ಗೆದ್ದಾಗ ನನ್ನನ್ನು ವಾಪಸ್‌ ಪಕ್ಷಕ್ಕೆ ಆಹ್ವಾನಿಸಿದರು. 

1999ರಲ್ಲಿ ವಿನಾ ಕಾರಣ ಪಕ್ಷದಿಂದ ಹೊರಹಾಕಿ, ಚುನಾವಣೆಯಲ್ಲಿ ಸೋಲುಂಡಿದ್ದನ್ನು ನೆನಪಿಸಿಕೊಂಡ ದೇವೇಗೌಡರು, ಒಟ್ಟುಗೂಡಿಸುವ ಕೆಲಸವೇ ನನಗೆ ಸಂತೃಪ್ತಿ ಕೊಡುವುದು. ಈಗ ಅದನ್ನೇ ನಾನು ಮಾಡುತ್ತಿದ್ದೇನೆ. ಈಗಾಗಲೇ ಹೈದರಾಬಾದ್‌ ಕರ್ನಾಟಕದ 6 ಜಿಲ್ಲೆ ಪ್ರವಾಸ ಮಾಡಿದ್ದೇನೆ. ನಾಳೆ ಒಳನಾಡು ಜಿಲ್ಲೆಗಳ ಪ್ರವಾಸ ಕೈಗೊಳ್ಳುವೆ. ಎಲ್ಲಾ 224 ಕ್ಷೇತ್ರ ಪ್ರವಾಸ ಮಾಡಿದ ನಂತರ ಯಾರು ಅಭ್ಯರ್ಥಿ ಆಗಬೇಕೆಂಬುದನ್ನು ಪರಸ್ಪರ ಚರ್ಚಿಸಿ, ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಅವರು ತಿಳಿಸಿದರು.

Advertisement

ಕೇಂದ್ರ ಸಚಿವ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ಹಿಂದುತ್ವ ಮತ್ತು ರಾಷ್ಟ್ರೀಯವಾದ ಒಂದೇ ಎಂದು ಹೇಳುವವರನ್ನು ಮಂತ್ರಿ ಮಾಡಿರುವ ಮೋದಿಯವರು ಮುಸ್ಲಿಮರು ಎಲ್ಲಿ ಹೋಗಬೇಕು ಎಂಬುದನ್ನು ಹೇಳಲಿ. ಯಾವುದೇ ಕಾರಣಕ್ಕೂ ಕೋಮು ಸೌಹಾರ್ದಕ್ಕೆ ಭಂಗ ಉಂಟಾಗಬಾರದು. ಸಾಮರಸ್ಯದಿಂದಿದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಮೋದಿ ಮನಗಾಣಬೇಕು
ಎಂದ ಅವರು, ಕೆಲ ಮಾಧ್ಯಮದವರು ಅನಂತಕುಮಾರರನ್ನು ಬೆಂಕಿಯ ಚೆಂಡು ಎಂದು ಬಿಂಬಿಸಿದ್ದಾರೆ. ಇದು ಸರಿಯಲ್ಲ ಎಂದು ಅವರು ಹೇಳಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ, ಶಾಸಕರಾದ ಎಚ್‌.ಎಸ್‌. ಶಿವಶಂಕರ್‌, ಆರ್‌. ರಮೇಶ್‌ ಬಾಬು, ವಿಪ ಮಾಜಿ ಸದಸ್ಯ ಎಚ್‌.ಸಿ. ನೀರಾವರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್‌, ರೈತ ಮೋರ್ಚಾ ರಾಜ್ಯಾಧ್ಯಕ್ಷ ಬಿ. ನಾಗೇಶ್ವರ ರಾವ್‌, ಪಕ್ಷದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಪಕ್ಷದ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಹೊದಿಗೆರೆ ರಮೇಶ್‌, ಜಿಪಂ ಸದಸ್ಯೆ ಹೇಮಾವತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೀಲಾಕುಮಾರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜೆ. ಅಮಾನುಲ್ಲಾ ಖಾನ್‌, ಜಿಲ್ಲಾ ವೀಕ್ಷಕ ಆರ್‌.ಟಿ. ಅಂಜಿನಪ್ಪ, ಮುಖಂಡರಾದ ಆರ್‌. ಡೇವಿಡ್‌, ಸಿ. ಅಂಜಿನಪ್ಪ ಕಡತಿ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next