ಶಿವಮೊಗ್ಗ: ನಕ್ಸಲ್ ನಿಗ್ರಹ ಪಡೆ (ANF) ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ನಕ್ಸಲ್ ಮುಖಂಡ ವಿಕ್ರಂ ಗೌಡ (Vikram Gowda) ವಿರುದ್ಧ ಶಿವಮೊಗ್ಗದ ಆಗುಂಬೆ ಹಾಗೂ ತೀರ್ಥಹಳ್ಳಿ ಠಾಣೆಯಲ್ಲಿ ಮೂರು ಪ್ರಕರಣಗಳಿವೆ.
2009ರ ಮೇ 30ರಂದು ಆಗುಂಬೆ ಠಾಣೆಯಲ್ಲಿ ವ್ಯಾಪ್ತಿಯ ಉಳ್ಮಡಿ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ ನೆಕರ್ಕೆ ಗುಡ್ಡದಲ್ಲಿ ಅಪಾರ ಪ್ರಮಾಣದ ಶಸ್ತಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ನಿಷೇಧಿತ ಮಾವೋವಾದಿ ಸಿದ್ಧಾಂತಗಳಿರುವ ಪುಸ್ತಕಗಳು, ಎರಡು 9 ಎಂಎಂ ಬಂದೂಕು, ಜಿಲೇಟಿನ್ ಸ್ಫೋಟದ ವಸ್ತುವಿಗೆ ಬಳಸುವ ಬತ್ತಿ, ಡಿಟೋನೇಟರ್ ಸೇರಿ ನೂರಾರು ವಿವಿಧ ಮಾದರಿ ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ವಿಕ್ರಂ ಗೌಡ 6ನೇ ಆರೋಪಿಯಾಗಿದ್ದ.
2007ರ ಜುಲೈನಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಲ್ಲೂರುಅಂಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಡ್ಡ ಹಾಕಿ ಬಸ್‌ನಲ್ಲಿದ್ದ ಜನರನ್ನು ಇಳಿಸಿ ಬಸ್‌ನಲ್ಲಿದ್ದ ಡಿಸೇಲ್ ತೆಗೆದು ಬಸ್ ಸುಟ್ಟು ಹಾಕಿ ಕರಪತ್ರಗಳನ್ನು ಪೊಲೀಸರಿಗೆ ಹಾಗೂ ಪತ್ರಿಕೆಯವರಿಗೆ ಕೊಡುವಂತೆ ಕೊಟ್ಟು ಹೋಗಿದ್ದರು. ಈ ಪ್ರಕರಣದಲ್ಲೂ ವಿಕ್ರಂಗೌಡ ಎ6 ಆರೋಪಿಯಾಗಿದ್ದು ಪ್ರಕರಣ ದಾಖಲಾಗಿದೆ.
2012ರ ಜನವರಿ ತಿಂಗಳಲ್ಲಿ ಬರ್ಕಣ ಫಾಲ್ಸ್ ಬಳಿಯ ಮಲ್ಲಂದೂರಿನಲ್ಲಿ ಎಎನ್‌ಎಫ್ ತಂಡ ಕೂಂಬಿಂಗ್ ನಡೆಸುತ್ತಿರುವಾಗ ವಿಕ್ರಂ ಗೌಡ ಸೇರಿ 6 ಮಂದಿ ಸಹಚರರು ಎಎನ್‌ಎಫ್ ಸಿಬ್ಬಂದಿಯತ್ತ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದರು. ಮೂರು ಪ್ರಕರಣಗಳಿಗೆ ವಿಕ್ರಂಗೌಡ ಬೇಕಾಗಿದ್ದ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಬಾಕಿ ಇದೆ.