Advertisement
ಅಕ್ಕಸಾಲಿಗ ಸಮುದಾಯದ ಪಾಪಮ್ಮ ಹತ್ತು ಮಕ್ಕಳನ್ನು ಹೆತ್ತು, ಕೆಲಸ ಮಾಡಿ ಮಾಡಿ ಹಣ್ಣಾದ, “ಹಂಗಿನ ಕೂಳು ನಂಜು’ ಎಂದು ಆಗಾಗ ಕೂಗುರಾಗದಲ್ಲಿ ಗುಂಯ್‌ಗುಟ್ಟುವ ಮುದುಕಿ. ಕೋಳಿ ಕೂಗುವುದಕ್ಕೆ ಮುನ್ನವೇ ದಿನಗೆಲಸಗಳಲ್ಲಿ ತೊಡಗುತ್ತಿದ್ದ ಇವರನ್ನು “ಅಯ್ಯೋ ಮುದುಕಿ, ಯಾರಿಗಾಗಿ ಹೀಗೆ ಮೈಮರೆತು ಹಗಲು ರಾತ್ರಿ ದುಡಿಯುತ್ತಿದ್ದೀಯೆ? ಹೆಣ್ಣುಮಕ್ಕಳು ಮದುವೆಯಾಗಿ ನೆಮ್ಮದಿಯಾಗಿದ್ದಾರೆ. ಯಾಕಮ್ಮ ನಿನಗೆ ಈ ದುಡಿತ?’ ಎಂದು ಕೇಳುವವರಿದ್ದರು.
Related Articles
Advertisement
ಪಾಪಮ್ಮನಿಗಿಂತ ಪಂಚಾಂಗ ಓದುವ ಜೋಯಿಸರು ಹತ್ತು ವರ್ಷ ಹಿರಿಯರು, ವಿದ್ವಾಂಸರು. ಪಾಪಮ್ಮನನ್ನು ಉದ್ದೇಶಿಸಿ “ಯಾರೇ ನಿನಗೆ ಈ ಹೆಸರಿಟ್ಟರು’ ಎಂದು ಕೇಳಿದರು. ತವರು ಮನೆಯಲ್ಲಿ “ಪಾಪ, ಪಾಪ’ ಎಂದು ಕರೆಯುತ್ತಿದ್ದರು. ಅತ್ತೆ ಮನೆಗೆ ಬಂದಾಗ “ಪಾಪಮ್ಮ’ ಎಂದು ಕರೆದರು ಎಂದುತ್ತರವಾಗಿತ್ತು.
“ನಾನು ವ್ಯಾಕರಣ ಓದಿ ಕೆಟ್ಟೆ. ಪಾಪ-ಪುಣ್ಯ ಈ ನಿಘಂಟು ಶಬ್ದಗಳು ನನ್ನ ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿವೆ. “ಪಾಪ’ ಅಂದರೆ ದೇವರ ಸಮಾನವಾದ, ಪಾಪ ಪುಣ್ಯಗಳ ಲೇಪವಿಲ್ಲದ “ಮಗು’ ಎಂದು ನನಗೆ ಹೊಳೆಯಬೇಡವೆ?’ ಎಂದು ತಲೆ ಚಚ್ಚಿಕೊಂಡ ಜೋಯಿಸರು, “ನಿಜ, ನಿಜ. ಪಾಪನಾಗಿ ತವರು ಮನೆ ಬೆಳಗಿದೆ. ಅಮ್ಮನಾಗಿ ಗಂಡನ ಮನೆ ಉದ್ಧರಿಸಿದೆ. ಪಾಪಮ್ಮನಾಗಿ ಊರಿಗೆ ಕೀರ್ತಿ ತಂದೆ- ತರುತ್ತಿದ್ದೀಯೆ…’ ಅಂದರು. ಇವರಿಬ್ಬರ ನಿರ್ಮಲ ಅಂತಃಕರಣ ನೋಡಿ ಪ್ರಕೃತಿದೇವಿ ಚಲಿಸದೆ ನಿಂತುಬಿಟ್ಟಳು ಎಂದು ಬಣ್ಣಿಸುತ್ತಾರೆ ತಿ.ತಾ. ಶರ್ಮ.
ರಾಜ್ಯಪಾಲರಾಗಿ ಸೇವೆ ಸಲ್ಲಿಸಿದವರೊಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗಿದ್ದ ಪಿಂಚಣಿ ಪಡೆಯುತ್ತಿದ್ದರು. ಬೆಳಗಾವಿ ಜಿಲ್ಲೆಯ ಸೌಂದತ್ತಿ ಹಳ್ಳಿಯ ದೇವದಾಸಿ ಸಮುದಾಯದ ಪಾರಜ್ಜಿ ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲುವಾಸ ಅನುಭವಿಸಿಯೂ ಪಿಂಚಣಿ ಪಡೆಯುತ್ತಿರಲಿಲ್ಲ. “ಅಜ್ಜಿ, ನೀನೇಕೆ ಪಿಂಚಣಿ ಪಡೆದಿಲ್ಲ’ ಎಂದು ಅವರನ್ನು ಭೇಟಿ ಮಾಡಿದ ಶಿಕ್ಷಣ ಕ್ಷೇತ್ರದ ಸಂತ ಎಂದು ಹೆಸರಾದ ಬೆಳಗೆರೆ ಕೃಷ್ಣ ಶಾಸಿŒಗಳು ಕೇಳಿದಾಗ “ಸರಕಾರದಿಂದ ಹಣ ಕೇಳಲಿಕ್ಕೆ ಆ ದಿನ ನಾನು ಕೂಲಿಗೆ ಹೋಗಿದೆ°àನು?’ ಎಂಬ ತಿರಸ್ಕಾರ, ಬೇಸರ, ಸಿಟ್ಟುಮಿಶ್ರಿತ ಉತ್ತರವನ್ನು ನೀಡಿದ್ದರು. “ನನಗೆ ಈ ಪಾರಜ್ಜಿ ದೊಡ್ಡ ವ್ಯಕ್ತಿಯಾಗಿ ಕಾಣುತ್ತಾರೆ’ ಎಂದು ಕೃಷ್ಣಶಾಸ್ತ್ರಿ ನುಡಿಯುತ್ತಾರೆ.
ಸೌಲಭ್ಯ ಕೊಡುವಾಗ, ಪಡೆಯುವಾಗ…ನೂರಿನ್ನೂರು ಏಕೆ, 60-70-80 ವರ್ಷಗಳ ಹಿಂದಿನ ಭಾರತದ ಜನಜೀವನ ಶೈಲಿಯನ್ನು ಕಥಾನಕದ ಘಟನೆಗಳು ತೋರಿಸುತ್ತವೆ. ಹೀಗೆ ಸ್ವಲಾಭಕ್ಕಾಗಿ ಕೆಲಸ ಮಾಡದವರಿಗೆ ನಮೋ ಎನ್ನಬೇಕಲ್ಲವೆ? ನಾವೂ ಈಗ ಕೆಲಸ ಮಾಡುತ್ತೇವೆ. ನಮಗಾರಿಗೂ ಇಂದು “ಪುರುಸೊತ್ತು’ ಇಲ್ಲವೇ ಇಲ್ಲ. ಅವರ ಕೆಲಸಗಳಿಗೂ ನಮ್ಮ ಕೆಲಸಗಳಿಗೂ ಇರುವ ವ್ಯತ್ಯಾಸವೇನು? ಹೆಚ್ಚು ಹೆಚ್ಚು ಕಲಿತಂತೆ ನಮ್ಮ ಎಲ್ಲ ಕೆಲಸಗಳಿಗೂ “ರೊಕ್ಕ’ದ್ದೇ ಚಿಂತೆ… ಉನ್ನತೋನ್ನತ ವಿದ್ಯಾಭ್ಯಾಸಕ್ಕೂ, ಹುದ್ದೆಗಳಿಗೂ, ರೊಕ್ಕಕ್ಕೂ, ಇದರ ಹಿನ್ನೆಲೆಯಲ್ಲಿ ಸೃಷ್ಟಿಯಾಗುವ ಕೃತಕ ಘನತೆಗೂ ಅವಿನಾಭಾವ ಸಂಬಂಧ ಕುದುರಿಸುವ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿ ಅದರಲ್ಲೇ ಗಿರಕಿ ಹೊಡೆಯುತ್ತಿದ್ದೇವೆ. ರೊಕ್ಕವೇ ಆಗಲಿ, ಸಹಾಯ ಮಾಡುವುದೇ ಆಗಲಿ ಬೇರೆಯವರಿಗೆ ಕೊಡುವಾಗ ಕೈ, ಮನಸ್ಸು ಜಿಪುಣಾಗ್ರೇಸರವಾದರೆ, ಪಡೆಯುವಾಗ ಕೊಟ್ಟಷ್ಟೂ ಸಾಲದು ಎಂಬ ಭಾವ ಅಂಕುರಿಸುತ್ತದೆ. ಅದಕ್ಕೆ ಉದಾಹರಣೆ: ಒಮ್ಮೆ ಸಾಹಿತಿ ವೀ. ಸೀತಾರಾಮಯ್ಯನವರ ಮಕ್ಕಳು ಮನೆಗೆಲಸದವಳನ್ನು ಕೆಲಸಕ್ಕೆ ಬರುವುದು ಬೇಡವೆಂದರು. ಆಗ ವೀ.ಸೀ., “ಆಕೆ 15 ವರ್ಷಗಳಿಂದ ನಿಮಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾಳೆ. ನಿಮ್ಮನ್ನು ಕಂಪೆನಿಯಿಂದ ಇದೇ ರೀತಿ ಹೊರಹೋಗಲು ಹೇಳಿದರೆ ನೀವು ಹೋಗುತ್ತೀರೇನೋ? ನಿಮಗೆ ಕೊಟ್ಟಷ್ಟು ಇಂಕ್ರಿಮೆಂಟ್ ಸಾಲದು? ವೇತನ ಸಾಲದು? ಸಿಎಲ್, ಇಎಲ್ ಎಷ್ಟಿದ್ದರೂ ಮತ್ತಷ್ಟು ಬೇಕು. ನೀವು ಮಾಡುವ ಮಹಾಕೆಲಸಕ್ಕೆ ಬೋನಸ್ ಬೇರೆ ಬೇಕು. ಈಕೆಗೆ ಎಷ್ಟು ರಜೆ ಕೊಟ್ಟಿದ್ದೀರಿ? ಏನು ಕೊಟ್ಟಿದ್ದೀರಿ’ ಎಂದು ಗದರಿಸಿದ್ದರು. -ಮಟಪಾಡಿ ಕುಮಾರಸ್ವಾಮಿ