Advertisement

ಶಾಸಕರಿಗೆ ನೀಡಿರುವ ವಿಪ್‌ ಉಲ್ಲಂಘನೆಯಾದರೆ?ವಿಪ್‌ ಎಂದರೇನು?

01:43 AM Feb 07, 2019 | |

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಆತಂಕ ತಂದೊಡ್ಡಿರುವ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ನೀಡಲಾಗಿರುವ ವಿಪ್‌ ಉಲ್ಲಂಘಿಸಿದರೆ ಅವರ ಸದಸ್ಯತ್ವ ಅನರ್ಹತೆಗೆ ಸ್ಪೀಕರ್‌ಗೆ ಮನವಿ ಸಲ್ಲಿಸುವ ಅವಕಾಶವಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

Advertisement

ಈಗ ಶಾಸಕರಿಗೆ ನೀಡಿರುವ ವಿಪ್‌- ತ್ರೀ ಲೈನ್‌ ವಿಪ್‌ ಆಗಿದೆ. ಮುಖ್ಯ ಸಚೇತಕರೇ ನೀಡಿರುವುದರಿಂದ ಉಲ್ಲಂಘನೆಯಾದರೆ ಕಾನೂನು ಕ್ರಮಕ್ಕೆ ಅವಕಾಶವಿದೆ. ಅಧಿವೇಶನ, ಬಜೆಟ್ ಸೇರಿದಂತೆ ಅನಿವಾರ್ಯ ಸಂದರ್ಭಗಳಲ್ಲಿ ಈ ವಿಪ್‌ ನೀಡಲಾಗುತ್ತದೆ. ವಿಪ್‌ನಲ್ಲಿ ಇಂತಿಷ್ಟು ದಿನಾಂಕದಿಂದ ಇಂತಿಷ್ಟು ದಿನಾಂಕದವರೆಗೆ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕು. ಸರ್ಕಾರದ ಪರ ಮತ ಚಲಾಯಿಸಬೇಕು ಎಂದು ತಿಳಿಸಲಾಗಿರುತ್ತದೆ. ಸದನಕ್ಕೆ ಗೈರು ಹಾಜರಾಗುವುದು ವಿಪ್‌ ಉಲ್ಲಂಘನೆ ಎಂದು ಪರಿಗಣಿಸಿ ಶಾಸಕಾಂಗ ಪಕ್ಷದ ನಾಯಕರು ಇಲ್ಲವೇ ಮುಖ್ಯ ಸಚೇತಕರು ಸ್ಪೀಕರ್‌ಗೆ ದೂರು ಸಲ್ಲಿಸಲು ಅವಕಾಶ ಇದೆ ಎಂದು ಹೇಳುತ್ತಾರೆ.

ವಿಪ್‌ ಪ್ರಕಾರ, ಸದಸ್ಯರು ಹಾಜರಾಗದಿದ್ದರೆ ಅಥವಾ ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸಿದರೆ ಕಾನೂನು ಪ್ರಕಾರ ಅಥವಾ ನಮ್ಮ ಪಕ್ಷದ ಸದಸ್ಯತ್ವ ಧಿಕ್ಕರಿಸಿದ್ದೀರಿ ಎಂದು ಪರಿಗಣಿಸಿ ಸಂವಿಧಾನದ 10ನೇ ಪರಿಚ್ಛೇದ, ಕಲಂ 64 ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್‌ ಶಾಸಕರಿಗೆ ನೀಡಿರುವ ತ್ರೀ ಲೈನ್‌ ವಿಪ್‌ನಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಸರ್ಕಾರದ ಪರ ಮತ ಚಲಾಯಿಸಬೇಕು ಎಂದು ಮಾತ್ರ ಇದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶ ಇಲ್ಲ. ಇದೂ ಅತೃಪ್ತ ಶಾಸಕರು ಬಚಾವಾಗಲು ಕಾರಣವಾಗಬಹುದು ಎಂದು ಹೇಳಲಾಗಿದೆ.

ಇದನ್ನು ಅರಿತೇ ಮತ್ತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ, ಸಚೇತನಾ ಪತ್ರ ನೀಡಿದ್ದು, ಫೆ.6 ರಿಂದ 15ರವರೆಗೆ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರು ಕಡ್ಡಾಯವಾಗಿ ಹಾಜರು ಇರಬೇಕು ಎಂದು ವಿಪ್‌ ಜಾರಿಗೊಳಿಸಲಾಗಿದೆ.

ವಿಪ್‌ ಜಾರಿಯಾದ ನಂತರವೂ ಪಾಲನೆಯಾಗದಿದ್ದರೆ ಸಚೇತನಾ ಪತ್ರದ ಮೂಲಕ ನಿಮಗೆ ವಿಪ್‌ ಕೊಡಲಾಗಿದೆ. ಅದು ಪಾಲನೆ ಮಾಡಿದ್ದೀರಿ ಎಂದು ನೆನಪಿಸುವ ಸಲುವಾಗಿ ನೀಡಲಾಗುತ್ತದೆ. ಇದೂ ಸಹ ಗೈರು ಹಾಜರಾದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಅನುಸರಿಸುವ ಹಂತ ಎಂದು ಹೇಳಲಾಗಿದೆ.

Advertisement

ಸದನದಲ್ಲಿ ಅವಿಶ್ವಾಸ ಮತ ಸಂದರ್ಭದಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದರೆ ಮಾತ್ರ ಸದಸ್ಯತ್ವದಿಂದ ಅನರ್ಹತೆ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ, ಈಗ ಜಾರಿ ಮಾಡಿರುವ ವಿಪ್‌ ಉಲ್ಲಂಘನೆಯಿಂದ ಸದಸ್ಯತ್ವಕ್ಕೆ ಬಾಧಕವಾಗುವುದಿಲ್ಲ ಎಂದು ಅತೃಪ್ತ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಕಾನೂನು ತಜ್ಞರ ಸಮ್ಮುಖದಲ್ಲಿ ಇದನ್ನು ತಿಳಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಪ್‌ ಎಂದರೇನು?

ಯಾವುದೇ ಒಂದು ರಾಜಕೀಯ ಪಕ್ಷವು ತಮ್ಮ ಪಕ್ಷದ ಸದಸ್ಯರಿಗೆ ಅನಿವಾರ್ಯ ಸಂದರ್ಭದಲ್ಲಿ ಪಕ್ಷದ ತೀರ್ಮಾನ ಪಾಲಿಸುವ ಸಂಬಂಧ ನೀಡುವ ನೋಟಿಸ್‌. ಪಕ್ಷದ ‘ಬಿ’ ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ. ಒನ್‌ ಲೈನ್‌ ವಿಪ್‌: ವಿಶ್ವಾಸ ಮತ ಸಂದರ್ಭದಲ್ಲಿ ನೀಡುವ ಸರ್ಕಾರದ ಪರ ಹಾಗೂ ಪಕ್ಷದ ಆದೇಶ ಪಾಲನೆಗೆ ನೀಡುವ ವಿಪ್‌. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವ ಸಂಬಂಧ ನೀಡುವ ವಿಪ್‌. ಟೂ ಲೈನ್‌ ವಿಪ್‌: ಬಜೆಟ್ ಅಥವಾ ಪ್ರಮುಖ ವಿಧೇಯಕ ಮಂಡನೆ ಮತ್ತು ಅನುಮೋದನೆ ಸಮಯದಲ್ಲಿ ನೀಡುವ ವಿಪ್‌. ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ನೀಡುವ ವಿಪ್‌. ತ್ರೀ ಲೈನ್‌ ವಿಪ್‌: ಅಧಿವೇಶನದ‌ಲ್ಲಿ ಹಾಜರಾತಿ, ವಿತ್ತೀಯ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳುವಿಕೆ, ಬಜೆಟ್ ಅನುಮೋದನೆ ಸಂದರ್ಭದಲ್ಲಿ ಸರ್ಕಾರದ ಪರ ಮತ ಚಲಾಯಿಸುವಿಕೆಗೆ ನೀಡುವ ವಿಪ್‌.

Advertisement

Udayavani is now on Telegram. Click here to join our channel and stay updated with the latest news.

Next