ಶ್ರೀನಗರ : ಜಮ್ಮುವಿನ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಪಾಕಿಸ್ಥಾನಿ ಪಡೆಗಳು ಬುಧವಾರ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು ನಂತರ ಗಡಿ ಭದ್ರತಾ ಪಡೆ (BSF) ಸಿಬಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ನಿಯಂತ್ರಣ ರೇಖೆಯ ಇನ್ನೊಂದು ಬದಿಯಿಂದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದು, ಪಾಕಿಸ್ಥಾನಿ ರೇಂಜರ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡಿದರು. ಆದಾಗ್ಯೂ, ಇನ್ನೊಂದು ಬದಿಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳ ಬಗ್ಗೆ ತತ್ ಕ್ಷಣದ ವರದಿಯಾಗಿಲ್ಲ.
“ನಸುಕಿನ 2.35 ರ ಸುಮಾರಿಗೆ, ಗಡಿಯಾಚೆಯಿಂದ ಅಖ್ನೂರ್ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಬಿಎಸ್ಎಫ್ ಸೂಕ್ತವಾಗಿ ಪ್ರತಿಕ್ರಿಯಿಸಿದೆ. ಪಾಕಿಸ್ಥಾನಿ ಗುಂಡಿನ ದಾಳಿಯಲ್ಲಿ ಒಬ್ಬ ಬಿಎಸ್ಎಫ್ ಸಿಬಂದಿ ಗಾಯಗೊಂಡಿದ್ದಾರೆ” ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಗಮನಾರ್ಹವಾಗಿ, ಎರಡು ದೇಶಗಳು ಕದನ ವಿರಾಮ ಒಪ್ಪಂದ ನವೀಕರಿಸಿದ 2021 ರಿಂದ ಕದನ ವಿರಾಮ ಉಲ್ಲಂಘನೆಯ ಘಟನೆಗಳ ಆವರ್ತನವು ಕಡಿಮೆಯಾಗಿತ್ತು. ಆದಾಗ್ಯೂ, ಕಳೆದ ವರ್ಷ ರಾಮ್‌ಗಢ್ ಸೆಕ್ಟರ್‌ನಲ್ಲಿ ಪಾಕಿಸ್ಥಾನದ ಗುಂಡಿನ ದಾಳಿ ಕಳೆದ ಮೂರು ವರ್ಷಗಳಲ್ಲಿ ಮೊದಲ ಬಾರಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 10 ವರ್ಷಗಳ ನಂತರ ವಿಧಾನಸಭೆ ಚುನಾವಣೆ ಭಾರೀ ಭದ್ರತೆಯೊಂದಿಗೆ ಮತದಾನಕ್ಕೆ ಸಿದ್ಧತೆ ನಡೆಡಿರುವ ವೇಳೆ ಪಾಕ್ ಮತ್ತೆ ಕಿರಿಕ್ ಮಾಡಿದೆ.