ಮುಧೋಳ: ನಾಗಾಲೋಟದಲ್ಲಿ ಬೆಳೆಯುತ್ತಿರುವ ಮುಧೋಳ ತಾಲೂಕಿಗೆ ಅವಶ್ಯವಿರುವ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷೆ ಇದೀಗ ಮತ್ತಷ್ಟು ಹೆಚ್ಚಾಗಿದೆ. ಅ.21ರಂದು ಬೆಂಗಳೂರಿನಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ 100 ಹೊಸ ಪೊಲೀಸ್ ಠಾಣೆ ಮಂಜೂರು ಮಾಡುವ ಇಂಗಿತ ವ್ಯಕ್ತಪಡಿಸಿರುವ ಬೆನ್ನಲ್ಲೇ ಮುಧೋಳ ಮತಕ್ಷೇತ್ರದ ಶಾಸಕರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರ್.ಬಿ. ತಿಮ್ಮಾಪುರ ಅವರು ಮುಧೋಳಕ್ಕೆ ಗ್ರಾಮೀಣ ಪೋಲೀಸ್ ಠಾಣೆ ಮಂಜೂರು ಮಾಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.
Advertisement
ಸದ್ಯದ ಪರಿಸ್ಥಿತಿಯಲ್ಲಿ ಮುಧೋಳದಲ್ಲಿ ಒಂದೇ ಪೊಲೀಸ್ ಠಾಣೆಯಿರುವುದರಿಂದ ಇಲ್ಲಿನ ಪೊಲೀಸ್ ಸಿಬ್ಬಂದಿ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸಬೇಕಿದೆ. ಪ್ರತಿನಿತ್ಯ ಕುಂದುಕೊರತೆ ಹೇಳಿಕೊಂಡು ಠಾಣೆಗೆ ಬರುವ ನೂರಾರು ಜನರನ್ನು ನಿಭಾಯಿಸುವಲ್ಲಿಹೈರಾಣಾಗಿರುವ ಪೊಲೀಸ್ ಸಿಬ್ಬಂದಿ ವಿಶ್ರಾಂತಿರಹಿತ ಕೆಲಸ ಮಾಡುವಂತಾಗಿದೆ. ಕ್ಷೇತ್ರದ ಸಮಸ್ಯೆ ಅರಿತಿರುವ ಜಿಲ್ಲಾ ಉಸ್ತುವಾರಿ ಸಚಿವರು ಇದೀಗ ಗ್ರಾಮೀಣ ಪೊಲೀಸ್ ಠಾಣೆ ಮಂಜೂರಿಗೆ ಪ್ರಯತ್ನಿಸುತ್ತಿರುವುದು ಶೀಘ್ರವೇ ಸಿಹಿ ಸುದ್ದಿ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂದೋಬಸ್ತ್ ಗಾಗಿ ರಾಜ್ಯದ ಬೇರೆ ಬೇರೆ ಕಡೆಯಿಂದ ಸಿಬ್ಬಂದಿ ನಿಯೋಜಿಸುವ ಅನಿವಾರ್ಯತೆ ಇದೆ. ಒಂದೇ ಒಂದು ಠಾಣೆಯಿರುವುದರಿಂದ ಬಂದೋ ಬಸ್ತ್ ನಂತಹ ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿತೀವ್ರ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಗ್ರಾಮೀಣ ಪೊಲೀಸ್ ಠಾಣೆ ನಿರ್ಮಿಸಿದರೆ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಗೊಳಿಸಬಹುದು.
Related Articles
Advertisement
ಮನೆಮಠ ಮರೆತು ಕೆಲಸ ನಿರ್ವಹಿಸುವ ಅನಿವಾರ್ಯತೆ:ರಾಜಕೀಯವಾಗಿ, ಧಾರ್ಮಿಕವಾಗಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿರುವ ಮುಧೋಳ ತಾಲೂಕಿನ ಜನರು ನೆಮ್ಮದಿ ಜೀವನ ನಡೆಸುತ್ತಿರುವುದರ ಹಿಂದೆ ಇಲ್ಲಿನ ಪೊಲೀಸ್ ಸಿಬ್ಬಂದಿಯ ಅವಿರತ ಶ್ರಮ ಅಡಗಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ನಗರವನ್ನು ಹದ್ದಿನ ಕಣ್ಣಿನಿಂದ ಅವಲೋಕಿಸುವ ಇಲ್ಲಿನ ಸಿಬ್ಬಂದಿ ಹಬ್ಬ ಹರಿದಿನದಂತಹ ಸಂದರ್ಭದಲ್ಲಿ ರಜೆ, ಮನೆ-ಮಠ ಮರೆತು ಕಾರ್ಯ ನಿರ್ವಹಿಸುತ್ತಾರೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚಿನ ಗಣೇಶ ಹಬ್ಬ. ಹಬ್ಬದ ವೇಳೆ ನಡೆಯುತ್ತಿದ್ದ ಪ್ರತಿಯೊಂದು ಘಟನೆಗಳ ಮೇಲೂ ನಿಗಾ ವಹಿಸಿದ್ದ ಪೊಲೀಸ್ ಇಲಾಖೆ ಹಬ್ಬವನ್ನು ಶಾಂತವಾಗಿ ಸಮಾರೋಪಗೊಳ್ಳುವಂತೆ ಮಾಡಿ ರಾಜ್ಯಕ್ಕೆ ಮುಧೋಳ ಪೊಲೀಸ್ ಠಾಣೆ ಸಿಬ್ಬಂದಿ ಮಾದರಿಯಾಗಿದ್ದಾರೆ. ಒಟ್ಟಿನಲ್ಲಿ ಮುಧೋಳದ ಪೊಲೀಸರ ಒತ್ತಡ ಕಡಿಮೆಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣ ಠಾಣೆ ಮಂಜೂರು ಮಾಡುವಲ್ಲಿ ಯಶಸ್ವಿಯಾದರೆ ತಾಲೂಕಿನ ಜನರಿಗೆ ಹೆಚ್ಚು ಹಾಗೂ ಪರಿಣಾಮಕಾರಿಯಾಗಿ ಸೇವೆ ಒದಗಿಸಬಹುದು ಎಂಬ ಇಂಗಿತ ವ್ಯಕ್ತಪಡಿಸುತ್ತಾರೆ ಇಲ್ಲಿನ ಸಿಬ್ಬಂದಿ. ಮುಧೋಳ ತಾಲೂಕಿಗೆ ಗ್ರಾಮೀಣ ಪೊಲೀಸ್ ಠಾಣೆ ಅವಶ್ಯಕತೆ ಕುರಿತು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ನಾನು ನಿರಂತರ ಪ್ರಯತ್ನದಲ್ಲಿದ್ದು, ಶೀಘ್ರವೇ ತಾಲೂಕಿನ ಜನತೆಗೆ ಸಿಹಿ ಸುದ್ದಿ ದೊರೆಯುವ ವಿಶ್ವಾಸವಿದೆ.
●ಆರ್.ಬಿ.ತಿಮ್ಮಾಪುರ,
ಜಿಲ್ಲಾ ಉಸ್ತುವಾರಿ ಸಚಿವರು. *ಗೋವಿಂದಪ್ಪ ತಳವಾರ