Advertisement
ಬಿಹಾರದ ಪ್ರಮುಖ ಕೂರ್ಮಿ ಸಮುದಾಯದ ನಾಯಕರಾಗಿರುವ ನಿತೀಶ್ 8 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೂ ರಾಜಕಾರಣದಲ್ಲಿ ಒಂದು ದಾಖಲೆಯೇ. ಸದ್ಯ 71 ರ ಹರೆಯದಲ್ಲಿರುವ ನಿತೀಶ್ ಕುಮಾರ್ ಅವರ ರಾಜಕೀಯ ನಡೆ ಕಳೆದೊಂದು ದಶಕದಿಂದ ಪರಸ್ಪರ ವೈರುಧ್ಯಗಳಿಂದಲೇ ಕೂಡಿ ಜನತೆಗೆ ಗೊಂದಲ ಹುಟ್ಟಿಸುವಂತಹ ದಾರಿಯಲ್ಲಿ ಸಾಗಿದೆ.
Related Articles
Advertisement
2014 ರಲ್ಲಿ ಬಿಜೆಪಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುವುದಾಗಿ ಘೋಷಿಸಿದಾಗ ಸಮಾಜವಾದಿ ಸಿದ್ದಾಂತದ ಪ್ರತಿಪಾದಕರಾಗಿದ್ದ ನಿತೀಶ್ ಬಹಿರಂಗವಾಗಿ ವಿರೋಧಿಸಿ ಎನ್ ಡಿಎ ಮೈತ್ರಿಕೂಟದಿಂದ ಹೊರ ನಡೆದರು. ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಒಟ್ಟು 40 ಸ್ಥಾನಗಳ ಪೈಕಿ ಬಿಜೆಪಿ 22 ಸ್ಥಾನಗಳನ್ನು ಗೆದ್ದರೆ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ 6 ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ 3 ಸ್ಥಾನಗಳನ್ನು ಗೆದ್ದಿದ್ದವು. 20 ಸ್ಥಾನಗಳನ್ನು ಹೊಂದಿದ್ದ ಜೆಡಿಯು ಮೋದಿ ಅಲೆಯ ಹೊಡೆತಕ್ಕೆ ಸಿಲುಕಿ 18 ಸ್ಥಾನಗಳನ್ನು ಕಳೆದುಕೊಂಡು ಕೇವಲ 2 ಸ್ಥಾನಗಳನ್ನು ಗಳಿಸಿ ಭಾರಿ ಮುಖಭಂಗ ಅನುಭವಿಸಿತು. ಸೋಲಿನ ಆಘಾತಕ್ಕೆ ಸಿಲುಕಿದ ನಿತೀಶ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಜಿತನ್ ರಾಮ್ ಮಾಂಝಿ ಅವರಿಗೆ ಅಧಿಕಾರ ನೀಡಿದ್ದರು.
ಭವಿಷ್ಯದ ರಾಜಕಾರಣದ ಬಗ್ಗೆ ಚಿಂತಿಸಿದ ನಿತೀಶ್ ಹೊಸ ಮಾರ್ಗ ಕಂಡು ಕೊಂಡು ”ಮಹಾ ಘಟ್ ಬಂಧನ್” ಮೂಲಕ ವಿರೋಧಿಗಳ ಕೈ ಜೋಡಿಸಿದರು. ಆರ್ ಜೆಡಿ ಮತ್ತು ಕಾಂಗ್ರೆಸ್ ಜತೆ ಸೇರಿ 2015 ರ ವಿಧಾನಸಭಾ ಚುನಾವಣೆ ಎದುರಿಸಿ ಭರ್ಜರಿ ಜಯ ಸಾಧಿಸಿ ಮತ್ತೆ ಸಿಎಂ ಆದರು. ಜೆಡಿಯು+ಆರ್‌ಜೆಡಿ+ಕಾಂಗ್ರೆಸ್ 243 ಸ್ಥಾನಗಳಲ್ಲಿ 178ರಲ್ಲಿ ಜಯಭೇರಿ ಬಾರಿಸಿತು. ಬಿಜೆಪಿ ಮಿತ್ರಪಕ್ಷಗಳು ಕೇವಲ 58 ಸ್ಥಾನಗಳನ್ನು ಮಾತ್ರ ಗಳಿಸಲು ಯಶಸ್ವಿಯಾಗಿದ್ದವು.
2017 ರಲ್ಲಿ ಮಹಾ ಘಟ್ ಬಂಧನ್ ನಿಂದ ಹೊರ ಬಂದ ನಿತೀಶ್ ಬಿಜೆಪಿಯೊಂದಿಗೆ ಮತ್ತೆ ಸಖ್ಯ ಮಾಡಿಕೊಂಡರು. ಎನ್ ಡಿಎ ಭಾಗವಾದ ಅವರು ರಾಜಕೀಯ ಲಾಭ ಪಡೆದುಕೊಂಡರು. ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಮೋಡಿ ಮಾಡಿದ್ದ ಎನ್ ಡಿಎ 40 ಸ್ಥಾನಗಳ ಪೈಕಿ 39 ನ್ನು ಬಾಚಿಕೊಂಡಿತ್ತು. ಬಿಜೆಪಿ 17, ಜೆಡಿಯು 16 ಮತ್ತು ಎಲ್ ಜೆಪಿ 6 ಸ್ಥಾನಗಳನ್ನು ಗೆದ್ದಿದ್ದವು.
2020 ರಲ್ಲಿ ಎನ್ ಡಿಎ ಮೈತ್ರಿ ಕೂಟದ ಹಲವು ಗೊಂದಲದ ನಡುವೆ ಚುನಾವಣೆ ಎದುರಿಸಿ ಪ್ರಯಾಸಕರ ಗೆಲುವು ಸಾಧಿಸಿ ನಿತೀಶ್ ಮತ್ತೆ ಸಿಎಂ ಆಗಿದ್ದರು. 243 ವಿಧಾನಸಭಾ ಸ್ಥಾನಗಳ ಪೈಕಿ ಜೆಡಿಯು ನಿತೀಶ್ ನಾಯಕತ್ವದಲ್ಲಿ 43 ಸ್ಥಾನಗಳನ್ನು ಮಾತ್ರ ಗೆದ್ದು ಕೊಂಡಿತ್ತಾದರೂ ಬಿಜೆಪಿ ಆಡಿದ ಮಾತಿನಂತೆ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿತ್ತು. ಬಿಜೆಪಿ 19.5% ಮತ ಪ್ರಮಾಣ ಗಳಿಸಿದ್ದರೆ ಜೆಡಿಯು 15.4%, ಆರ್ ಜೆ ಡಿ 23.1% ಮತ ಗಳಿಸಿದ್ದವು.
ಮತ್ತೆ ಮಹಾ ಘಟ”ಬಂಧನ ”ದ ಮೂಲಕ ಹೊಸ ಮಾದರಿಯ ಆಡಳಿತಕ್ಕೆ ಹೊರಟಿರುವ ನಿತೀಶ್ ರಾಜಕೀಯ ಹಾದಿಯಲ್ಲಿ ಸವಾಲುಗಳೇ ಹೆಚ್ಚಿರುವುದರಲ್ಲಿ ಅನುಮಾನವಿಲ್ಲ. ಹತ್ತಿರ ಚುನಾವಣೆ ಇಲ್ಲದೆ ಹೋದರೂ ಬಿಜೆಪಿ ಪಕ್ಷ ಸಂಘಟಿಸಿ ಇತರ ಮಿತ್ರ ಪಕ್ಷಗಳೊಂದಿಗೆ ಹೋರಾಟಕ್ಕೆ ವೇದಿಕೆ ಸೃಷ್ಟಿಸುವ ಎಲ್ಲಾ ಲಕ್ಷಣಗಳಿವೆ. ಈ ಹಿಂದೆ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಮೈತ್ರಿ ಕಡಿದುಕೊಂಡಿದ್ದ ನಿತೀಶ್ ಮುಂದೆ ಯಾವ ರೀತಿ ಪಕ್ಷ ಮತ್ತು ಆಡಳಿತ ಮುಂದುವರಿಸುತ್ತಾರೆ ಎನ್ನುವ ಕುತೂಹಲವೂ ರಾಜಕೀಯವಲಯದಲ್ಲಿ ಹುಟ್ಟಿಕೊಂಡಿದೆ.
ವಿಷ್ಣುದಾಸ್ ಪಾಟೀಲ್