ಬೆಂಗಳೂರು: ಕುಮಾರ ಸ್ವಾಮಿಗೂ ಗ್ಯಾರಂಟಿ ಯೋಜನೆಗಳಿಗೂ ಏನು ಸಂಬಂಧ? ಅವರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಏನು ಗೊತ್ತಿದೆ? ಅವರು ಅದರ ಫಲಾನುಭವಿಯೂ ಅಲ್ಲ; ಅದರ ಬಗ್ಗೆ ಚಿಂತನೆಯೂ ಇಲ್ಲ. ಅವರಿಗೇಕೆ ಗ್ಯಾರಂಟಿ ಯೋಚನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸದಾಶಿವ ನಗರದ ನಿವಾಸದ ಬಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ತಮ್ಮ ಕ್ಷೇತ್ರ ಚನ್ನಪಟ್ಟಣಕ್ಕೆ ಹೋಗಿ ಕೇಳಿ ತಿಳಿದುಕೊಳ್ಳಲಿ ಎಂದು ತೀಕ್ಷ್ಣವಾಗಿ ಹೇಳಿದರು.
ಕುಮಾರಸ್ವಾಮಿಗೆ ಬಡ ಜನರ ನೋವು ಗೊತ್ತಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ. ಗ್ಯಾರಂಟಿ ಯೋಜನೆಗಳಿಂದ ಯಾರಿಗೆ ಒಳ್ಳೆಯದಾಗಬೇಕಿತ್ತೋ ಅವರಿಗೆ ಅದು ತಲುಪುತ್ತಿದೆ. ಪಾಪ, ಕುಮಾರಸ್ವಾಮಿಗೆ ಅವರ ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲು ಅವಕಾಶವೇ ಸಿಗಲಿಲ್ಲ. ಬಹುಶಃ ಅವರಿಗೆ ಆ ಬಗ್ಗೆ ಬೇಸರ ಇದ್ದಂತಿದೆ ಎಂದು ವ್ಯಂಗ್ಯವಾಡಿದರು.
ತೆಲಂಗಾಣದ ಐದು ಕ್ಷೇತ್ರಗಳ ಚುನಾವಣ ಪ್ರಚಾರದಲ್ಲಿ ಭಾಗವಹಿಸಿದ್ದು, ಅಲ್ಲೆಲ್ಲ ನಾವು ಗೆಲ್ಲುವ ವಿಶ್ವಾಸವಿದೆ. ಡಿ.9ರಂದು ಕಾಂಗ್ರೆಸ್ ತೆಲಂಗಾಣದಲ್ಲಿ ಸರಕಾರ ರಚಿಸಲಿದ್ದು, ಕರ್ನಾಟಕದ ಮಾದರಿಯಂತೆ 6 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಕರ್ನಾಟಕದ ಸಚಿವರಿಗೆ ಪಂಚರಾಜ್ಯ ಚುನಾವಣೆ ಸಲುವಾಗಿ ಕಮಿಷನ್ ಟಾರ್ಗೆಟ್ ನೀಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಟಾರ್ಗೆಟ್ ಕೊಟ್ಟಿರಬೇಕು. ನಮ್ಮ ಸಚಿವರು ತೆಲಂಗಾಣ ಚುನಾವಣೆ ಪ್ರಚಾರಕ್ಕೆ ಹೋಗಿಬರುತ್ತಿ¨ªಾರೆ. ತಾಳ್ಮೆಯಿಂದ ಇರಲು ಕುಮಾರಸ್ವಾಮಿಗೆ ಆಗುತ್ತಿಲ್ಲ ಎಂದರು.