ಯಾದಗಿರಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಶಾಸಕ ಗವಿಯಪ್ಪ ಅಪಸ್ವರ ವಿಚಾರವಾಗಿ ಯಾದಗಿರಿಯಲ್ಲಿ ಮಂಗಳವಾರ (ನ.26) ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ನೀವು ಅವರಿವರ ಮಾತ್ಯಾಕೆ ಕೇಳ್ತಿರಾ? ನಮ್ಮ ಸಿಎಂ, ಅಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಗ್ಯಾರಂಟಿ ರದ್ದು ಪ್ರಶ್ನೆಯೇ ಉದ್ಭವವಾಗಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಹಿಂದೆ ಸರಿದರೆ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲುತ್ತೇವೆ. ಆದರೆ ನಾವು ಯಾವತ್ತಿಗೂ ಅಂತಹ ಕೆಲಸ ಮಾಡಲ್ಲ. ನುಡಿದಂತೆ ನಡೆದಿದ್ದೇವೆ” ಎಂದರು.
ಜನರ ನಂಬಿಕೆಯನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡು ಮೊದಲಿಂದಲೂ ಬಂದಿದೆ. ಗ್ಯಾರಂಟಿ ಕಟ್ ಮಾಡುವ ವಿಚಾರ ಶಾಸಕರು ಹೇಳಬಹುದು ಆದರೆ ಅಂತಿಮವಾಗಿ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಸ್ಪಷ್ಟನೆ ನೀಡಿದರು.
ಕೆಕೆಆರ್ಡಿಬಿ ಅನುದಾನದಲ್ಲಿ ಶಾಸಕರಿಗೆ ಯಾವುದೇ ತಾರತಮ್ಯ ಆಗಿಲ್ಲ, ನಂಜುಂಡಪ್ಪ ವರದಿ ಪ್ರಕಾರ ಜಿಲ್ಲಾ ಕೇಂದ್ರದ ಶಾಸಕರಿಗೆ ಕಡಿಮೆ ಅನುದಾನ ಬರುತ್ತದೆ. ಕೇವಲ ಗವಿಯಪ್ಪರಿಗೆ ಮಾತ್ರ ಕಡಿಮೆ ಬಂದಿಲ್ಲ ಎಂದರು.
ನಂಜುಂಡಪ್ಪ ವರದಿ ಆಧಾರದ ಮೇಲೆ ಯಾವ ನಿರ್ಧಾರ ಮಾಡಿದ್ದಾರೆ. ಅದೇ ರೀತಿ ಅನುದಾನ ಬರುತ್ತದೆ. ನಂಜುಂಡಪ್ಪ ವರದಿ ಮರು ಪರಿಶೀಲನೆಗೆ ಸಿಎಂ ಸಮಿತಿ ರಚಿಸಿದ್ದಾರೆ. ಕಮಿಟಿ ವರದಿ ಆಧಾರ ಮೇಲೆ ಹಿಂದುಳಿದ ತಾಲೂಕುಗಳಿಗೆ ಹೆಚ್ಚಿನ ಅನುದಾನ ಬರುತ್ತದೆ ಎಂದು ಸಚಿವ ದರ್ಶನಾಪುರ ಅವರು ಹೇಳಿದರು