ಮುಂಬಯಿ : ಕಾಂಗ್ರೆಸ್ – ಎನ್‌ಸಿಪಿ ಭದ್ರಕೋಟೆಯಾಗಿರುವ ಪಶ್ಚಿಮ ಮಹಾರಾಷ್ಟ್ರದ 9 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆಯಿಂದ ಅತ್ಯಂತ ಕತ್ತುಕತ್ತಿನ, ಜಿದ್ದಾಜಿದ್ದಿಯ ಸ್ಪರ್ಧೆ ಈ ಬಾರಿ ಕಂಡು ಬರುತ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಅತ್ಯಂತ ಬಲಿಷ್ಠವಾಗಿದ್ದ ಸಂದರ್ಭದಲ್ಲಿಯೂ ಇಲ್ಲಿನ ಒಂಬತ್ತು ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಸಿಪಿ ಗೆ ನಾಲ್ಕು ಸ್ಥಾನ, ಸ್ವಾಭಿಮಾನಿ ಶೇತ್ಕರಿ ಸಂಘಟನೆ (ಎಸ್‌ಎಸ್‌ಎಸ್) ಗೆ ಒಂದು ಸ್ಥಾನ, ಬಿಜೆಪಿಗೆ ಎರಡು ಮತ್ತು ಶಿವ ಸೇನೆಗೆ ಎರಡು ಸ್ಥಾನಗಳು ದಕ್ಕಿದ್ದವು.
ಪಶ್ಚಿಮ ಮಹಾರಾಷ್ಟ್ರದ 9 ಲೋಕಸಭಾ ಸ್ಥಾನಗಳಾಗಿರುವ ಬಾರಾಮತಿ, ಮಾಢಾ, ಸಾಂಗ್ಲಿ, ಸಾತಾರಾ, ಕೊಲ್ಹಾಪುರ, ಹಾತ್‌ಕನಂಗಾಲೆ (ಇಲ್ಲಿ ಎ.23ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ), ಮಾವಾಲ್ ಮತ್ತು ಶಿರೂರ್ (ಇಲ್ಲಿ ಎ.29ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ) ಎನ್‌ಸಿಪಿಯ ಭದ್ರಕೋಟೆ ಎನಿಸಿಕೊಂಡಿವೆ.
ಸಿರಿವಂತ ಮತ್ತು ಸಮೃದ್ಧ ಪಶ್ಚಿಮ ಮಹಾರಾಷ್ಟ್ರದ ಎನ್‌ಸಿಪಿಯ ಭದ್ರಕೋಟೆಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭೇದಿಸುವ ಸಂಕಲ್ಪ ತಳೆದಿರುವ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿವ ಸೇನೆ, ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ರಣತಂತ್ರವನ್ನು ರೂಪಿಸಿವೆ.
ಅದೇ ರೀತಿ ತಮ್ಮ ಈ ಭದ್ರ ಕೋಟೆಯನ್ನು ಉಳಿಸಿಕೊಳ್ಳಲು ಪವಾರ್, ಮೋಹಿತೆ ಪಾಟೀಲ್ ಮತ್ತು ದಿವಂಗತ ವಸಂತರಾವ್ ದಾದಾ ಪಾಟೀಲ್ ಕುಟುಂಬಗಳು ಕೂಡ ಟೊಂಕ ಕಟ್ಟಿ ನಿಂತಿವೆ.