ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಾಲ್ಘಾರ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಮಾಜಿ ಸಂಸದ ರಾಜೇಂದ್ರ ಗವಿಟ್ ಗೆ ನೀಡಿದ್ದು, ಇದರಿಂದ ಅಸಮಾಧಾನಗೊಂಡಿರುವ ಹಾಲಿ ಶಾಸಕ ಶ್ರೀನಿವಾಸ್ ವಂಗಾ ದಿಢೀರ್ ನಾಪತ್ತೆಯಾಗಿರುವ ಘಟನೆ ಮಂಗಳವಾರ (ಅ.29) ನಡೆದಿದೆ.
ಕಳೆದ 15 ಗಂಟೆಗಳಿಂದ ಶಿಂಧೆ ಸೇನಾ ಶಾಸಕ ವಂಗಾ ಅವರ ಮೊಬೈಲ್ ಫೋನ್ ನಾಟ್ ರೀಚೆಬಲ್ ಆಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಿಂಧೆ ಬಣ ಟಿಕೆಟ್ ನಿರಾಕರಿಸಿದ ನಂತರ ವಂಗಾ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಕುಟುಂಬ ಸದಸ್ಯರು ಕಳವಳ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಪೊಲೀಸ್ ಅಧಿಕಾರಿಗಳು ವಂಗಾ ಅವರ ನಿವಾಸಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ. ಸೋಮವಾರ ವಂಗಾ ಅವರು, ತಾನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ತೊರೆದು ತಪ್ಪು ಮಾಡಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಪಕ್ಷದ ನಿಷ್ಠಾವಂತ ಕಅರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ ಎಂದು ವಂಗಾ ಆರೋಪಿಸಿದ್ದರು. ಈ ಮೊದಲು ಪಾಲ್ಘಾರ್ ಕ್ಷೇತ್ರದಲ್ಲಿ ಶ್ರೀನಿವಾಸ್ ವಂಗಾ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಊಹಾಪೋಹ ಹರಿದಾಡಿತ್ತು.