ಮುಂಬಯಿ: ಮಹಾರಾಷ್ಟ್ರದ ಉದ್ಗೀರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿಶ್ವಜಿತ್ ಗಾಯಕ್ವಾಡ್ ಅವರು ನಾಮಪತ್ರ ಹಿಂಪಡೆಯಲು ನಿರ್ಧರಿಸಿದ್ದು,ಮಹಾಯುತಿ ಎನ್‌ಸಿಪಿಯ ಸಂಜಯ್ ಬನ್ಸೋಡೆ ಅವರನ್ನು ಬೆಂಬಲಿಸುವುದಾಗಿ ರವಿವಾರ(ನ3) ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಾಯಕ್ವಾಡ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಉಮೇದುವಾರಿಕೆಯನ್ನು ಹಿಂಪಡೆಯಲು ನೀಡಿದ ನಿರ್ದೇಶನವನ್ನು ಪಾಲಿಸಿದ್ದೇನೆ’ ಎಂದು ಹೇಳಿದರು.
ಲಾತೂರ್ ಶಾಸಕ ಸಂಭಾಜಿರಾವ್ ಪಾಟೀಲ್ ನಿಲಂಗೇಕರ್ ಮಾತನಾಡಿ, ಗಾಯಕ್ವಾಡ್ ಅವರು ಪಕ್ಷದ ಸಮರ್ಪಿತ ಕಾರ್ಯಕರ್ತ. ಅವರು ಯಾವಾಗಲೂ ಪಕ್ಷದ ನಿರ್ದೇಶನಗಳನ್ನು ಗೌರವಿಸಿ ಹಿಂದೆ ಸರಿದಿದ್ದಾರೆ. ರಾಜ್ಯದಲ್ಲಿ ಮಹಾಯುತಿ ಸರಕಾರ ಮರು ಸ್ಥಾಪನೆಗಾಗಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು.
ಅಧಿಕೃತ ಮಹಾಯುತಿ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿರುವ ಇತರ ಬಂಡಾಯ ನಾಯಕರೊಂದಿಗೆ ಚರ್ಚೆಗಳು ನಡೆಯುತ್ತಿವೆ ಮತ್ತು ಅವರು ಹಿಂತೆಗೆದುಕೊಳ್ಳುವ ನಿರೀಕ್ಷೆಯಿದೆ. ಲಾತೂರ್ ಜಿಲ್ಲೆಯ ಎಲ್ಲಾ ಆರು ಕ್ಷೇತ್ರಗಳಲ್ಲಿ ನೇರವಾಗಿ ಮಹಾಯುತಿ ಮತ್ತು ಎಂವಿಎ ನಡುವೆ ಚುನಾವಣ ಕದನ ನಡೆಯಲಿದೆ ಎಂದು ನಿಲಂಗೇಕರ್ ಹೇಳಿದರು.
ಎನ್‌ಸಿಪಿ ಅಭ್ಯರ್ಥಿ ಮತ್ತು ಸಚಿವ ಬನ್ಸೋಡೆ ಅವರು ಉದಗೀರ್‌ನಲ್ಲಿ ಗಾಯಕ್‌ವಾಡ್ ಮಾಡಿದ ಕೆಲಸವನ್ನು ಒಪ್ಪಿಕೊಂಡಿದ್ದಾರೆ. ಈ ಸ್ಥಾನವನ್ನು ಎನ್‌ಸಿಪಿಗೆ ಹಂಚಿಕೆ ಮಾಡಲಾಗಿದೆ ಮತ್ತು ಆಡಳಿತ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಸ್ಥಾನವೂ ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ ಎಂದು ಹೇಳಿದರು.
ವಿಶ್ವಜಿತ್ ಗಾಯಕ್ವಾಡ್ ಬಿಜೆಪಿಯ ಮಾಜಿ ಸಂಸದ ಸುನಿಲ್ ಗಾಯಕ್ವಾಡ್ ಅವರ ಸೋದರಳಿಯ. ಅವರು ಲಾತೂರ್‌ನಿಂದ ಲೋಕಸಭೆ ಟಿಕೆಟ್ ಬಯಸಿದ್ದರು, ಆಗಲೂ ಟಿಕೆಟ್ ನೀಡಿರಲಿಲ್ಲ.
ಬಂಡಾಯವೆದ್ದಿರುವ ಕನಿಷ್ಠ 50 ಅಭ್ಯರ್ಥಿಗಳ ಪೈಕಿ ಪ್ರಮುಖ 36 ಮಂದಿ ಮಹಾಯುತಿಯವರು. ಬಿಜೆಪಿಯಿಂದ 19, 16 ಮಂದಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಒಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಎನ್‌ಸಿಪಿ ಯಿಂದ ಬಂಡಾಯವೆದ್ದಿರುವುದು ತಲೆನೋವಾಗಿ ಪರಿಣಮಿಸಿದೆ.