ಛತ್ರಪತಿ ಸಂಭಾಜಿನಗರ: ಬಿಜೆಪಿಯೊಂದಿಗೆ ಮೂರು ದಶಕಗಳ ಮೈತ್ರಿ ಮಾಡಿಕೊಂಡರೂ ಶಿವಸೇನೆ ತನ್ನ ಗುರುತನ್ನು ಕಳೆದುಕೊಂಡಿಲ್ಲ ಮತ್ತು ಈಗ ಅದು ಕಾಂಗ್ರೆಸ್ ಆಗಿ ಬದಲಾಗುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ(ನ9)ಹೇಳಿದ್ದಾರೆ.
ನವೆಂಬರ್ 20 ರ ಮಹಾರಾಷ್ಟ್ರ ಚುನಾವಣೆಗೆ ಮುಂಚಿತವಾಗಿ ಕಲಂನೂರಿ, ಹಿಂಗೋಲಿ ಮತ್ತು ವಸ್ಮತ್ ವಿಧಾನಸಭಾ ಕ್ಷೇತ್ರಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಹಿಂಗೋಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಿವಸೇನಾ (ಯುಬಿಟಿ) ನಾಯಕ ಮಾತನಾಡಿ, ಬಿಜೆಪಿ ಮತ್ತು ಮೈತ್ರಿಕೂಟದ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
“ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇಲ್ಲಿಗೆ ಬಂದು ನಾವು (ಶಿವಸೇನೆ-ಯುಬಿಟಿ) ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ತ್ಯಜಿಸಿದ್ದೇವೆ ಎಂದು ಜನರಿಗೆ ಹೇಳುತ್ತಾರೆ. ನಾನು ಬಿಜೆಪಿ ಬಿಟ್ಟಿದ್ದೇನೆ ಹೊರತು ಸಿದ್ಧಾಂತ ಬಿಟ್ಟಿಲ್ಲ,ಬಾಳ್ ಠಾಕ್ರೆಯವರ ಚಿಂತನೆಯನ್ನು ಬಿಟ್ಟಿಲ್ಲ” ಎಂದರು.
“ಶಿವಸೇನೆ ಕಾಂಗ್ರೆಸ್ ಆಗುವುದು ಹೇಗೆ? ಕಾಂಗ್ರೆಸ್ ನಮ್ಮೊಂದಿಗಿದೆ. 25-30 ವರ್ಷ ಜತೆಗಿದ್ದರೂ ಶಿವಸೇನೆ ಬಿಜೆಪಿಯಾಗಲಿಲ್ಲ. ಈಗ ಅದು ಕಾಂಗ್ರೆಸ್ ಆಗುವುದು ಹೇಗೆ? ಎಂದರು. 2019 ರಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಠಾಕ್ರೆ ಕಡಿದುಕೊಂಡು ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಕೈಜೋಡಿಸಿದ್ದರು.
“ನಾವು ಈಗಾಗಲೇ ಒಗ್ಗಟ್ಟಾಗಿದ್ದೇವೆ, ನಾವು ಒಟ್ಟಿಗೆ ಇರುವ ಮೂಲಕ ಬಿಜೆಪಿಯನ್ನು ನಾಶಪಡಿಸುತ್ತೇವೆ. ಮಹಾರಾಷ್ಟ್ರದಲ್ಲಿ ಚುನಾವಣೆಗಳ ಹೊರತಾಗಿಯೂ, ಗುಜರಾತ್‌ನಲ್ಲಿ ಟಾಟಾ ಏರ್‌ಬಸ್ ಯೋಜನೆಯನ್ನು ಸಂಭ್ರಮದಿಂದ ಉದ್ಘಾಟಿಸಲಾಯಿತು ಎಂದು ಮಹಾರಾಷ್ಟ್ರಕ್ಕೆ ಮೀಸಲಾದ ದೊಡ್ಡ ಕೈಗಾರಿಕಾ ಯೋಜನೆಗಳನ್ನು ಗುಜರಾತ್‌ಗೆ ತಿರುಗಿಸಲಾಗುತ್ತಿದೆ ಎಂದು ಕಿಡಿ ಕಾರಿದರು. ಶಿವಸೇನೆ ತೊರೆದು ಏಕನಾಥ್ ಶಿಂಧೆ ಅವರಿಗೆ ಬೆಂಬಲಿಸಿದ ಶಾಸಕರ ವಿರುದ್ದವೂ ತೀವ್ರ ವಾಗ್ದಾಳಿ ನಡೆಸಿದರು.