Advertisement

ಪಾಶ್ಚಾತ್ಯ ಸಂಸ್ಕೃತಿ ಗುಂಗು ಇನ್ನೂ ಇದೆ

12:06 PM Oct 29, 2018 | Team Udayavani |

ಬೆಂಗಳೂರು: ದೇಶದ ಬಹಳಷ್ಟು ಲೇಖಕರು ಇನ್ನೂ ಪಾಶ್ಚಿಮಾತ್ಯ ಸಂಸ್ಕೃತಿಯ ಗುಂಗಿನಿಂದ ಹೊರ ಬಂದಿಲ್ಲ. ಆದರೆ ಇಂತಹವರ ಮಧ್ಯೆ ಭಾರತೀಯ ನೆಲ ಸಂವೇದನೆ ಪ್ರಜ್ಞೆಯನ್ನು ಕಾಪಾಡಿಕೊಂಡು ಪಾಶ್ಚಿಮಾತ್ಯಕ್ಕೆ ಪರ್ಯಾಯವಾಗಿ ಸಾಹಿತ್ಯ ಕೃಷಿ ಮಾಡುತ್ತಿರುವವರು ಡಾ.ಚಂದ್ರಶೇಖರ ಕಂಬಾರ ಎಂದು ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಬಣ್ಣಿಸಿದರು.

Advertisement

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರರ “ಮಹಮೂದ್‌ ಗಾವಾನ್‌’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಂಬಾರರ ಬರಹಗಳು ಜಾಗತಿಕ ಸಾಹಿತ್ಯಕ್ಕೆ ಪರಿಚಯವಾಗಬೇಕಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆದರೆ ಜಾಗತಿಕ ಸಾಹಿತ್ಯ ಲೋಕದಲ್ಲಿ ಹೊಸ ಅಪ್ಪಟ ದನಿ ಮೊಳಗಿದಂತಾಗುತ್ತದೆ. ಅಷ್ಟರ ಮಟ್ಟಿಗೆ ಕಂಬಾರರ ಸಾಹಿತ್ಯಕ್ಕೆ ಮಹತ್ವ ಇದೆ ಎಂದು ಹೇಳಿದರು.

ಭೋಗ ಮತ್ತು ಅಧಿಕಾರ‌ ಹಲವು ಕಾಲಘಟ್ಟವನ್ನು ಕಾಡಿದ್ದು, ಸಾಹಿತ್ಯದಲ್ಲಿ ಇವೆರಡರ ಹುಡುಕಾಟದಲ್ಲಿ ಕಂಬಾರರು ಇದ್ದಾರೆ. ಲೈಂಗಿಕತೆ ಅವರ ಕಥೆಯ ಸಂಯೋಜನೆಯ ಒಂದು ಭಾಗ ಅಷ್ಟೇ. ಕಂಬಾರರ ಕಾದಂಬರಿ, ನಾಟಕ ಸೇರಿದಂತೆ ಹಲವು ಕೃತಿಗಳಲ್ಲಿ ಇವೆರಡೂ ಪ್ರಧಾನ ವಸ್ತುವಾಗಿವೆ. ಕನ್ನಡದ ವಿಮಶಾì ಲೋಕ ಕಂಬಾರರ ಭೋಗದ ಶಕ್ತಿ ಮತ್ತು ಪರಿಣಾಮಗಳನ್ನು ಹೇಗೆ ಗುರುತಿಸಿದೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆ. ಈ ನಾಟಕದ ಮುನ್ನುಡಿಯಲ್ಲಿ ರಾಜೀವ್‌ ತಾರನಾಥ್‌ ಕೂಡ ಆ ಬಗ್ಗೆ ವಿವರವಾಗಿ ಪ್ರಸ್ತಾಪ ಮಾಡುತ್ತಾರೆ ಎಂದು ವಿವರಿಸಿದರು.

ರಾಜಕಾರಣ ಮತ್ತು ಧರ್ಮಗಳು ಇಂದು ಭ್ರಷ್ಟಗೊಂಡಿದ್ದು, ದೇಶದ ರಾಜಕೀಯ ವ್ಯವಸ್ಥೆಯು ಸರ್ವಾಧಿಕಾರಿ ವ್ಯವಸ್ಥೆ ಕಡೆಗೆ ವಾಲುತ್ತಿದೆ. ನಾಟಕದ ಕಥಾ ನಾಯಕ ಮಹಮೂದ್‌ ಗಾವಾನ್‌ ಆಡಳಿತ ಚತುರನಾಗಿರುವುದರ ಜತೆಗೆ ಸಾಮಾಜಿಕ ಕಾಳಜಿಯುಳ್ಳ, ಸಂಸ್ಕೃತಿ ಮೇಲೆ ಅಪಾರ ಗೌರವವಿದ್ದ ಹಾಗೂ ಧಾರ್ಮಿಕ ಶ್ರದ್ಧೆಯುಳ್ಳವನಾಗಿದ್ದ. ಹೀಗಾಗಿ, ಇಂದಿನ ರಾಜಕಾರಣಿಗಳಿಗೆ ಮಹಮೂದ್‌ ಗಾವಾನ್‌ ಅಂತಹವರು ಮಾದರಿಯಾಗಬೇಕು ಎಂದರು.

ವಿಮರ್ಶಕ ಬಸವರಾಜ ಕಲ್ಗುಡಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ಸಾಹಿತ್ಯದ ನಡುವೆಯೂ ಕಂಬಾರರು ಹೊಸ ಭಾಷೆಯನ್ನು ಸೃಷ್ಟಿಸಿ ಕಟ್ಟಿಕೊಟ್ಟಿದ್ದಾರೆ. ಆದರೆ, ನವ್ಯ ಕಾಲಘಟ್ಟದ ವಿಮರ್ಶಕರು ಕಂಬಾರರ ಸಾಹಿತ್ಯವನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಅವರ ಸಾಹಿತ್ಯದಲ್ಲಿ ಲೈಂಗಿಕತೆಯೇ ಹೆಚ್ಚಿರುತ್ತದೆ ಎಂದು ಟೀಕಿಸಿದ್ದಾರೆ. ಹಾಡು ಮತ್ತು ಲಯ ದೇಹದ ಭಾಷೆಯಾಗಿದ್ದು, ಅಕ್ಷರ ಭಾಷೆಗಿಂತ ಭಿನ್ನವಾಗಿದೆ. ಅದೇ ರೀತಿ ಲಯಕ್ಕೆ ಲೈಂಗಿಕತೆ ಎಂಬ ಪ್ರಕೃತಿ ನಿಯಮವನ್ನು ಅಳವಡಿಸಿದ್ದಾರೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ನಗರ ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಾಯಣ್ಣ ಉಪಸ್ಥಿತರಿದ್ದರು.

Advertisement

ನೋ ಎನ್ನುವ ಧೈರ್ಯ ಮಾಡಲಿಲ್ಲ: ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ನಮ್ಮಲ್ಲಿ ಇತಿಹಾಸವಿತ್ತು. ರಾಮಾಯಣ ಮತ್ತು ಮಹಾಭಾರತಗಳು ಇತಿಹಾಸಗಳಾಗಿವೆ. ಆದರೂ ಇತಿಹಾಸ ಯಾವುದು ಎಂಬುದರ ಬಗ್ಗೆ ನಮ್ಮಲ್ಲಿಯೇ ಗೊಂದಲವಿದೆ. “ನೋ’ ಎನ್ನುವ ಧೈರ್ಯ ತೋರದೆ ಬ್ರಿಟೀಷರು ಹೇಳಿದ ಎಲ್ಲವನ್ನೂ ನಾವು ಒಪ್ಪಿಕೊಂಡುಬಿಟ್ಟಿದ್ದೇವೆ. ಅದನ್ನೇ ಬಂಡವಾಳ ಮಾಡಿಕೊಂಡಿದ್ದ ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಮೂಢನಂಬಿಕೆ ಎಂಬಂತೆ ನಂಬಿಸಿದರು. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಗೆ ದೊಡ್ಡ ಇತಿಹಾಸವಿದೆ. ಇದನ್ನೇ ನಾವು ನಂಬಬೇಕಿದೆ ಎಂದು ಡಾ.ಚಂದ್ರಶೇಖರ ಕಂಬಾರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next