Advertisement

UV Fusion : ಬದಲಾವಣೆಯ ಹರಿಕಾರರು ನಾವಾಗಬೇಕಿದೆ

11:48 AM Sep 18, 2023 | Team Udayavani |

ಜಗತ್ತಿನಲ್ಲಿ ಇಂದ್ರಜಾಲಕ್ಕೆ ಅತೀ ಸಮೀಪದ ಯಾವುದಾದರೊಂದು  ವಿಷಯವಿದ್ದರೆ ಅದು  ಎಂಜಿನಿಯರಿಂಗ್‌ ಅಂತೆ.  ದೈನಂದಿನ ಜೀವನವನ್ನು ಸರಳೀಕರಿಸುವಲ್ಲಿ ಎಂಜಿನಿಯರ್ಸ್‌ ಪ್ರಮುಖವಾಗುತ್ತಾರೆ.  ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುವ ವ್ಯವಸ್ಥೆಗಳು, ರಚನೆಗಳು ಮತ್ತು ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ನಿರ್ವಹಿಸಲು ಎಂಜಿನಿಯರ್‌ಗಳು ತಮ್ಮ ಜ್ಞಾನ, ನಾವಿನ್ಯತೆ  ಮತ್ತು ಸೃಜನಶೀಲತೆಯನ್ನು ಸವೆಸುತ್ತಾರೆ. ಹಾಗಾಗಿಯೇ,  ಸಮಾಜವನ್ನು ರೂಪಿಸುವಲ್ಲಿ ಎಂಜಿನಿಯರ್‌ಗಳ ಪಾತ್ರ ಬಲು ಮಹತ್ವದ್ದು.

Advertisement

ಎಂಜಿನಿಯರಿಂಗ್‌ ಎಂಬುದು ಕೇವಲ ವೃತ್ತಿಪರ ಕೋರ್ಸ್‌ ಮಾತ್ರವಾಗಿ ಉಳಿಯದೇ ಅದೊಂದು ಮನೋಧರ್ಮವಾಗಿಬಿಟ್ಟಿದೆ. ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಎಂಜಿನಿಯರ್‌ ಗಳನ್ನು ಹೊಂದಿದೆ. 2021ರಲ್ಲಿ ಭಾರತವು 15 ಲಕ್ಷ ಎಂಜಿನಿಯರಿಂಗ್‌ ಪದವೀಧರರನ್ನು ಸಮಾಜಕ್ಕೆ ಕೊಟ್ಟಿದೆ.

ಎಂಜಿನಿಯರ್‌ನ ಒಂದು ವಿಶೇಷ ಲಕ್ಷಣವೆಂದರೆ ಅವನು ಬಹುಮುಖೀಯಾಗಿರುವುದು. ಆ ಕಾರಣಕ್ಕೆ ಅವನು ಸರ್ವವ್ಯಾಪಿ. ಆರೋಗ್ಯ, ಕೃಷಿ, ಮನೋರಂಜನೆ ಕೈಗಾರಿಕೆಗಳಲ್ಲಿ ಮತ್ತು ಇನ್ನುಳಿದ ಎಲ್ಲೆಡೆ ಎಂಜಿನಿಯರ್‌ಗಳು ಸಫಲವಾಗಿರುವುದನ್ನು ನೋಡಿದ್ದೇವೆ. ವಿಜ್ಞಾನ, ಗಣಿತ, ವಿನ್ಯಾಸ ಕೌಶಲಗಳು, ಸಂವಹನ ಮತ್ತು ಉದ್ಯಮಶೀಲತೆಯ ಶಿಕ್ಷಣವನ್ನು ಒದಗಿಸುವುದೇ ಇದಕ್ಕೆ ಕಾರಣ. ಭಾರತವು ಜಗತ್ತಿನ ಅತ್ಯುತ್ಕೃಷ್ಟ ಎಂಜಿನಿಯರ್‌ಗಳ ನಾಡು.

ದೇಶಕಂಡ ಎಂಜಿನೀಯರ್‌ ಗಳ ಪಟ್ಟಿಯಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯ ನವರು ಧ್ರುವತಾರೆಯೇ. ವಿಶ್ವೇಶ್ವರಯ್ಯನವರು ಒಬ್ಬ ಮಹಾನ್‌ ಸಿವಿಲ್‌ ಎಂಜಿನಿರ್ಯ, ಅಣೆಕಟ್ಟು ನಿರ್ಮಾತೃ, ಅರ್ಥಶಾಸ್ತ್ರಜ್ಞ, ವಿದ್ವಾಂಸ ಮತ್ತು ರಾಜನೀತಿಜ್ಞರಾಗಿದ್ದರು.

ಸಧ್ಯದ ಕಾಲಘಟ್ಟದಲ್ಲಿ ಭಾರತದ ಉತ್ತರದ ಮೂಲೆಯ ಲದಾಖ್‌ನ್ನು ಕಾರ್ಯಕ್ಷೇತ್ರವಾಗಿರಿಸಿ ವಿಶ್ವದ ಗಮನ ಸೆಳೆದಿರುವ ಸೋನಮ್‌ ವಾಂಗುcಕ್‌ ಒಬ್ಬ ಮೆಕ್ಯಾನಿಕಲ್‌ ಎಂಜಿನಿಯರ್‌. ನಾಲ್ಕುನೂರಕ್ಕೂ ಮಿಕ್ಕಿದ ಪೇಟೆಂಟುಗಳನ್ನು ಹೊಂದಿರುವ ಸೋನಮ್‌ ಲಡಾಖ್‌ನಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಲಾಭರಹಿತ ಸಂಸ್ಥೆಯಾದ ಸ್ಟೂಡೆಂಟ್ಸ್ ಎಜುಕೇಶ‌ನಲ್‌ ಆ್ಯಂಡ್‌ ಕಲ್ಚರಲ್‌ ಮೂವ್ಮೆಂಟ್‌ ಆಫ್‌ ಲಡಾಖ್‌ (ಎಸ್‌ಇಸಿಎಂಒಎಲ್) ನ ಸ್ಥಾಪಕರಾಗಿದ್ದಾರೆ.

Advertisement

ರೈತರಿಗೆ ಬೆಳೆಗಳನ್ನು ಬೆಳೆಯಲು ಸಹಾಯ ಮಾಡುವ ಹವಾಮಾನ-ಸ್ಥಿತಿಸ್ಥಾಪಕ ನೀರಾವರಿ ವ್ಯವಸ್ಥೆಯಾದ ಐಸ್‌ ಸ್ತೂಪದ ಸೃಷ್ಟಿಕರ್ತ ಈ ನಮ್ಮ ಸೋನಮ್‌ ವಾಂಗುcಕ್‌, ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದುದು 2018ರಲ್ಲಿ. ತೂಗುಸೇತುವೆಗಳ ಸರದಾರ ಎಂದೇ ಪ್ರಸಿದ್ಧರಾಗಿರುವ ಗಿರೀಶ ಭಾರದ್ವಾಜರು ದ್ವೀಪಗಳ ನಡುವೆ ಸೇತುವೆಗಳ ಮೂಲಕ ಬೆಸುಗೆಯನ್ನು ನಿರ್ಮಿಸಿದವರು.

ಕರ್ನಾಟಕ, ಕೇರಳ ಮತ್ತು ದೇಶದ  ಅನೇಕ ಹಳ್ಳಿಗಳ ನದಿಗಳನ್ನು ದಾಟಲು 140ಕ್ಕೂ ಅಧಿಕ ತೂಗುಸೇತುವೆಗಳನ್ನು ಸಮರೋಪಾದಿಯಲ್ಲಿ ಕಟ್ಟಿದವರು ಭಾರದ್ವಾಜರು. ಇವರಿಂದ ಅದೆಷ್ಟು ಗ್ರಾಮಗಳ ಚಿತ್ರಣ ಬದಲಾಗಿರಬಹುದು, ನೀವೇ ಊಹಿಸಿ. ಎಂಜಿನಿಯರ್‌ ಆಗಿ ಇವರು ತಳಮಟ್ಟದಲ್ಲಿ ಮಾಡಿದ ಕೆಲಸಕ್ಕೆ ಸರಕಾರವು 2017ರಲ್ಲಿ ಪದ್ಮಶ್ರೀಯಿಂದ ಗೌರವಿಸಿದೆ.

ಹರೀಶ್‌ ಹಂದೆ ಒಬ್ಬ ಭಾರತೀಯ ಸಾಮಾಜಿಕ ಉದ್ಯಮಿಯಾಗಿದ್ದು, 1995 ರಲ್ಲಿ ಸೆಲ್ಕೊ ಇಂಡಿಯಾದ ಸಹ-ಸಂಸ್ಥಾಪಕರಾಗಿದ್ದಾರೆ. ತಮ್ಮ ಸಾಮಾಜಿಕ ಉದ್ಯಮ ಸೆಲ್ಕೊ ಇಂಡಿಯಾ ಮೂಲಕ ಸೌರ ವಿದ್ಯುತ್‌ ತಂತ್ರಜ್ಞಾನವನ್ನು ಬಡವರ ಕೈಗೆ ನೀಡುವ ಪ್ರಾಯೋಗಿಕ ಪ್ರಯತ್ನಗಳಿಗಾಗಿ ಅವರಿಗೆ 2011ರ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೀಡಲಾಯಿತು. ಹಂದೆ ಅವರ ನಾಯಕತ್ವದಲ್ಲಿ, ಸೆಲ್ಕೊ ಇಂಡಿಯಾ ಗ್ರಾಮೀಣ ಭಾರತದ 1 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೌರ ಶಕ್ತಿಯನ್ನು ಒದಗಿಸಿದೆ. ಈ ಜನರಿಗೆ ಶುದ್ಧ, ಕೈಗೆಟುಕುವ ಇಂಧನದವನ್ನು ಒದಗಿಸುವ ಮೂಲಕ ಅವರ ಜೀವನವನ್ನು ಸುಧಾರಿಸಿದೆ.

ಅರವಿಂದ್‌ ಗುಪ್ತಾ ಒಬ್ಬ ಭಾರತೀಯ ಆಟಿಕೆ ಸಂಶೋಧಕ, ಲೇಖಕ, ಅನುವಾದಕ ಮತ್ತು ಎಂಜಿನಿಯರ್‌. ವಿಶ್ವದಾದ್ಯಂತ ಶಾಲೆಗಳು ಮತ್ತು ಮನೆಗಳಲ್ಲಿ ಬಳಸಲಾಗುವ 500 ಕ್ಕೂ ಹೆಚ್ಚು ವಿಜ್ಞಾನ ಕಿಟ್‌ ಗಳು ಮತ್ತು ಆಟಿಕೆಗಳನ್ನು ಅಭಿವೃದ್ಧಿಪಡಿಸಿ ತನ್ಮೂಲಕ ವಿಜ್ಞಾನ ಬೋಧನೆಯ ಬಲವಾದ  ಪ್ರತಿಪಾದಕರು ಅರವಿಂದ ಗುಪ್ತರು.  ಕಸದಿಂದ ಆಟಿಕೆಗಳನ್ನು ತಯಾರಿಸುವ ಅರವಿಂದರ ಈ ಪ್ರಯತ್ನಗಳಿಗಾಗಿಯೇ 2018ರಲ್ಲಿ ಪದ್ಮಶ್ರೀ ದೊರೆತಿದೆ.

ದೆಹಲಿಯ ಮೆಟ್ರೋ, ಕೊಂಕಣ್‌ ರೈಲ್ವೇ ಕಾರ್ಯಗತಗೊಳಿಸಿದ, ಮೆಟ್ರೋ ಮ್ಯಾನ್‌ ಎಂದೇ ಖ್ಯಾತ  ಇ. ಶ್ರೀಧರನ್‌ ಅವಧಿಗೂ ಮೊದಲೇ ಸರಕಾರಿ ಪ್ರಾಜೆಕ್ಟನ್ನು ಯಶಸ್ವಿಯಾಗಿಸಿದವರು. ಮಿಸೈಲ್‌ ಮ್ಯಾನ್‌ ಎ .ಪಿ.ಜೆ. ಅಬ್ದುಲ್‌ ಕಲಾಂ, ರಾಕೇಟ್‌ ವಿಜ್ಞಾನಿ ಸತೀಶ್‌ ಧವನ್, ಇನ್ಫೋಸಿಸ್‌ ನಾರಾಯಣ ಮೂರ್ತಿಯವರು, ಸುಧಾ ಮೂರ್ತಿಯವರು, ಬರಹಗಾರರಾದ ಚೇತನ್‌ ಭಗತ್‌, ಕನ್ನಡದ ವಸುಧೇಂದ್ರ  ಇವರೆಲ್ಲರೂ ಇಂಜಿನಿಯರುಗಳೇ.

ಶ್ರೀನಿವಾಸರಾಘವನ್‌ ವೆಂಕಟರಾಘವನ್‌, ಇ.ಎ.ಎಸ್‌. ಪ್ರಸನ್ನ, ಜಾವಗಲ್‌ ಶ್ರೀನಾಥ್‌, ರವಿಚಂದ್ರನ್‌ ಅಶ್ವಿ‌ನ್‌, ಅನಿಲ್‌ ಕುಂಬ್ಳೆ ಮೊದಲಾದ ಕ್ರಿಕೆಟ್‌ ಲೋಕದ ದುರಂಧರರು ಮೂಲತಃ ಇಂಜಿನಿಯರ್‌‌ಗಳು. ಭಾರತದಲ್ಲಿನ ನಾಗರಿಕ ಸೇವೆಯಲ್ಲಿರುವ ಈಗಿನ ಅಧಿಕಾರಿಗಳಲ್ಲಿ  ಎಂಜಿನಿಯರ್ ಗಳು 60% ರಷ್ಟಿದ್ದಾರಂತೆ.

ಒಬ್ಬ ಎಂಜಿನಿಯರ್‌  ಚುರುಕಾಗುವುದೇ ಕೊನೆಯ ಕ್ಷಣದಲ್ಲಿ. ಸಾಕಷ್ಟು ಸಮಯವನ್ನು ನೀಡಿದರೆ, ಎಂಜಿನಿಯರ್‌ ಅನಂತತೆಯನ್ನೂ ಅತ್ಯುತ್ತಮವಾಗಿಸುತ್ತಾನೆ.  ಎಂಜಿನಿಯರ್‌ನಲ್ಲಿ “ಎ’ ಎಂದರೆ (ಇಲ್ಲದಿರುವ) ಸಂತೋಷವನ್ನು ಸೂಚಿಸುತ್ತದೆ. ಹೀಗೆ ಎಂಜಿನಿಯರ್‌ಗಳ ಮೇಲಿರುವ ಜೋಕುಗಳೂ ಅಷ್ಟೇ ನವೀನ. ಇವೇನೇ ಇರಲಿ, ಭವ್ಯ ಭಾರತದ ಅಭಿವೃದ್ಧಿಯಲ್ಲಿ ಎಂಜಿನಿಯರುಗಳ ಪಾತ್ರ ಬಹುಮುಖ್ಯವಾಗಿದೆ.

ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯ  ಅವರ ಜನ್ಮದಿನದಂದು ಅವರ ಸಾಧನೆಗಳ ನೆನಪಿಗಾಗಿ ದೇಶವು ಪ್ರತಿವರ್ಷ ಸೆಪ್ಟೆಂಬರ್‌ 15 ರಂದು ಎಂಜಿನಿಯರ್ಸ್‌ ದಿನವನ್ನು ಆಚರಿಸುತ್ತದೆ. ಭಾರತದೊಂದಿಗೆ ಶ್ರೀಲಂಕಾ ಮತ್ತು ತಾಂಜೇನಿಯಾದಲ್ಲಿಯೂ ಸೆಪ್ಟೆಂಬರ್‌ 15 ರಂದು ಎಂಜಿನಿಯರ್ಸ್‌ ದಿನವನ್ನು ಆಚರಿಸಲಾಗುತ್ತದೆ. ತನ್ನ ಕಾರ್ಯಶೈಲಿಯಿಂದಲೇ ವಿಶ್ವವ್ಯಾಪಿಯಾಗಿ ಪ್ರಸಿದ್ಧಿಯನ್ನು ಪಡೆದ ವಿಶ್ವೇಶ್ವರಯ್ಯನವರು ಎಲ್ಲರಿಗೂ ಆದರ್ಶಪ್ರಾಯರು.

ವಿಶ್ವನಾಥ ಭಟ್

 ವಿ.ವಿ., ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next